ಭಕ್ತಿಯ ಕೇಂದ್ರವಾದ ಶಕ್ತಿದೇವತೆಗಳ ಬನ

ಭಕ್ತಿಯ ಕೇಂದ್ರವಾದ ಶಕ್ತಿದೇವತೆಗಳ ಬನ
Published on

ಮಾಲಂಬಿ ದಿನೇಶ್ ಶನಿವಾರಸಂತೆ

ಎಲ್ಲ ಜಾತಿ, ಜನಾಂಗ, ಧರ್ಮದವರ ಭಕ್ತಿಯ ಶ್ರದ್ಧಾಕೇಂದ್ರವಾಗಿ ಸುಳುಗಳಲೆ ಕೆರೆ ಚೌಡಮ್ಮ, ಗುಳಿಗ, ಪಂಜುರ್ಲಿ, ನಾಗದೈವ ನೆಲೆನಿಂತಿದ್ದಾರೆ.

ಶನಿವಾರಸಂತೆಯ ಕೂಗಳತೆ ದೂರದಲ್ಲೇ ಇರುವ ಸುಳುಗಳಲೆ ಕಾಲನಿಯಲ್ಲಿರುವ ದೇವರ ಬನಕ್ಕೆ ಸುಮಾರು 600 ವರ್ಷಗಳ ಇತಿಹಾಸವಿದೆ. ಇತ್ತೀಚಿನ ವರ್ಷಗಳವರೆಗೆ ಮರದ ಬುಡದಲ್ಲಿ ಕೂರಿಸಿ ದೈವಗಳಿಗೆ ಪೂಜೆ ಸಲ್ಲಿಸಲಾಗುತ್ತಿತ್ತು. ಆರು ವರ್ಷದ ಹಿಂದೆ ಮಂಗಳೂರು ಭಾಗದ ಅರ್ಚಕರ ಬಳಿ ಆರೂಢ ಪ್ರಶ್ನೆ (ವಿಳ್ಯದೆಲೆಯಲ್ಲಿ)ಕೇಳಿದಾಗ ಪ್ರತ್ಯೇಕ ಗುಡಿ ನಿರ್ಮಿಸಿ ಪೂಜೆ ಸಲ್ಲಿಸುವುದು ಒಳ್ಳೆಯದು ಎಂದು ತಿಳಿಸಿದ ಹಿನ್ನೆಲೆ 2024ರಲ್ಲಿ ದೇವರ ಬನ ನಿರ್ಮಿಸಿ, 2025ರ ಏಪ್ರಿಲ್ ಮೊದಲ ವಾರದಲ್ಲಿ ದೈವಗಳನ್ನು ಮರುಪ್ರತಿಷ್ಠಾಪಿಸಲಾಯಿತು.

ಮಂಗಳೂರಿನ ಪಂಜದ ಅರ್ಚಕ ಲಕ್ಷ್ಮಣ್, ಗಂಗಾಧರ್ ಹಾಗೂ ಸ್ಥಳೀಯ ಅರ್ಚಕ ಮಂಜುನಾಥ್ ಶರ್ಮ ನೇತೃತ್ವದಲ್ಲಿ 6 ಅರ್ಚಕರ ತಂಡದಿಂದ ಚಂಡಿಕಯಾಗ, ಹೋಮ, ತಂಬಿಲಾಸೇವೆ, ಬ್ರಹ್ಮಕಳಸೋತ್ಸವ ಮೂಲಕ ಮಂಟಪ ನಿರ್ಮಾಣ ಮಾಡಿ ಪೀಠದಲ್ಲಿ ಚೌಡಮ್ಮ, ಗುಳಿಗ, ಪಂಜುರ್ಲಿ ಹಾಗೂ ನಾಗ ದೈವವನ್ನು ಪ್ರತಿಷ್ಠಾಪನೆ ಮಾಡಿ ಪೂಜೆ ನೆರವೇರಿಸಿ ಬನಕ್ಕೆ ಹೆಚ್ಚಿನ ಶಕ್ತಿ ತುಂಬಿದ್ದಾರೆ.

ಗುಡಿಗೆ ಪ್ರತಿ ತಿಂಗಳ ಸಂಕ್ರಮಣ ದಿನದಂದು ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಉಳಿದ ದಿನಗಳಲ್ಲಿ ಭಕ್ತರು ತಮ್ಮ ಇಷ್ಟಾರ್ಥ ಈಡೇರಿಕೆಗೆ ಗುಡಿಯ ಹೊರಭಾಗದಲ್ಲಿ ನಿಂತು ಬೇಡಿಕೊಳ್ಳುತ್ತಾರೆ. ಶಕ್ತಿದೇವತೆಗಳ ಮೇಲಿನ ನಂಬಿಕೆ ಹೆಚ್ಚಾದಂತೆ ಭಕ್ತರ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮನೆಗಳಲ್ಲಿ ಯಾವುದೆ ಶುಭ ಸಮಾರಂಭಗಳು ನಡೆದರೂ ಇಲ್ಲಿ ಬಂದು ಪೂಜಿಸಿದರೆ ನಿರ್ವಿಘ್ನದಿಂದ ನಡೆಯುತ್ತದೆ ಎಂಬೂದು ಭಕ್ತರ ನಂಬಿಕೆ.

