

ರಮೇಶ ಹಾರ್ಸಿಮನೆ ಸಿದ್ದಾಪುರ
ಹೊನ್ನಾವರ-ಸಿದ್ದಾಪುರ ತಾಲೂಕಿನ ಗಡಿಯಲ್ಲಿರುವ ಮುಗ್ತೆಹೊಳೆ ದಾಟಲು ಮರದ ಸಂಕದ ಬದಲಾಗಿ ಗ್ರಾಮದವರೇ ಸ್ವತಃ ತೂಗು ಸೇತುವೆ ನಿರ್ಮಿಸಿಕೊಂಡಿದ್ದಾರೆ. ಈಗ ಅದೇ ಅವರ ಹೆದ್ದಾರಿಯಾಗಿದೆ.
ಸಿದ್ದಾಪುರ ತಾಲೂಕಿನ ದೊಡ್ಮನೆ ಗ್ರಾಪಂ ಹಾಗೂ ಹೊನ್ನಾವರ ತಾಲೂಕಿನ ಚಿಕ್ಕನಕೋಡ ಮತ್ತು ಉಪ್ಪೋಣಿ ಗ್ರಾಪಂನ ಗಡಿಪ್ರದೇಶದಲ್ಲಿರುವ ಮುಗ್ತೆಹೊಳೆ ದಾಟಲು ಸಮರ್ಪಕ ಸೇತುವೆ ಇಲ್ಲ. ಸಿದ್ದಾಪುರ ತಾಲೂಕಿನ ತುತ್ತತುದಿಯಲ್ಲಿರುವ ಬೋಳುಮನೆ ಹಾಗೂ ಹೊನ್ನಾವರ ತಾಲೂಕಿನ ಹೊಸಗದ್ದೆ, ಹಾಸಳ್ಳಿ, ಕೊಡ್ಗಿ ಮತ್ತಿತರ ಗ್ರಾಮೀಣ ಪ್ರದೇಶದ ಒಳಹಳ್ಳಿಯ ಜನತೆ ನಿತ್ಯ ಸಂಚಾರಕ್ಕೆ ಸಂಕಟಪಡುತ್ತಿದ್ದರೂ ಯಾರೂ ಇವರ ಸಂಕಟ ಪರಿಹರಿಸಲು ಮುಂದಾಗದಿರುವುದು ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಹಲವು ವರ್ಷಗಳಿಂದ ಹೊನ್ನಾವರ ತಾಲೂಕಿನ ಹೊಸಗದ್ದೆ, ಹಾಸಳ್ಳಿ, ಕೊಡ್ಗಿ ಊರಿನವರು ಮಳೆಗಾಲದಲ್ಲಿ ಮುಗ್ತೆಹೊಳೆಗೆ ಮರದ ಸಂಕ ಹಾಕಿಕೊಂಡು ಸಂಚಾರ ಮಾಡುತ್ತಿದ್ದರು. ಆದರೆ, ಈಗ ಮೂರ್ನಾಲ್ಕು ವರ್ಷಗಳಿಂದ ಸುಮಾರು 85 ಅಡಿ ಉದ್ದ ಹಾಗೂ 4 ಅಡಿ ಅಗಲದಲ್ಲಿ ಯಾವುದೇ ಇಂಜಿನಿಯರ್ ಇಲ್ಲದೆ ಊರಿನವರೇ ತೂಗು ಸೇತುವೆ ನಿರ್ಮಿಸಿಕೊಂಡಿದ್ದನ್ನು ನೋಡಿದರೆ ಯಾರಾದರೂ ಆಶ್ಚರ್ಯ ಪಡಲೇಬೇಕು.
