

ಬೇಲೂರು: ಜಗತ್ತು ಕಂಡ ಕೊನೆಯ ಪ್ರವಾದಿ ಮಹಮ್ಮದ್ ಪೈಗಂಬರರ ಬೋಧನೆಗಳು ಇಂದಿಗೂ ಪ್ರಸ್ತುತವಾಗಿದ್ದು, ಅದನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಸ್ವಾಸ್ಥೃ ಸಮಾಜ ನಿರ್ಮಾಣ ಸಾಧ್ಯ ಎಂದು ಜಮಾಅತೆ ಇಸ್ಲಾಮೀ ಹಿಂದ್‌ನ ಕಾರ್ಯದರ್ಶಿ ಮುಜೀಬುರ್ ರೆಹಮಾನ್ ಹೇಳಿದರು.
ಜಮಾಅತೆ ಇಸ್ಲಾಮೀ ಹಿಂದ್‌ನ ವತಿಯಿಂದ ಪ್ರವಾದಿ ಮಹಮ್ಮದ್ ಮಹಾನ್ ಚಾರಿತ್ರ್ಯವಂತ ರಾಜ್ಯವ್ಯಾಪಿ ನಡೆಸಲಾಗುತ್ತಿರುವ ಅಭಿಯಾನದ ಅಂಗವಾಗಿ ಗುರುವಾರ ತಾಲೂಕಿನ ಅರೇಹಳ್ಳಿ ಹಿರಾ ಸೆಂಟರಿನಲ್ಲಿ ಆಯೋಜಿಸಿದ್ದ ಸೀರತ್ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಮ್ಮದ್ ಪೈಗಂಬರರು ಕೇವಲ ಮುಸ್ಲಿಂ ಧರ್ಮದ ಪ್ರವಾದಿಯಾಗಿರದೆ ಇಡೀ ಮಾನವ ಕುಲದ ಪ್ರವಾದಿಯಾಗಿದ್ದಾರೆ. ಪ್ರಪಂಚದಲ್ಲಿರುವ 120 ಕೋಟಿ ಮುಸ್ಲಿಮರು ಪ್ರವಾದಿ ಮಹಮ್ಮದ್ ಪೈಗಂಬರರ ಹೆಸರನ್ನು ಪ್ರತಿನಿತ್ಯ ಜಪಿಸುತ್ತಾ ಆಜಾನ್ ಮಾಡುತ್ತಾರೆ ಎಂದರು.
ಪ್ರವಚನಕಾರ ಉಡುಪಿಯ ಅಕ್ಬರ್ ಅಲಿ ಮಾತನಾಡಿ, ಮನುಷ್ಯನಿಗಾಗಿ ದೇವರು ಜಗತ್ತನ್ನು ಸೃಷ್ಟಿ ಮಾಡಿದ್ದಾನೆ. ಆ ದೇವರು ಪ್ರವಾದಿಗಳನ್ನು ಸೃಷ್ಟಿಸಿ ಮನುಷ್ಯನಿಗೆ ಮಾರ್ಗದರ್ಶನ ನೀಡುವ ಜವಾಬ್ದಾರಿ ನೀಡಿದ್ದಾರೆ. ಇಂದಿನ ಆಧುನಿಕ ಸಮಾಜದಲ್ಲಿ ವ್ಯಕ್ತಿಗಳು ಪರಸ್ಪರ ಭಾವನೆಗಳನ್ನು ಹಂಚಿಕೊಳ್ಳಲು ಸಮಯ ಇಲ್ಲದಾಗಿದೆ. ಮುಂದುವರೆದ ಸಮಾಜದಲ್ಲಿ ತಂದೆ ತಾಯಿಗಳನ್ನು ಮನೆಯಿಂದ ಆಚೆಗಟ್ಟುತ್ತಿರುವ ಕಾರಣ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚುತ್ತಿದೆ. ಜನ್ಮ ಕೊಟ್ಟ ಹೆಣ್ಣಿನ ಮೇಲೆ ದೌರ್ಜನ್ಯ ಪ್ರತಿನಿತ್ಯ ಜರುಗುತ್ತಿವೆ. ಹಾಗಾಗಿ ಉತ್ತಮ ಚಾರಿತ್ರ್ಯ ಹೊಂದಿದ್ದರೆ ಮಾತ್ರ ನಾವು ಮನುಷ್ಯರಾಗಲು ಸಾಧ್ಯ. ಇಲ್ಲವೆಂದಾದಲ್ಲಿ ಪ್ರಾಣಿಗಳಿಗಿಂತ ಕೀಳು ಮಟ್ಟಕ್ಕೆ ಇಳಿಯುತ್ತೇವೆ. ದೇವರು ಬೆಸೆಯುವಂತಹ ಸಂಬಂಧಗಳನ್ನು ಯಾವತ್ತೂ ದೂರ ಮಾಡದೆ ಎಲ್ಲರೂ ಒಟ್ಟಾಗಿ ಬಾಳಿದಾಗ ಮಾತ್ರ ಸಂತೋಷ ಪ್ರಾಪ್ತಿಯಾಗುತ್ತದೆ. ಎಲ್ಲವನ್ನು ಕಲ್ಪಿಸಿಕೊಟ್ಟ ದೇವರಿಗಿಂತ ಮನುಷ್ಯನ ಉದ್ಧಟತನವೇ ಸಮಾಜದಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳಿಗೆ ಕಾರಣ ಎಂದರು.
ಅರೇಹಳ್ಳಿ ರೋಟರಿ ಕ್ಲಬ್ ಅಧ್ಯಕ್ಷ ಕೆ.ಆರ್.ಕಾರ್ತಿಕ್, ಲಯನ್ಸ್ ಸಂಸ್ಥೆ ಅಧ್ಯಕ್ಷ ಕೆ.ಎನ್.ಸಂತೋಷ್ ಕುಮಾರ್, ಕರ್ನಾಟಕ ಕಾಫಿ ಬೆಳೆಗಾರರ ಸಂಘದ ಖಜಾಂಚಿ ಮುಜೀಬ್ ಉರ್ ರೆಹ್ಮಾನ್, ಜಮಾಅತೆ ಇಸ್ಲಾಮೀ ಹಿಂದ್ ಅಧ್ಯಕ್ಷ ಅಬ್ದುಲ್ಲಾ ಉಮ್ರಿ ಸೇರಿದಂತೆ ಪದಾಧಿಕಾರಿಗಳಿದ್ದರು.