ಸಂತೆ ಮಾರುಕಟ್ಟೆಯಲ್ಲಿಲ್ಲ ವ್ಯವಸ್ಥೆ

ಶನಿವಾರಸಂತೆ ಸಂತೆ ಮಾರುಕಟ್ಟೆ ಸ್ಥಿತಿ.
ಶನಿವಾರಸಂತೆ ಸಂತೆ ಮಾರುಕಟ್ಟೆ ಸ್ಥಿತಿ.
Published on

ಶನಿವಾರಸಂತೆ: ಪಟ್ಟಣ ದಿನದಿಂದ ದಿನಕ್ಕೆ ಅಭಿವೃದ್ಧಿ ಹೊಂದುತ್ತಿದೆಯಾದರೂ ಕೆಲವೊಂದು ಕುಂದುಕೊರತೆ ಈಗಲೂ ಎದ್ದು ಕಾಣುತ್ತಿದೆ. ಪಟ್ಟಣದ ಸಂತೆ ಮಾರುಕಟ್ಟೆ ವಿಶಾಲ ಜಾಗ ಹೊಂದಿದೆಯಾದರೂ ಮಾರುಕಟ್ಟೆಯಲ್ಲಿ ಸರಿಯಾದ ವ್ಯವಸ್ಥೆ ಇಲ್ಲದಿರುವುದರಿಂದ ಸಂತೆಗೆ ಬರುವ ಗ್ರಾಹಕರು ಮತ್ತು ವ್ಯಾಪಾರಸ್ಥರು ಅವಸ್ಥೆ ಪಡುವಂತಾಗಿದೆ.

ನಂ. 1 ಕನ್ನಡ ದಿನಪತ್ರಿಕೆ ವಿಜಯವಾಣಿ ವತಿಯಿಂದ ಗುರುವಾರ ಶನಿವಾರಸಂತೆಯಲ್ಲಿ ಆಯೋಜಿಸಿದ್ದ ಸಂವಾದದಲ್ಲಿ ನಾಗರಿಕರು ಅಳಲು ತೋಡಿಕೊಂಡರು.

ಶನಿವಾರಸಂತೆ ಗ್ರಾಪಂಗೆ ಒಳಪಡುವ ಸಂತೆ ಮಾರುಕಟ್ಟೆ ಜಿಲ್ಲೆಯ ದೊಡ್ಡ ಸಂತೆ ಮಾರುಕಟ್ಟೆಗಳಲ್ಲಿ ಒಂದಾಗಿದೆ. ಹೋಬಳಿ ಸೇರಿದಂತೆ ಪಕ್ಕದ ಹಾಸನ ಜಿಲ್ಲೆಯ ಸಕಲೇಶಪುರ, ಅರಕಲಗೂಡು ಮುಂತಾದ ಕಡೆಗಳಿಂದ ವ್ಯಾಪಾರಸ್ಥರು ಇಲ್ಲಿನ ಮಾರುಕಟ್ಟೆಗೆ ಬಂದು ವ್ಯಾಪಾರ ವಹಿವಾಟು ಮಾಡುತ್ತಾರೆ. ಶನಿವಾರ ಇಲ್ಲಿ ಸಂತೆ ನಡೆಯುತ್ತದೆ. ವ್ಯಾಪಾರಸ್ಥರು, ಗ್ರಾಹಕರು ಸೇರಿದಂತೆ ಸುಮಾರು 20,000ಕ್ಕಿಂತ ಹೆಚ್ಚಿನ ಜನರು ಸೇರುತ್ತಾರೆ. ಶುಂಠಿ, ಹಸಿ ಮೆಣಸು, ಸಿಹಿ ಗೆಣಸು, ಬಾಳೆಕಾಯಿ, ನಿಂಬೆಹುಳಿ, ದಗ್ಗುಳಿ ಸೇರಿದಂತೆ ವಿವಿಧ ತರಕಾರಿ ವ್ಯಾಪಾರ ನಡೆಯಲಿದೆ.

