

ಗೋಕರ್ಣ: ಸವಿಗನ್ನಡ ಎಂಬ ಪಾಯಸ ಇಂದು ಆಂಗ್ಲಪದಗಳ ಬೆರಕೆಯಿಂದಾಗಿ ತನ್ನ ಸವಿರುಚಿ ಕಳೆದುಕೊಳ್ಳುವ ಆತ್ಮ ಭಂಗುರಕ್ಕೀಡಾಗಿದೆ ಎಂದು ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.
ಇಲ್ಲಿನ ಅಶೋಕೆಯಲ್ಲಿ 32ನೇ ಸ್ವಭಾಷಾ ಚಾತುರ್ವಸ್ಯ ವ್ರತನಿಷ್ಠರಾದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅವರು ಭಾನುವಾರ ಆಯೋಜಿಸಿದ್ದ ವಿಶೇಷ ಸವಿಗನ್ನಡ ಗೋಷ್ಠಿಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ನಮ್ಮ ಪೂರ್ವಜರು ಸ್ವಭಾಷೆಯಲ್ಲಿನ ಇಂತಹ ಪರಕೀಯ ಪದ ಮಿಶ್ರಣ ನಿಷೇಧಿಸಿದ್ದರು. ಸ್ವಭಾಷೆಯಲ್ಲಿನ ಇಂತಹ ಕಲಬೆರಕೆಯಿಂದ ಆ ಭಾಷೆಯಲ್ಲಿನ ಕು-ಸಂಸ್ಕಾರಗಳು ನಮ್ಮಲ್ಲಿ ಪ್ರವೇಶ ಪಡೆಯುತ್ತವೆ ಎಂಬ ಚಿಂತನೆ ಅವರದ್ದಾಗಿತ್ತು. ಇಂದು ನಮ್ಮ ಸ್ವಭಾಷೆ ನಮಗೆ ಬೇಡವಾಗಿ ಪಕ್ಕದ ಮನೆಯ ಭಾಷೆ ನಮ್ಮದು ಎಂಬ ವಿಸ್ಮತಿ ಆವರಿಸಿದೆ. ಈ ಸ್ವಭಾಷಾ ವಿಸ್ಮತಿಯನ್ನು ಕಳಚುವ ಉದ್ದೇಶದಿಂದ 32ನೇ ಚಾತುರ್ವಸ್ಯ ಸೂತ್ರವಾಗಿ ಸ್ವಭಾಷೆ ಸ್ವೀಕರಿಸಲಾಗಿದೆ. ಆದ್ದರಿಂದ ಪರಕೀಯ ಪರಂಗಿ ಭಾಷಾ ಪದಗಳು ನಮ್ಮ ಬಾಯಿಂದ ಬಾರದಂತೆ ಇಂದಿನಿಂದಲೇ, ಈ ಚಾತುರ್ವಸ್ಯದಿಂದಲೇ ಶಪಥವನ್ನು ಸರ್ವರೂ ಕೈಗೊಳ್ಳುವಂತಾಗಲಿ ಎಂದು ಆಶೀರ್ವದಿಸಿದರು.
ಭಾಷಾ ತಜ್ಞ ಡಾ.ಶ್ರೀಧರ ಹೆಗಡೆ ಭದ್ರನ್ ಮಾತನಾಡಿ, ಸ್ವಭಾಷೆ ನಮ್ಮ ಸಂಸ್ಕೃತಿ ಮತ್ತು ಪರಂಪರೆಯಾಗಿದೆ. ಯಾವ ಬಗೆಯಲ್ಲಿ ಕಾವ್ಯ ಸಂವಹನ ಮಾಡಬೇಕು ಎನ್ನುವ ವೈವಿಧ್ಯಮಯ ಪ್ರಯತ್ನ ಕನ್ನಡದಲ್ಲಾಗಿರುವುದು ಮಹತ್ವದ್ದಾಗಿದೆ. ಆಡುಮಾತಿನ ಶರಣರ ಕನ್ನಡ ಮತ್ತು ಹಾಡು ಮಾತಿನ ದಾಸರ ಪದಗಳ ಕನ್ನಡ ಇದಕ್ಕೆ ಉದಾಹರಣೆ. ನಮ್ಮ ಕನ್ನಡ ತನ್ನ ಅಸ್ಮಿತೆ ಕಾಪಾಡಿಕೊಳ್ಳಲು ಮಾಡಿಕೊಂಡು ಬಂದ ಈ ಪ್ರಯತ್ನ ಅಪೂರ್ವವಾದುದು ಎಂದರು.
