

ಕೆ.ಆರ್.ಪ್ರಸಿನ್ ಹಾಸನ
ಭಾರತದಲ್ಲಿ ಅತೀ ಹೆಚ್ಚು ಕಾಫಿ ಉತ್ಪಾದನೆ ಮಾಡುವುದರಲ್ಲಿ ಕೊಡಗು, ಹಾಸನದ ಸಕಲೇಶಪುರ, ಚಿಕ್ಕಮಗಳೂರು ಪ್ರಮುಖ ಸ್ಥಾನ ಪಡೆದುಕೊಂಡಿವೆ. ಇಲ್ಲಿಯ ಕಾಫಿ ಭಾರತ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲೂ ಅದರದೇ ಆದ ಸ್ಥಾನ ಪಡೆದುಕೊಂಡಿವೆ. ಇಟಲಿ, ಬ್ರೆಜಿಲ್, ಲಂಡನ್ ಬೇರೆ-ಬೇರೆ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದ ಕಾಫಿಯ ಗುಣಮಟ್ಟ ಮೊದಲ ಸ್ಥಾನದಲ್ಲಿ ಬರುತ್ತದೆ. ಇಲ್ಲಿಯ ಹವಾಮಾನ, ನೈಸರ್ಗಿಕವಾಗಿ ಬೆಳೆಯುವ ಕಾಫಿ ತನ್ನದೇ ಸತ್ವ-ಗುಣಮಟ್ಟದ ಜತೆಗೆ ರುಚಿಯನ್ನು ಹೊಂದಿದೆ. ಈ ಕಾರಣಕ್ಕಾಗಿಯೇ ಭಾರತದಲ್ಲಿ ಉತ್ಪಾದನೆಯಾಗುವ ಶೇ.70 ರಷ್ಟು ಕಾಫಿ ಇತರ ರಾಷ್ಟ್ರಗಳಿಗೆ ರಫ್ತಾಗುತ್ತಿದೆ. ಇಲ್ಲಿನ ಗ್ರಾಮೀಣ ಪ್ರದೇಶಗಳಲ್ಲಿ ಬೆಳೆಯುವ ಕಾಫಿ ಅಂತಾರಾಷ್ಟ್ರೀಯ ಮಾನ್ಯತೆ ಪಡೆದಿದೆ.
ಮರದ ನೆರಳಿನಲ್ಲಿ ಬೆಳೆಯುವ ಕಾಫಿಗೆ ಬೇಡಿಕೆ: ಕೊಲಂಬಿಯಾ ಹಾಗೂ ಭಾರತದಲ್ಲಿ ಮಾತ್ರ ಪರಿಸರ ಉಳಿಸಿಕೊಂಡು ಕಾಫಿ ಬೆಳೆಯಲಾಗುತ್ತಿದೆ. ಈ ಕಾಫಿಗೆ ಹೆಚ್ಚಿನ ಬೇಡಿಕೆ ಇದೆ. ಯೂರೋಪಿಯನ್ ಯೂನಿಯನ್ ಕೂಡ ಪರಿಸರದ ನಡುವೆ ಬೆಳೆಸಿದ ಕಾಫಿಯನ್ನು ಮಾತ್ರ ಖರೀದಿಸುವ ನಿರ್ಧಾರ ಹೊಂದಿದೆ. ಅಲ್ಲದೆ ಜಿಯೋ ಟ್ಯಾಗಿಂಗ್ ಹಾಗೂ ಬಾರ್ ಕೋಡ್ ಮೂಲಕ ಕಾಫಿಯ ಉತ್ಪಾದನೆ ಹಂತವನ್ನು ಅರಿಯುವ ನಿರ್ಧಾರ ಹೊಂದಿದೆ.
15 ಸಾವಿರ ಕೋಟಿ ರೂ.ಆದಾಯ: ಕಾಫಿ ರಫ್ತಿನಿಂದ 2024-25ರ ಎಕನಾಮಿಕ್ ಈಯರ್‌ನಲ್ಲಿ ಭಾರತ 15 ಸಾವಿರ ಕೋಟಿ ರೂ. ಆದಾಯ ಗಳಿಸಿದೆ. ಅಲ್ಲದೇ, ದೇಶದ ಒಳಗೆ ಬಳಕೆಯಾದ ಶೇ.30ರಷ್ಟು ಕಾಫಿಯಲ್ಲಿ ಟ್ಯಾಕ್ಸ್ ಮೂಲಕ ಸರ್ಕಾರದ ಬೊಕ್ಕಸಕ್ಕೆ ಅಪಾರ ಗಳಿಕೆಯಾಗಿದೆ. ಕಾಫಿ ಉತ್ಪಾದನೆಯಿಂದ 15 ಲಕ್ಷ ಕೌಶಲರಹಿತ ಜನರು ಉದ್ಯೋಗ ಪಡೆಯುವಂತಾಗಿದೆ.
100ರ ಸಂಭ್ರಮ
1925ರಲ್ಲಿ ಪ್ರಾರಂಭವಾದ ಬಾಳೆಹೊನ್ನೂರಿನ ರಾಷ್ಟ್ರೀಯ ಕಾಫಿ ಸಂಶೋಧನಾ ಸಂಸ್ಥೆ ಈಗ ನೂರರ ಸಂಭ್ರಮದಲ್ಲಿದೆ. ನವೆಂಬರ್ ತಿಂಗಳಲ್ಲಿ 3 ದಿನ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮೈಸೂರು ರಾಜರ ಆಡಳಿತ ಸಮಯದಲ್ಲಿ ಸಂಶೋಧನೆ ಉದ್ದೇಶದಿಂದ ಈ ಸಂಸ್ಥೆಯನ್ನು ಆರಂಭಿಸಲಾಯಿತು. ಸದ್ಯ ಟಿಷ್ಯು ಕಲ್ಚರ್ ಕಾಫಿ ಸೇರಿದಂತೆ ವಿವಿಧ ಸಂಶೋಧನೆಗಳನ್ನು ಸಂಸ್ಥೆಯ ಮೂಲಕ ನಡೆಸಲಾಗುತ್ತಿದೆ.