ಮಾರುಕಟ್ಟೆಯಲ್ಲಿ ಸರಿಯಾದ ವ್ಯವಸ್ಥೆ ಇಲ್ಲದೆ ಮಳೆಗಾಲದಲ್ಲಿ ವ್ಯಾಪರಸ್ಥರು ಮತ್ತು ಗ್ರಾಹಕರು ಹೈರಾಣಾಗುತ್ತಾರೆ. ಅಲ್ಲದೆ ಇಲ್ಲಿ ಒಂದೆರಡು ಶೀಟ್ ಅಳವಡಿಸಿದ ಮಳಿಗೆಗಳನ್ನು ಹೊರತುಪಡಿಸಿದರೆ ಇನ್ನುಳಿದಂತೆ ಸಿಮೆಂಟ್ ಸ್ಲಾೃಬ್ಗೆ ಪ್ಲಾಸ್ಟಿಕ್ ಟೆಂಟ್, ಮರದ ಕಂಬ ನೆಟ್ಟು ಅದಕ್ಕೆ ಪ್ಲಾಸ್ಟಿಕ್ ಹೊದಿಕೆ ಹಾಕಿ ವರ್ತಕರು ವ್ಯಾಪಾರ ಮಾಡುತ್ತಾರೆ. ಶುಂಠಿ, ಹಸಿ ಮೆಣಸು ವ್ಯಾಪಾರಕ್ಕೆ ಪ್ರತ್ಯೇಕ ಮಳಿಗೆ ವ್ಯವಸ್ಥೆ ಇಲ್ಲದೆ ಖಾಲಿ ಜಾಗದಲ್ಲಿ ವ್ಯಾಪಾರ ಮಾಡುವಂತಾಗಿದೆ. ಮಳೆಗಾಲದಲ್ಲಿ ಮಳಿಗೆಗಳಿಗೆ ಅಳವಡಿಸಿದ ಪ್ಲಾಸ್ಟಿಕ್ ಹೊದಿಕೆ ಗಾಳಿಗೆ ಹಾರಿ ಹೋಗುತ್ತದೆ ಎಂದು ನಿವೃತ್ತ ಸೈನಿಕ ಕುಮಾರ್ ಸಮಸ್ಯೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.

ಮಾರುಕಟ್ಟೆಯೊಳಗೆ ಕಾಂಕ್ರೀಟ್ ರಸ್ತೆ, ಚರಂಡಿ ವ್ಯವಸ್ಥೆ ಇಲ್ಲದೆ ಮಳೆಗಾಲದಲ್ಲಿ ಇಡೀ ಪ್ರಾಂಗಣ ಕೆಸರಿನಂತಾಗುತ್ತದೆ. ಇದರಿಂದ ಸಂತೆ ಬರುವ ಗ್ರಾಹಕರಿಗೆ ಸಮಸ್ಯೆಯಾಗುತ್ತಿದೆ. ಸಂತೆ ಮಾರುಕಟ್ಟೆಯನ್ನು ಅಭಿವೃದ್ಧಿಪಡಿಸುವ ಕುರಿತು ಸ್ಥಳೀಯ ಗ್ರಾಪಂ ಆಡಳಿತ ಮಂಡಳಿ ಈ ಹಿಂದೆ ಇದ್ದ ಶಾಸಕರಿಗೆ ಮನವಿ ನೀಡಿದೆಯಾದರೂ ಪ್ರಯೋಜನವಾಗಿಲ್ಲ. ಮಾರುಕಟ್ಟೆಯನ್ನು ಆಧುನಿಕವಾಗಿ ಅಭಿವೃದ್ಧಿ ಪಡಿಸಲು ಸುಮಾರು 2 ಕೋಟಿ ರೂ. ವೆಚ್ಚವಾಗಲಿದೆ. ಶಾಸಕರ ಅನುದಾನದಲ್ಲಿ ಮಾರುಕಟ್ಟೆಯನ್ನು ಅಭಿವೃದ್ಧಿಪಡಿಸುವ ಅವಕಾಶ ಇರುವುದರಿಂದ ಈಗಿನ ಗ್ರಾ.ಪಂ.ಆಡಳಿತ ಮಂಡಳಿ ಶಾಸಕರಿಗೆ ಪ್ರಸ್ತಾವನೆ ಸಲ್ಲಿಸಲು ಮುಂದಾಗಿದೆ. ಈ ಕುರಿತು ಸರ್ಕಾರ ಮತ್ತು ಶಾಸಕರು ಕ್ರಮವಹಿಸಬೇಕಿದೆ ಎಂದು ಸ್ಥಳೀಯ ಮಣಿ ಹೇಳಿದರು.

