

ಬೆಂಗಳೂರು: ಮುಂಗಾರು ಮತ್ತು ಹಿಂಗಾರು ಮಳೆ ಕ್ಷೀಣಿಸಿದ್ದರೂ ರಾಜ್ಯದಲ್ಲಿ ಚಳಿಯ ಪ್ರಮಾಣ ನಿಧಾನವಾಗಿ ಹೆಚ್ಚುತ್ತಿದೆ. ಜನವರಿ ಅಂತ್ಯದವರೆಗೂ ಕೊರೆಯುವ ಚಳಿ ಇರಲಿದೆ. ಉತ್ತರ ಭಾರತದಿಂದ ದಕ್ಷಿಣ ಭಾರತದ ಕಡೆಗೆ ಪ್ರಬಲವಾಗಿ ಶೀತ ಗಾಳಿ ಬೀಸುತ್ತಿರುವ ಪರಿಣಾಮ ನೆಗಡಿ, ಕೆಮ್ಮು ಹಾಗೂ ಕೋವಿಡ್ ಕೇಸ್ಗಳು ಬಾಧಿಸುವ ಆತಂಕ ತಂದೊಡ್ಡಿದೆ.
ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂಜಾನೆ ಮಂಜು ಕವಿದ ವಾತಾವರಣ ಕಂಡುಬರುತ್ತಿದೆ. ಸಾಮಾನ್ಯವಾಗಿ ನವೆಂಬರ್ ಕೊನೆಯ ವಾರ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ಶುರುವಾಗುವ ಚಳಿಗಾಲ ಫೆಬ್ರವರಿವರೆಗೆ ಇರುತ್ತದೆ. ವಾತಾವರಣದಲ್ಲಿ ತೇವಾಂಶ ಕೊರತೆ, ಮಳೆ ಕುಂಠಿತ ಕಾರಣಗಳಿಂದ ಈ ಬಾರಿ ತೀವ್ರ ಚಳಿ ಕಾಣಿಸಿಕೊಳ್ಳುವುದಿಲ್ಲ ಎಂದು ಹವಾಮಾನ ಇಲಾಖೆ ಈ ಹಿಂದೆ ಮುನ್ಸೂಚನೆ ನೀಡಿತ್ತು. ಆದರೆ, ರಾಜ್ಯಾದ್ಯಂತ ಕನಿಷ್ಠ ತಾಪಮಾನದಲ್ಲಿ ಉಷ್ಣಾಂಶ ಕುಸಿತಕೊಂಡು ಚಳಿಯ ತೀವ್ರತೆ ಕಾಣಿಸಿಕೊಳ್ಳುತ್ತಿದೆ. ಬೆಂಗಳೂರಿಗಿಂತ ಕಲ್ಯಾಣ ಕರ್ನಾಟಕ, ಮಧ್ಯ ಕರ್ನಾಟಕ ಭಾಗದಲ್ಲಿ ಚಳಿ ಹೆಚ್ಚಿದೆ. ಕನಿಷ್ಠ ತಾಪಮಾನದಲ್ಲಿ 10 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಧಾರವಾಡ 11, ಬಾದಾಮಿ 12, ಬೀದರ್ 12, ಬೆಂಗಳೂರು 12.3, ಮಂಡ್ಯ 12.6, ಮಡಿಕೇರಿಯಲ್ಲಿ ಕನಿಷ್ಠ ತಾಪಮಾನದಲ್ಲಿ 12.7 ಉಷ್ಣಾಂಶ ದಾಖಲಾಗಿದೆ. ಸಂಜೆ ಹಾಗೂ ಮುಂಜಾನೆ ಇಬ್ಬನಿ ಹೆಚ್ಚಾಗಿ ಬೀಳುತ್ತದೆ. ಮೋಡ ಮುಸುಕಿದ ವಾತಾವರಣ ಇದ್ದಾಗ ಹಗಲಿನಲ್ಲೂ ಚಳಿಯ ಅನುಭವಾಗುತ್ತದೆ. ತಂಪಾದ ಗಾಳಿ ಬೀಸಿದರೂ ಚಳಿ ಜಾಸ್ತಿ ಇರುತ್ತದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ.
ಎಚ್ಚರಿಕೆ ಅಗತ್ಯ
ವಾಯುವಿಹಾರ, ವ್ಯಾಯಾಮಕ್ಕೆ ಹೋಗುವವರು ಎಚ್ಚರಿಕೆ ವಹಿಸಬೇಕು. ಉಸಿರಾಟದ ಸಮಸ್ಯೆ, ಎಲಬು-ಕೀಲು ನೋವಿನಿಂದ ಬಳಲುತ್ತಿರುವವರು ಹೊರ ಹೋಗದಿರುವುದು ಉತ್ತಮ. ಮಕ್ಕಳ ಮತ್ತು ಹಿರಿಯ ನಾಗರಿಕರ ಆರೋಗ್ಯದ ಬಗ್ಗೆ ಗಮನಹರಿಸಬೇಕು. ದೇಹವನ್ನು ಬೆಚ್ಚಗಿರಿಸಿಕೊಳ್ಳುವ ಜತೆಗೆ ಕುದಿಸಿ ಆರಿಸಿದ ನೀರು, ಬಿಸಿ ಹಾಗೂ ಶುಚಿಯಾದ ಆಹಾರ ಸೇವಿಸಬೇಕು. ಫ್ರಿಡ್ಜ್ನಲ್ಲಿಟ್ಟ ಆಹಾರ ಸೇವಿಸಬಾರದು. ಧೂಳಿನಿಂದ ದೂರವಿದ್ದು, ಚೆನ್ನಾಗಿ ಒಣಗಿಸಿದ ಬಟ್ಟೆಯನ್ನು ಮೈ ತುಂಬಾ ಧರಿಸುವುದು ಸೂಕ್ತ.
ಒಣಹವೆ ಮುಂದುವರಿಕೆ: ಕ್ಷೀಣಿಸಿರುವ ಹಿಂಗಾರು ಮಳೆ ಮುಗಿಯಲು ಇನ್ನೂ 7 ದಿನ ಬಾಕಿ ಇದೆ. ಈಗಾಗಲೇ ರಾಜ್ಯಾದ್ಯಂತ ಮಳೆ ಕುಂಠಿತವಾದ ಹಿನ್ನೆಲೆಯಲ್ಲಿ ಒಣಹವೆ ಮುಂದುವರಿದಿದೆ.