2 ವರ್ಷ ದರ ಇಳಿಕೆಯ ಭಯ ಇಲ್ಲ
ಭಾರತದಲ್ಲಿ ಕೆಫೆ ಕಲ್ಚರ್ ಪದ್ಧತಿ ಜಾಸ್ತಿಯಾಗುತ್ತಿರುವುದರಿಂದ 2 ವರ್ಷ ಕಾಫಿಗೆ ಬೇಡಿಕೆ ಹಾಗೂ ದರ ಇರುತ್ತದೆ ಎಂಬ ವಿಶ್ವಾಸ ಇದೆ ಎಂದು ಕರ್ನಾಟಕ ಗ್ರೋಯರ್ಸ್ ಫೆಡರೇಷನ್ ಪ್ರಧಾನ ಕಾರ್ಯದರ್ಶಿ ಟಿ.ಪಿ.ಸುರೇಂದ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಭಾರತೀಯ ಕಾಫಿ ಶೇ.70ರಷ್ಟು ವಿವಿಧ ರಾಷ್ಟ್ರಗಳಿಗೆ ರಫ್ತಾದರೂ ಅಮೆರಿಕ ಅಧ್ಯಕ್ಷ ಟ್ರಂಪ್ ನಿರ್ಧಾರಗಳು ಭಾರತದ ಕಾಫಿ ಬೆಳೆಗಾರರ ಮೇಲೆ ಪರಿಣಾಮ ಬೀರದು. ಅಮೆರಿಕಕ್ಕೆ ಭಾರತ ಕಡಿಮೆ ಪ್ರಮಾಣದಲ್ಲಿ ಕಾಫಿ ರಫ್ತು ಮಾಡುತ್ತಿದ್ದು, ಯೂರೋಪ್, ಕೆನಡಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ನಲ್ಲಿ ಹೆಚ್ಚಿನ ಮಾರುಕಟ್ಟೆ ಹೊಂದಿದೆ ಎಂದು ವಿವರಿಸಿದ್ದಾರೆ.
5 ಸಾವಿರ ಕಪ್ ಕಾಫಿ ವಿತರಣೆ
ಅ.1ರಂದು ಅಂತಾರಾಷ್ಟ್ರೀಯ ಕಾಫಿ ದಿನದ ಅಂಗವಾಗಿ ಕರ್ನಾಟಕ ಗ್ರೋಯರ್ಸ್ ಫೆಡರೇಷನ್ ವತಿಯಿಂದ ಸಕಲೇಶಪುರದಲ್ಲಿ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಸಕಲೇಶಪುರಸ್ವಾಮಿ ದೇವಾಲಯದಿಂದ ಶ್ರೀ ಬಸವೇಶ್ವರ ಪುತ್ಥಳಿವರೆಗೆ ಕಾಫಿ ನಡಿಗೆ ಜಾಥಾ ಹಮ್ಮಿಕೊಳ್ಳಲಾಗಿದೆ. ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಹಿರಿಯ ಬೆಳೆಗಾರರಿಗೆ ಸನ್ಮಾನ, ಉತ್ತಮವಾಗಿ ಕಾಫಿ ವಿತರಿಸುವ ಕೆಫೆಗಳಿಗೆ ಸರ್ಟಿಫಿಕೇಟ್ ನೀಡುವ ಕಾರ್ಯಕ್ರಮ ಹಾಗೂ ಪ್ರವಾಸಿಗರ ಗಮನ ಸೆಳೆದು ಬಿಸಿಬಿಸಿಯಾದ ಕಾಫಿ ನೀಡುವ ಮೂಲಕ ನೈಜ ಕಾಫಿ ಪರಿಚಯಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸುಮಾರು 5 ಸಾವಿರ ಕಪ್ ಕಾಫಿಯನ್ನು ಉಚಿತವಾಗಿ ನೀಡುವ ಗುರಿ ಹೊಂದಲಾಗಿದೆ.
ವೈದ್ಯರ ಸಲಹೆ
ನಿಯಮಿತವಾಗಿ ಕಾಫಿ ಸೇವನೆ ಹೃದಯದ ಒತ್ತಡ ಕಡಿಮೆ ಮಾಡುತ್ತದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ಲಿವರ್‌ನ ಆರೋಗ್ಯಕ್ಕೂ ಕಾಫಿ ಸೇವನೆ ಒಳ್ಳೆಯದು ಎಂಬ ಅಭಿಪ್ರಾಯ ವೈದ್ಯರದ್ದು.
ಟ್ರೇಡಿಂಗ್‌ನಲ್ಲಿ ಮೂರನೇ ಸ್ಥಾನ
ಕೇವಲ ಒಂದೇ ವಾರದಲ್ಲಿ ಕಾಫಿ ಹತ್ತಕ್ಕೂ ಹೆಚ್ಚು ಕೈ ಬದಲಾವಣೆ ಮಾಡುತ್ತದೆ. ಪೆಟ್ರೋಲಿಯಂ, ಚಿನ್ನ ಬಿಟ್ಟರೆ ಅತಿ ಹೆಚ್ಚು ಟ್ರೇಡಿಂಗ್ ಆಗುವುದು ಕಾಫಿ ಎಂಬುದೂ ವಿಶೇಷ.