ವಿಶೇಷ ಪೂಜೆ: ಶಕ್ತಿ ದೇವತೆಗಳ ಬನದಲ್ಲಿ ಪ್ರತಿವರ್ಷ ಏಪ್ರಿಲ್ ತಿಂಗಳಿನಲ್ಲಿ ವಾರ್ಷಿಕ ವಿಶೇಷ ಪೂಜೆ ನಡೆಯುತ್ತದೆ. ಈ ಸಂದರ್ಭ ದೇವರಿಗೆ ಅಲಂಕಾರ ಅಭಿಷೆೇಕಗಳು ಹಾಗೂ ಬಲಿಪೂಜೆ ನಡೆಯುತ್ತದೆ. ಗೌರಿ-ಗಣೇಶ, ಶಿವರಾತ್ರಿ, ದೀಪಾವಳಿ, ಸಂಕ್ರಾಂತಿ, ಯುಗಾದಿಯಂದು ವಿಶೇಷ ಪೂಜೆ ನಡೆಯುತ್ತದೆ. ಪ್ರತಿ ತಿಂಗಳ ಸಂಕ್ರಮಣ ದಿನದಂದು ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಬನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.

ಪೂಜಾ ವಿಧಾನ: ಪಂಜುರ್ಲಿ, ಗುಳಿಗ, ನಾಗ ದೈವ ಹಾಗೂ ಚೌಡಮ್ಮ ದೈವವನ್ನು ಹೂವುಗಳಿಂದ ಅಲಂಕರಿಸಿ, ಹಣ್ಣು-ಕಾಯಿ, ಎಳನೀರು, ಅವಲಕ್ಕಿ ನೈವೇದ್ಯ ಅರ್ಪಿಸಿ ಮಹಾಮಂಗಳಾರತಿ ಮೂಲಕ ಪೂಜಿಸಲಾಗುತ್ತದೆ. ಸಂಕ್ರಮಣ ಹಾಗೂ ಇತರ ದಿನಗಳಲ್ಲಿ ತೀರ್ಥ ಪ್ರಸಾದ ವಿತರಿಸಲಾಗುತ್ತದೆ. ಸಂಕ್ರಮಣ ದಿನದಂದು ಹರಕೆ ಹೊತ್ತವರು ಅನ್ನದಾನ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾರೆ. ವಾರ್ಷಿಕ ಪೂಜೆ ಹಾಗೂ ಸಂಕ್ರಮಣ ಪೂಜೆಯಂದು ಸ್ಥಳೀಯರು ಹಾಗೂ ಕೊಡಗು, ಹಾಸನ, ಬೆಂಗಳೂರು, ಮೈಸೂರು, ಮಂಗಳೂರು ಮುಂತಾದ ಭಾಗಗಳಿಂದ ಭಕ್ತರು ಆಗಮಿಸಿ ಪೂಜಾ ಕೈಂಕರ್ಯದಲ್ಲಿ ತೊಡಗಿಸಿಕೊಳ್ಳುತ್ತಾರೆ.

ವ್ಯಾಜ್ಯಗಳಿಗೆ ದೇವರ ಮೊರೆ: ಹೆಚ್ಚಿನ ಭಕ್ತರು ಕೃಷಿ, ವ್ಯಾಪಾರ, ವಿವಾಹ, ಸಂತಾನಭಾಗ್ಯ, ಉದ್ಯೋಗ, ಜಾಗ ವಿವಾದ, ಹಣಕಾಸು ವಿವಾದ, ವಾಹನ ಖರೀದಿಸಲು ಇನ್ನಿತರ ವಿಷಯಗಳಲ್ಲಿ ಫಲ ಕಾಣಲು ಸನ್ನಿಧಿಗೆ ಬರುತ್ತಾರೆ. ಭಕ್ತಿಯಿಂದ ಬೇಡಿಕೊಂಡರೆ ದೇವರ ಹೂ ಬೀಳಿಸುವ ಮೂಲಕ ಫಲ ಸೂಚಿಸುತ್ತದೆ ಎಂಬೂದು ಭಕ್ತರ ನಂಬಿಕೆ. ಬೇಡಿದ್ದು ಈಡೇರಿದರೆ ಹರಕೆ ರೀತಿಯಲ್ಲಿ ಹೂವಿನ ಅಲಂಕಾರ, ಎಳನೀರು ಅಭಿಷೇಕ, ತ್ರಿಶೂಲ, ಕಡ್ತಾಳೆ (ದೇವರ ಕತ್ತಿ) ಇನ್ನಿತರ ವಸ್ತುಗಳನ್ನು ಅರ್ಪಿಸಲಾಗುತ್ತದೆ.

ಮಾರ್ಗ: ಸನ್ನಿಧಿಗೆ ಮೈಸೂರಿನಿಂದ ಬರುವವರು 150 ಕಿ.ಮೀ. ಕುಶಾಲನಗರ ಮೂಲಕ ಬಾಣವಾರ ಮಾರ್ಗವಾಗಿ ಶನಿವಾರಸಂತೆಗೆ ಬರಬಹುದು. ಹಾಸನದಿಂದ ಬರುವವರು 30 ಕಿಮೀ ಅರಕಲಗೂಡು ಮೂಲಕ ಶನಿವಾರಸಂತೆ ತಲುಪಬಹುದು. ಮಡಿಕೇರಿಯಿಂದ ಸೊಮವಾರಪೇಟೆ ಗೌಡಳ್ಳಿ, ಗುಡುಗಳಲೆ ಮೂಲಕ 60 ಕಿಲೋಮೀಟರ್ ಕ್ರಮಿಸಿ ಶನಿವಾರಸಂತೆ ಕೆರೆ ಚೌಡಮ್ಮ, ಗುಳಿಗ, ಪಂಜುರ್ಲಿ ನಾಗ ಬನವನ್ನು ತಲುಪಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net