ನಮ್ಮ ಗ್ರಾಪಂಗೆ ಸೇರಿದ ಸಂತೆ ಮಾರುಕಟ್ಟೆ ಜಿಲ್ಲೆಯ ದೊಡ್ಡ ಮಾರುಕಟ್ಟೆಗಳಲ್ಲಿ ಒಂದಾಗಿದೆ. ಆದರೆ ಆಧುನಿಕ, ವ್ಯವಸ್ಥಿತವಾಗಿ ಅಭಿವೃದ್ಧಿ ಪಡಿಸಲು ಗ್ರಾಪಂನ ಆದಾಯ ಮತ್ತು ಅನುದಾನದಿಂದ ಸಾಧ್ಯವಾಗದು. ಹಾಗಾಗಿ ಶಾಸಕರ ಅನುದಾನದಲ್ಲಿ ಮಾರುಕಟ್ಟೆಯನ್ನು ಅಭಿವೃದ್ಧಿ ಪಡಿಸುವಂತೆ ಈ ಹಿಂದೆ ಅಧಿಕಾರದಲ್ಲಿದ್ದ ಶಾಸಕರಿಗೆ ಹಲವಾರು ಬಾರಿ ಗ್ರಾಪಂ ಆಡಳಿತ ಮಂಡಳಿ ಮನವಿ ಪತ್ರ ನೀಡಿತ್ತಾದರೂ ಪ್ರಯೋಜನವಾಗಿಲ್ಲ. ಈಗಿನ ಆಡಳಿತ ಮಂಡಳಿ ಶಾಸಕರಿಗೆ ಪ್ರಸ್ತಾವನೆ ಸಲ್ಲಿಸಲು ತೀರ್ಮಾನಿಸಿದೆ.

ಸರ್ದಾರ್ ಅಹಮ್ಮದ್ ಉಪಾಧ್ಯಕ್ಷ, ಶನಿವಾರಸಂತೆ ಗ್ರಾಪಂ

ಶನಿವಾರಸಂತೆ ಮಾರುಕಟ್ಟೆಯಲ್ಲಿ ಸರಿಯಾದ ವ್ಯವಸ್ಥೆ ಇಲ್ಲದ ಕಾರನ ವ್ಯಾಪಾರ ಮಾಡಲು ಸಮಸ್ಯೆಯಾಗುತ್ತಿದೆ. ಶುಂಠಿ ವ್ಯಾಪಾರ ಮಾಡಲು ಪ್ರತ್ಯೇಕ ಮಳಿಗೆ ವ್ಯವಸ್ಥೆ ಇಲ್ಲ. ಮಳೆಗಾಲದಲ್ಲಂತೂ ತುಂಬ ತೊಂದರೆಯಾಗುತ್ತದೆ. ಸರ್ಕಾರ ಮಾರುಕಟ್ಟೆಯನ್ನು ಸಕಲ ವ್ಯವಸ್ಥೆಯೊಂದಿಗೆ ಆಧುನಿಕವಾಗಿ ಅಭಿವೃದ್ಧಿಪಡಿಸಿದರೆ ವ್ಯಾಪರಸ್ಥರು ಮತ್ತು ಗ್ರಾಹಕರಿಗೆ ಅನುಕೂಲವಾಗಲಿದೆ.

ಮುನಫ್ ಫೈಝು ವ್ಯಾಪರಸ್ಥ, ಶನಿವಾರಸಂತೆ

ಶನಿವಾರಸಂತೆ ಮಾರುಕಟ್ಟೆಯಲ್ಲಿ ಸರಿಯಾದ ವ್ಯವಸ್ಥೆ ಇಲ್ಲ. ಮಳೆಗಾಲದಲ್ಲಂತೂ ಸಂತೆಗೆ ಬರಲು ಹಿಂಸೆಯಾಗುತ್ತದೆ. ಇಡೀ ಮಾರುಕಟ್ಟೆ ಕೆಸರಿನಿಂದ ಕೂಡಿರುತ್ತದೆ. ಇದರಿಂದ ಸಂತೆಯಲ್ಲಿ ತರಕಾರಿ ಹಾಗೂ ಇತರ ವಸ್ತು ಖರೀದಿಸಲು ಆಗುವುದಿಲ್ಲ. ಸರ್ಕಾರ ಈ ಮಾರುಕಟ್ಟೆಯನ್ನು ಆಧುನಿಕವಾಗಿ ಅಭಿವೃದ್ಧಿ ಪಡಿಸುವ ಮೂಲಕ ಜನರಿಗೆ ಅನುಕೂಲ ಕಲ್ಪಿಸಬೇಕು.

ಮಣಿ ಗ್ರಾಹಕ, ಶನಿವಾರಸಂತೆ

ಜಿಲ್ಲೆಯಲ್ಲೇ ದೂಡ್ಡ ಸಂತೆ ಮಾರುಕಟ್ಟೆ ಇದು. ಈ ಮಾರುಕಟ್ಟೆಯಲ್ಲಿ ಪ್ರತಿ ಶನಿವಾರ ಲಕ್ಷಾಂತರ ರೂ. ವ್ಯವಹಾರ ನಡೆಯುತ್ತದೆ. ಆದರೂ ಈ ಮಾರುಕಟ್ಟೆ ಅಭಿವೃದ್ಧಿ ಹೂಂದದಿರುವುದು ದುರಂತ. ಮಳೆ ಪ್ರಾರಂಭವಾದರೆ ಮಾರುಕಟ್ಟೆ ಗದ್ದೆಯಂತಾಗುತ್ತದೆ. ವ್ಯಾಪಾರಸ್ಥರು ಕೆಸರಿನಲ್ಲೇ ಕುಳಿತು ವ್ಯಾಪಾರ ಮಾಡುತ್ತಾರೆ. ಇದು ಅನೇಕ ವರ್ಷದ ಸಮಸ್ಯೆಯಾಗಿದ್ದು, ಸಂಬಂಧಪಟ್ಟವರು ಅಭಿವೃದ್ಧಿ ಪಡಿಸಲು ಕ್ರಮ ವಹಿಸಲಿ.

