

ಕಾರವಾರ: ಬಂದರು ಯೋಜನೆ ಕೈಬಿಟ್ಟು, ಮೀನುಗಾರರ ಪರ ಯೋಜನೆ ಜಾರಿಗೊಳಿಸುವಂತೆ ಮೀನುಗಾರಿಕೆ ಸಚಿವ ಮಂಕಾಳ ವೈದ್ಯ ಅವರಿಗೆ ಎರಡು ವರ್ಷದಿಂದ ಮನವಿ ಮಾಡುತ್ತಿದ್ದೇವೆ. ಈವರೆಗೆ ಅವರು ಮೀನುಗಾರರ ಪರ ಸ್ಪಂದಿಸಿಲ್ಲ ಎಂದು ಕಾಂಗ್ರೆಸ್ ಮೀನುಗಾರರ ವಿಭಾಗದ ಜಿಲ್ಲಾ ಘಟಕದ ಅಧ್ಯಕ್ಷ ಗಣಪತಿ ಮಾಂಗ್ರೆ ಆರೋಪಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ವಾಣಿಜ್ಯ ಬಂದರು ಸ್ಥಾಪನೆಗೆ ಮೀನುಗಾರರನ್ನು ಹತ್ತಿಕ್ಕಲು ಸಚಿವ ಮಂಕಾಳ ವೈದ್ಯ ಅವರೇ ಕಾರಣ. ಅವರು ಆಡಳಿತ ವ್ಯವಸ್ಥೆಯ ಮೂಲಕ ಮೀನುಗಾರರ ಧ್ವನಿ ಅಡಗಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.
ಮೀನುಗಾರರ ಮೇಲೆ ದಬ್ಬಾಳಿಕೆ ಮಾಡುವಲ್ಲಿ ಸಚಿವರ ಕೈವಾಡವಿದೆ. ಮೀನುಗಾರರ ಮೇಲೆ ಹಾಕಿರುವ ಎಲ್ಲ ಪ್ರಕರಣಗಳನ್ನು ಹಿಂಪಡೆಯಬೇಕು. ಜಿಲ್ಲೆಯ ಕಡಲ ತೀರಗಳಲ್ಲಿ ಯೋಜಿಸಿರುವ ಎಲ್ಲ ವಾಣಿಜ್ಯ ಬಂದರು ಕಾಮಗಾರಿಗಳನ್ನು ಕೈಬಿಟ್ಟು ಜಿಲ್ಲೆಯ ಮೀನುಗಾರರಿಗೆ ಮೀನುಗಾರಿಕೆಯನ್ನು ಮಾಡಿ ನೆಮ್ಮದಿಯಿಂದ ಜೀವನ ಸಾಗಿಸಲು ಅನುವು ಮಾಡಿಕೊಡಬೇಕು ಎಂದರು.
ನೌಕಾನೆಲೆ, ಬಂದರು ಯೋಜನೆಗೆ ಈಗಾಗಲೆ ಜಿಲ್ಲೆಯಲ್ಲಿ 21 ಹಳ್ಳಿಗಳನ್ನು ಕಳೆದುಕೊಂಡಿದ್ದೇವೆ. ಸಾಂಪ್ರದಾಯಿಕ ಮೀನುಗಾರಿಕೆ ನಡೆಸುವವರಿಗೆ ಸೂಕ್ತ ನೆಲೆಯೇ ಇಲ್ಲದ ಸ್ಥಿತಿ ಇದೆ. ಹೊಸದಾಗಿ ವಾಣಿಜ್ಯ ಬಂದರು ನಿರ್ಮಿಸಿದರೆ ಮೀನುಗಾರರ ಜೀವನ ಕಷ್ಟವಾಗಲಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಕೇಣಿ, ಹೊನ್ನಾವರದಲ್ಲಿ ವಾಣಿಜ್ಯ ಬಂದರು ಸ್ಥಾಪನೆ, ಕಾರವಾರ ವಾಣಿಜ್ಯ ಬಂದರು ವಿಸ್ತರಣೆ ಯೋಜನೆ ಕೈಬಿಡಬೇಕು. ಸಾಗರ ಮಾಲಾ ಯೋಜನೆಯಡಿ ವಾಣಿಜ್ಯ ಬಂದರು ಕಾಮಗಾರಿಯನ್ನು ವಿಸ್ತರಿಸಲು ಸಿದ್ಧತೆ ನಡೆದಿದೆ. ವಿವಿಧ ತಾಲೂಕುಗಳಲ್ಲಿ ಒತ್ತಡ ಹೇರುವ ಮೂಲಕ ವಾಣಿಜ್ಯ ಬಂದರುಗಳನ್ನು ನಿರ್ಮಿಸಲು ಮುಂದಾಗಲಾಗಿದೆ. ಈ ಯೋಜನೆಗಳಿಗಾಗಿ ಮೀನುಗಾರರ ಮೇಲೆ ದಬ್ಬಾಳಿಕೆ ನಡೆಸಲಾಗುತ್ತಿದೆ ಎಂದರು.
