ಅಧಿಕಾರಿಗಳ ವರ್ಗಾವಣೆ ಪರ್ವ

mkg
Published on

ಹರಿಹರ: ತಹಸೀಲ್ದಾರ್ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಅವಧಿ ಪೂರ್ವ ವರ್ಗಾವಣೆ ಸಾರ್ವಜನಿಕ ವಲಯದಲ್ಲಿ ಕುತೂಹಲ ಮೂಡಿಸಿದೆ.

ಕೇವಲ 6 ತಿಂಗಳ ಹಿಂದೆ ಆಗಮಿಸಿದ್ದ ತಹಸೀಲ್ದಾರ್ ಪೃಥ್ವಿ ಸಾನಿಕಂ ಅವರ ಸ್ಥಾನಕ್ಕೆ ಗುರುಬಸವರಾಜ್ ಸೋಮವಾರ ಹಾಗೂ 7 ತಿಂಗಳ ಹಿಂದೆ ಆಗಮಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಹನುಮಂತಪ್ಪ ಅವರ ಸ್ಥಾನಕ್ಕೆ ಕೆ.ಟಿ. ನಿಂಗಪ್ಪ ಗುರುವಾರ ಬಂದಿದ್ದಾರೆ.

ಕೆಎಟಿ ಕಡೆಗೆ ಮುಖ: ಅವಧಿಗೆ ಮುನ್ನದ ವರ್ಗಾವಣೆ ಆದೇಶದಿಂದ ಕಂಗೆಟ್ಟ ತಹಸೀಲ್ದಾರ್ ಪೃಥ್ವಿ ಸಾನಿಕಂ ಅವರು ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿ (ಕೆಎಟಿ) ಕದ ತಟ್ಟಿದ್ದು, ಅವಧಿಗೆ ಮುನ್ನ ವರ್ಗಾವಣೆ ಪ್ರಶ್ನೆ ಮುಂದಿಟ್ಟು ಇಲ್ಲಿಯೆ ಮುಂದುವರೆಯುವಂತೆ ಆದೇಶ ಪಡೆದು ಗುರುವಾರ ಮತ್ತೆ ತಾಲೂಕು ಕಚೇರಿಗೆ ಆಗಮಿಸಿ ಕರ್ತವ್ಯ ನಿರ್ವಹಿಸಿದ್ದಾರೆ.

ಪೃಥ್ವಿ ಸಾನಿಕಂ ಕಚೇರಿಗೆ ಬಂದಿರುವ ಸುದ್ದಿ ತಿಳಿದ ನೂತನ ತಹಸೀಲ್ದಾರ್ ಗುರುಬಸವರಾಜ್ ಕಚೇರಿಯಿಂದ ದೂರ ಉಳಿದರು.

ಇನ್ನು ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಕೆ.ಟಿ. ನಿಂಗಪ್ಪ ಬಿಇಒ ಕಚೇರಿಗೆ ಆಗಮಿಸಿ ಅಧಿಕಾರ ವಹಿಸಿಕೊಂಡರು. ಹಾಗಾಗಿ, ಹಿಂದಿನ ಬಿಇಒ ಹನುಮಂತಪ್ಪ ಅವರು ಕೆಎಟಿ ಕದ ತಟ್ಟಿದ್ದಾರೆ ಎನ್ನಲಾಗಿದೆ.

ಸರ್ಕಾರ ಬದಲಾದಾಗ ಅಧಿಕಾರಿಗಳ ವರ್ಗಾವಣೆ ಸಾಮಾನ್ಯವಾದರೂ, ಆಗಮಿಸಿ ಕೇವಲ ಆರೇಳು ತಿಂಗಳಾದ ಅಧಿಕಾರಿಗಳ ವರ್ಗಾವಣೆ ಮಾಡಿಸುವುದು ಅಪರೂಪವೆನಿಸಿದೆ. ಒಬ್ಬ ಅಧಿಕಾರಿ ಒಂದು ಸ್ಥಳದಲ್ಲಿ ಕನಿಷ್ಟ 2 ವರ್ಷ ಸೇವೆ ಸಲ್ಲಿಸಬೇಕು ಎಂದಿದೆ.

ರಾಜಕೀಯ ಮೇಲಾಟ: ಕ್ಷೇತ್ರದಲ್ಲಿ ಶಾಸಕರಾಗಿ ಬಿಜೆಪಿ ಪಕ್ಷದ ಬಿ.ಪಿ. ಹರೀಶ್ ಇದ್ದಾರೆ. ಆಡಳಿತರೂಢ ಕಾಂಗ್ರೆಸ್ ಪಕ್ಷದ ಮಾಜಿ ಶಾಸಕ ಎಸ್. ರಾಮಪ್ಪ, ಪರಾಭವಗೊಂಡ ಅಭ್ಯರ್ಥಿ ನಂದಿಗಾವಿ ಶ್ರೀನಿವಾಸ್ ಸದ್ಯಕ್ಕೆ ತಾಲೂಕಿನಲ್ಲಿ ರಾಜಕೀಯ ಪ್ರಭಾವಿ ವ್ಯಕ್ತಿಗಳಾಗಿ ಪೈಪೋಟಿಗೆ ಬಿದ್ದಿರುವುದು ಅಧಿಕಾರಿಗಳ ವರ್ಗಾವಣೆಗೆ ಹೊಸ ರೂಪ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net