ಅಖಿಲ ಹವ್ಯಕ ಮಹಾಸಭಾ ಅಧ್ಯಕ್ಷ ಡಾ.ಗಿರಿಧರ ಕಜೆ ಮಾತನಾಡಿ, ವಿಶ್ವದ ಸಾವಿರ ಪ್ರಾಚೀನ ಭಾಷೆಗಳ ಕುರಿತು ನಡೆದ ಸಂಶೋಧನೆಯಲ್ಲಿ ನ್ಯೂನತೆಗಳಿಲ್ಲದ ಪರಿಪೂರ್ಣ ಭಾಷೆಗಳೆಂದು ಗ್ರೀಕ್, ಸಂಸ್ಕೃತದ ಜತೆಗೆ ನಮ್ಮ ಕನ್ನಡವನ್ನು ಗುರುತಿಸಲಾಗಿದೆ ಎಂದರು.
ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಹಿರಿಯ ಭಾಷಾ ತಜ್ಞ ಡಾ.ಜಿ.ಎಲ್. ಹೆಗಡೆ ಮಾತನಾಡಿ, ನಮ್ಮ ಬದುಕಿನ ಅಸ್ತಿತ್ವಕ್ಕಾಗಿ ನಮ್ಮ ಕನ್ನಡ ಉಳಿಸಿಕೊಳ್ಳುವ ತೀವ್ರ ಅಗತ್ಯವಿದೆ ಎಂದರು.
ಹಂಪಿ ವಿವಿಯ ಡಾ.ಅಶೋಕಕುಮಾರ ರಂಜೇರೆ ಅವರು ಕಳೆದು ಹೋಗುತ್ತಿರುವ ಕನ್ನಡ ಮತ್ತು ಮುಂದಿನ ಸವಾಲುಗಳು ಬಗ್ಗೆ ಮಾತನಾಡಿದರು. ಸಮಾರಂಭದಲ್ಲಿ ಸ್ವಭಾಷಾ ಚಿಂತನೆಯ ಎರಡನೆಯ ಆವೃತ್ತಿಯನ್ನು ಶ್ರೀಗಳು ಲೋಕಾರ್ಪಣೆ ಮಾಡಿದರು. ಅಖಿಲ ಹವ್ಯಕ ಮಹಾಸಭಾದಿಂದ ಭಾನುವಾರದ ಸರ್ವಸೇವೆ ಸಮರ್ಪಿತವಾಯಿತು. ಭಾಷಾ ಚಿಂತಕ ಡಾ.ಪಾದೇಕಲ್ಲು ವಿಷ್ಣು ಭಟ್ಟ ಗೋಷ್ಠಿ ನಿರ್ವಹಿಸಿದರು.
ಧರ್ಮಸಭೆಯಲ್ಲಿ ಶ್ರೀಮಾತೆ ವಿಜಯಲಕ್ಷ್ಮೀ, ಹವ್ಯಕ ಮಹಾ ಮಂಡಲ ಅಧ್ಯಕ್ಷ ಹರಿಪ್ರಸಾದ ಪೆರಿಯಪ್ಪು, ಚಾತುರ್ವಸ್ಯ ಪ್ರ.ಸಂಚಾಲಕ ಮಂಜುನಾಥ ಸುವರ್ಣಗದ್ದೆ, ವಿವಿವಿ ಆಡಳಿತಾಧಿಕಾರಿ ಡಾ.ಪ್ರಸನ್ನಕುಮಾರ, ಲೋಕಸಂಪರ್ಕಾಧಿಕಾರಿ ಜಿ.ಕೆ. ಹೆಗಡೆ ಮತ್ತಿತರರಿದ್ದರು.