ಹೊನ್ನಾವರ, ಕೇಣಿ, ಇನ್ನಿತರ ಸಮುದ್ರ ತೀರಗಳಲ್ಲಿ ಬಲವಂತವಾಗಿ ಮೀನುಗಾರರನ್ನು ಒಕ್ಕಲೆಬ್ಬಿಸಿ ವಾಣಿಜ್ಯ ಬಂದರುಗಳನ್ನು ನಿರ್ಮಿಸಲು ಯತ್ನಿಸಿದಾಗ ಮೀನುಗಾರರೆಲ್ಲ ಪ್ರತಿಭಟನೆ ನಡೆಸಿದ್ದಾರೆ. ಆ ಸಂದರ್ಭಗಳಲ್ಲಿ ಮೀನುಗಾರ ಮುಖಂಡರ ಹಾಗೂ ಹೋರಾಟದ ಮುಂದಾಳತ್ವವನ್ನು ವಹಿಸಿದ್ದವರ ಮೇಲೆ ಜಿಲ್ಲಾಡಳಿತವು ಪೊಲೀಸರ ನೆರವಿನಿಂದ ಹಿಂಸೆ ನೀಡಿ, ಪ್ರಕರಣಗಳನ್ನು ದಾಖಲಿಸಿ ಜೈಲಿಗೆ ಅಟ್ಟಿದೆ. ಮೀನುಗಾರರ ಸಂಘಟನೆಗಳ ನಾಯಕರ ಮೇಲೆ ಕಂಪನಿಗಳಿಂದ ಹಣವನ್ನು ಪಡೆದಿದ್ದಾರೆಂದು ಸುಳ್ಳು ಆರೋಪ ಹೊರಿಸುವ ಮೂಲಕ ಸಂಘಟನೆಯನ್ನು ದುರ್ಬಲಗೊಳಿಸಿ, ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು.
ಕಾರವಾರ ವಾಣಿಜ್ಯ ಬಂದರು ವಿಸ್ತರಣೆಯಿಂದ ಟ್ಯಾಗೋರ ಕಡಲ ತೀರಕ್ಕೆ ಧಕ್ಕೆ ಉಂಟಾಗಲಿದೆ. ಪ್ರವಾಸಿಗರು, ಸಾರ್ವಜನಿಕರು ವಾಯುವಿಹಾರಕ್ಕೆ ಅವಲಂಬಿಸಿರುವ ಏಕೈಕ ಕಡಲತೀರ ನಾಶವಾಗುವ ಆತಂಕವಿದೆ ಎಂದರು.
ನಗರಸಭೆ ಸದಸ್ಯ ರಾಜೇಶ ಮಾಜಾಳಿಕರ್, ಗೌರೀಶ ಉಳ್ವೇಕರ್, ಸಂಪತ್ ಹರಿಕಂತ್ರ, ಸುರೇಶ ತಾಂಡೇಲ, ಉದಯ ಬಾನಾವಳಿ, ದಾಮೋದರ ತಾಂಡೇಲ, ಪ್ರಕಾಶ ಹರಿಕಂತ್ರ, ರಾಮದಾಸ, ವಾಮನ ಹರಿಕಂತ್ರ, ಇತರರು ಇದ್ದರು.