ಭಾಸ್ಕರ್ ಶನಿವಾರಸಂತೆ

ಸಂತೆ ಮಾರುಕಟ್ಟೆ ಅಭಿವೃದ್ಧಿ ಪಡಿಸಬೇಕಿದೆ ಇದೀಗ ಮಳೆ ಬರುತ್ತಿರುವುದರಿಂದ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಮಳೆ ನೀರು ರಸ್ತೆಯಲ್ಲಿ ಹರಿಯುತ್ತದೆ. ಅನೇಕ ವ್ಯಾಪಾರಸ್ಥರು ನೆಲದ ಮೇಲೆ ಕುಳಿತು ವ್ಯಪಾರ ಮಾಡುತ್ತಾರೆ. ಇವರು ಕೂರುವ ಜಾಗದಲ್ಲಿ ಮಳೆ ನೀರು ಹರಿಯುತ್ತದೆ. ಪ್ರತಿ ವರ್ಷ ತೊಂದರೆ ಅನುಭವಿಸುವಂತಾಗಿದ್ದು, ಅತಿ ದೊಡ್ಡ ಮಾರುಕಟ್ಟೆ ಇದಾಗಿದ್ದರೂ ಅಭಿವೃದ್ಧಿ ಹೊಂದದಿರುವುದು ದುರಂತ.

ಪಿ.ಕೆ.ಕುಮಾರ್ ನಿವೃತ್ತ ಸೈನಿಕ ಶನಿವಾರಸಂತೆ

ಈ ಮಾರುಕಟ್ಟೆಯಲ್ಲಿ ಲಕ್ಷಾಂತರ ರೂ. ವಹಿವಾಟು ನಡೆಯುತ್ತದೆ. ಹಾಸನ ಅರಕಲಗೂಡು, ಸೋಮವಾರಪೇಟೆ, ಕುಶಾಲನಗರ ಕೋಣನೂರು ಸೇರಿದಂತೆ ಇತರ ಭಾಗದಿಂದ ವ್ಯಾವರಸ್ಥರು ಬಂದು ವ್ಯಾಪಾರ ಮಾಡುತ್ತಾರೆ. ಆದರೆ ಇಲ್ಲಿನ ಅವ್ಯವಸ್ಥೆ ನೋಡಿ ವ್ಯಂಗ್ಯವಾಡುತ್ತಾರೆ. ಸಂಬಂಧಪಟ್ಟವರು ಇತ್ತ ಗಮಹರಿಸಿ ಇನ್ನಾದರೂ ಅಭಿವೃದ್ಧಿ ಪಡಿಸುವಂತಾಗಲಿ.

ಪರಮೇಶ್ ನಿವೃತ್ತ ಸೈನಿಕ ಶನಿವಾರಸಂತೆ

ಈ ಮಾರುಕಟ್ಟೆಗೆ ನೀಡಲು ದೊಡ್ಡದಾಗಿ ಕಾಣುತ್ತದೆ. ಇಲ್ಲಿ ಮಳೆಯಲ್ಲಿ ವ್ಯಾಪಾರ ಮಾಡುವುದನ್ನು ನೋಡಿದರೆ ತುಂಬ ಬೇಸರವಾಗುತ್ತದೆ. ಅನೇಕ ವೃದ್ಧರು ಸೇರಿದಂತೆ ಇತರರು ವ್ಯಾಪಾರ ಮಾಡುತ್ತಾರೆ. ಆದರೆ ಮಳೆ-ಗಾಳಿಯಲ್ಲಿ ಪ್ಲಾಸ್ಟಿಕ್ ಹೊದಿಕೆ ಹಾಗೂ ನೆಲದಲ್ಲಿ ಗೋಣಿ ಚೀಲ ಹಾಕಿ ವ್ಯಾಪಾರ ಮಾಡುವುದು ನೋಡಿದಾಗ ಇನ್ನೂ ಇಂತಹ ಮಾರುಕಟ್ಟೆ ಜೀವಂತ ಇದೆಯೋ ಎಂದೆನಿಸುತ್ತದೆ.

ಪ್ರೀತಮ್ ಪೂಜಾರಿ ಮಾಲಂಬಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net