

ರಬಕವಿ/ಬನಹಟ್ಟಿ: ಜಲಾಶಯಗಳ ಅಧಿಕಾರಿಗಳ ನಡುವೆ ನಿತ್ಯ ನೀರಿನ ಅಂಕಿ- ಅಂಶ ವಿನಿಮಯ, ನೀರಿನ ಮಟ್ಟದ ಕಡೆ ಸತತ ನಿಗಾ, ನೀರಿನ ಲೆಕ್ಕಾಚಾರ ಆಧಾರದಲ್ಲಿ ಹಿಪ್ಪರಗಿ ಜಲಾಶಯದ ನೀರನ್ನು ಜಲಾಶಯದಿಂದ ಹೊರಬಿಟ್ಟರೂ ಕೃಷ್ಣಾ ನದಿ ಪಾತ್ರದಲ್ಲಿ ಸದ್ಯ ಯಾವುದೇ ಮಹಾಪೂರ ಘಟಿಸಿಲ್ಲ. ಆದರೆ ಯಾವುದೇ ಸಂದರ್ಭದಲ್ಲಿ ಪ್ರವಾಹ ಬರುವ ನೀರೀಕ್ಷೆ ಇದ್ದು, ಅದಕ್ಕೆ ತಾಲೂಕು ಆಡಳಿತ ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ.
ತಾಲೂಕಿನ ಹಿಪ್ಪರಗಿ ಜಲಾಶಯಕ್ಕೆ ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಿಂದ, ಅಲ್ಲಿನ ಕೃಷ್ಣಾ ನದಿಯ ಎಲ್ಲ ಜಲಾಶಯಗಳ ನೀರಿನ ಸ್ಥಿತಿಗತಿ, ಸುರಿಯುತ್ತಿರುವ ಮಳೆ ಬಗ್ಗೆ ನಿತ್ಯವೂ ನಿಗಾ ವಹಿಸಿ ಹಿಪ್ಪರಗಿ ಜಲಾಶಯದ ಎಲ್ಲ 22 ಗೇಟ್‌ಗಳ ಮೂಲಕ ನೀರನ್ನು ಹೊರಬಿಡಲಾಗುತ್ತಿದೆ.
ಜಲಾಶಯದ ನೀರಿನ ಮಟ್ಟ 522.3 ಮೀಟರ್‌ನಷ್ಟಿದ್ದು, 1.25 ಲಕ್ಷ ಕ್ಯೂಸೆಕ್‌ನಷ್ಟು ನೀರಿನ ಒಳಹರಿವಿದ್ದು, ಬಂದಷ್ಟೇ ನೀರನ್ನು ಎಲ್ಲ ಗೇಟ್‌ಗಳ ಮೂಲಕ ಹೊರ ಹಾಕಲಾಗುತ್ತಿದೆ. ಸುತ್ತಲೂ ಪ್ರದೇಶದಲ್ಲಿ ಪ್ರವಾಹದ ಯಾವುದೇ ಭೀತಿಯಿಲ್ಲವೆಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಇದು 2 ಲಕ್ಷ ಕ್ಯೂಸೆಕ್‌ನಷ್ಟು ಹೆಚ್ಚಾದಾಗ ಪ್ರವಾಹ ಎದುರಿಸಬೇಕಾಗುತ್ತದೆ ಎಂದು ಹೇಳಲಾಗುತ್ತಿದೆ.