

ವಿಜಯವಾಣಿ ಸುದ್ದಿಜಾಲ ಧಾರವಾಡ
ಎಲ್ಲಿ ಶಿಕ್ಷಕರನ್ನು ಗೌರವಿಸಲಾಗುತ್ತದೆಯೋ ಅಲ್ಲಿ ನಾಡಿಗೆ ಭವಿಷ್ಯವಿದೆ. ಒಬ್ಬ ಶಿಕ್ಷಕ ವಿದ್ಯಾರ್ಥಿಗಳಿಗೆ, ಸಮಾಜಕ್ಕೆ ಜ್ಞಾನದ ತುತ್ತು, ಅನುಭವದ ಬುತ್ತಿ ನೀಡುತ್ತಾನೆ. ಶಿಕ್ಷಕರಿಗೆ ಪಗಾರವಷ್ಟೇ ಅಲ್ಲ. ಆರೋಗ್ಯದ ವಿಮೆಯನ್ನೂ ಮಾಡಿಕೊಡಬೇಕು ಎಂದು ಹಿರಿಯ ಸಾಹಿತಿ ಪ್ರೊ. ಮಾಲತಿ ಪಟ್ಟಣಶೆಟ್ಟಿ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಶಿವಗಂಗಾ ಮತ್ತು ವೀರಪ್ಪ ರಾಮಾಪುರ ದತ್ತಿ ನಿಮಿತ್ತ ಇತ್ತೀಚೆಗೆ ಏರ್ಪಡಿಸಿದ್ದ ಆದರ್ಶ ಶಿಕ್ಷಕ ದಂಪತಿ ಪುರಸ್ಕಾರ ಪ್ರದಾನ ಹಾಗೂ ಹೊಸ ಪರಿಪಾಠ ಮತ್ತು ನೇಹಾರಾಣಿ ಕಥೆಗಳು ಕೃತಿಗಳ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಿವೃತ್ತರಾದವರನ್ನು ಕಡೆಗಣಿಸುವುದು ಸಲ್ಲದು. ನಿವೃತ್ತರಲ್ಲಿ ಅಪಾರ ಅನುಭವಗಳಿರುತ್ತವೆ. ನಮ್ಮ ಆಡಳಿತ ವಲಯಗಳಲ್ಲಿ ನಿವೃತ್ತ ಶಿಕ್ಷಕರ ಪ್ರತಿನಿಧಿಗಳು ಇರಬೇಕು. ಎಲ್ಲ ಸೇವಾ ವಲಯಗಳ ಸಲಹಾ ಸಮಿತಿಗಳಲ್ಲಿ ನಿವೃತ್ತ ಶಿಕ್ಷಕರನ್ನು ಬಳಸಿಕೊಳ್ಳಬೇಕು ಎಂದರು.
ಆಕಾಶವಾಣಿ ವಿಶ್ರಾಂತ ನಿರ್ದೇಶಕ ಡಾ. ಬಸು ಬೇವಿನಗಿಡದ ಮಾತನಾಡಿ, ನಮ್ಮ ದೇಶ ಬಹುತ್ವ ದೇಶ. ನಾವೆಲ್ಲ ಅಣ್ಣ-ತಮ್ಮಂದಿರ ರೀತಿ ಬಾಳಬೇಕು. ಇದು ವೈಚಾರಿಕ, ವೈಜ್ಞಾನಿಕ ಚಿಂತನೆಗಳನ್ನು ಅಳವಡಿಸಿಕೊಂಡಾಗ ಮಾತ್ರ ಸಾಧ್ಯ. ಇಂದಿನ ಮಕ್ಕಳು ಹೊಸ, ಹೊಸ ಸಂಗತಿಗಳಿಗೆ ಆಕರ್ಷಿತರಾಗುತ್ತಿದ್ದಾರೆ. ಅವರಿಗೆ ಬೇಕಾಗಿರುವುದು ಮತೀಯ ಚಿಂತನೆ ಅಲ್ಲ. ಹೊಸ ಪರಿಪಾಠ, ನೂತನ ಪರಂಪರೆಯನ್ನು ಹಿರಿಯರಾದ ನಾವು ಕಟ್ಟಿಕೊಡಬೇಕು ಎಂದರು.
ಆದರ್ಶ ಶಿಕ್ಷಕ ದಂಪತಿ ಪುರಸ್ಕಾರ ಸ್ವೀಕರಿಸಿದ ಶಿಕ್ಷಣ ಇಲಾಖೆಯ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿ ಎಸ್.ಎಂ. ಹುಡೇದಮನಿ, ತಹಮೀನಾ ಸೈಯದ ಮಾತನಾಡಿದರು. ಶ್ರೀಧರ ಗಸ್ತಿ ಅವರು ಕೃತಿ ಪರಿಚಯ ಮಾಡಿದರು. ಸತೀಶ ತುರಮರಿ, ಡಾ. ಮಹೇಶ ಹೊರಕೇರಿ, ಡಾ. ಧನವಂತ ಹಾಜವಗೋಳ, ವಿ.ಎನ್. ಕೀರ್ತಿವತಿ, ಪ್ರಮೀಳಾ ಜಕ್ಕಣ್ಣವರ, ಜಗದೀಶ ಬರದೇಲಿ, ಚಂದ್ರಶೇಖರ ಅಮಿನಗಡ, ಶಿಕ್ಷಣ ಇಲಾಖೆ ಅಧಿಕಾರಿಗಳು, ರಾಮಾಪುರ, ಹುಡೇದಮನಿ ಕುಟುಂಬಸ್ಥರು, ಇತರರು ಇದ್ದರು.
ವೀರಣ್ಣ ಒಡ್ಡೀನ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶ್ವೇಶ್ವರಿ ಹಿರೇಮಠ ನಿರೂಪಿಸಿದರು. ಡಾ. ಲಿಂಗರಾಜ ರಾಮಾಪುರ ವಂದಿಸಿದರು.