ತೂಗು ಸೇತುವೆಗೆ ಕಬ್ಬಿಣದ ರೋಪ್, ತಂತಿಯನ್ನು ಹೊಳೆಯ ಎರಡೂ ಕಡೆಯ ಮರಕ್ಕೆ ಕಟ್ಟಿದ್ದಾರೆ. ಪ್ಲಾಟ್‌ಾರ್ಮ್‌ಗೆ ಬೈನೆ ಮರದ ದಬ್ಬೆಯನ್ನು ಅಳವಡಿಸಿದ್ದಾರೆ. ಇದರ ಮೇಲೆಯೇ ಸರಾಗವಾಗಿ ಬೈಕ್ ಓಡಿಸುತ್ತಾರೆ. ಸಾಮಾನು ಸರಂಜಾಮುಗಳ ಮೂಟೆಯನ್ನು ತಲೆ ಮೇಲಿಟ್ಟುಕೊಂಡು ಸಾಗುತ್ತಾರೆ. ಶಾಲೆಗೆ ಹೋಗುವ ಮಕ್ಕಳನ್ನು ಇದರ ಮೇಲೆಯೇ ದಾಟಿಸುತ್ತಾರೆ. ಹೊರಗಿನವರು ಇಲ್ಲಿ ಸೇತುವೆ ದಾಟಲು ಹೋದರೆ ತಲೆ ತಿರುಗುವುದು ಗ್ಯಾರಂಟಿ.
ಊರಿನಲ್ಲಿ ಯಾರಾದರೂ ಅನಾರೋಗ್ಯದಿಂದ ಬಳಲಿದರೆ ಅವರನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗಬೇಕಾದರೆ ಹಗಲಿರುಳೆನ್ನದೆ ಇದೇ ಸೇತುವೆಯ ಮೇಲೆ ದಾಟಿಸುವ ಅನಿವಾರ್ಯತೆ ಇದೆ ಎನ್ನುತ್ತಾರೆ ಬೈರಾ ನಾಗು ನಾಯ್ಕ ಹಾಸಳ್ಳಿ, ರವಿ ಸುರೇಶ ನಾಯ್ಕ ಕೊಡ್ಗಿ, ಸುಬ್ರಾಯ ರತ್ನ ಗೌಡ ಹೊಸಗದ್ದೆ, ಮಂಜುನಾಥ ಗೌಡ ಹೊಸಗದ್ದೆ.
ಪಡಿತರಕ್ಕಾಗಿ ದೊಡ್ಮನೆಗೆ: ಹೊನ್ನಾವರ ತಾಲೂಕಿನ ಹಾಸಳ್ಳಿ, ಕೊಡ್ಗಿ, ಹೊಸಗದ್ದೆ ಊರವರು ಪಡಿತರ ಪಡೆಯಲು ಸಿದ್ದಾಪುರ ತಾಲೂಕಿನ ದೊಡ್ಮನೆಗೆ ಬರುತ್ತಿದ್ದಾರೆ. ಕಳೆದ ಎರಡು ವರ್ಷದ ಹಿಂದೆ ಜಿಲ್ಲಾಧಿಕಾರಿಗಳು ಈ ವ್ಯವಸ್ಥೆ ಮಾಡಿಕೊಟ್ಟಿದ್ದು, ಕೊಂಚ ಅನುಕೂಲವಾಗಿದೆ. 16-17 ಕಿಮೀ ದೂರದಲ್ಲೇ ಪಡಿತರ ಸಿಗುತ್ತದೆ. ಇಲ್ಲದಿದ್ದರೆ ಅದಕ್ಕೂ ಪರದಾಡುವ ಸ್ಥಿತಿ ಉಂಟಾಗಿತ್ತು ಎಂದು ವೆಂಕಟ್ರಮಣ ತಿಮ್ಮ ನಾಯ್ಕ ಹಾಸಳ್ಳಿ, ಗಣೇಶ ನಾರಾಯಣ ನಾಯ್ಕ ಕೊಡ್ಗಿ ಹೇಳುತ್ತಾರೆ.
ಇಲ್ಲಿ 25ಕ್ಕೂ ಹೆಚ್ಚು ಮನೆಗಳಿವೆ. ಇಲ್ಲಿಯ ಮಕ್ಕಳು ಶಿಕ್ಷಣ ಪಡೆಯಬೇಕೆಂದರೆ ಸಂಬಂಧಿಕರ ಮನೆಯಲ್ಲೋ ಅಥವಾ ಹಾಸ್ಟೇಲ್‌ನಲ್ಲಿ ಉಳಿದುಕೊಳ್ಳುತ್ತಾರೆ. ಇಲ್ಲದಿದ್ದರೆ ಸಿದ್ದಾಪುರ ತಾಲೂಕಿನ ಸೂರಗಾಲ ಶಾಲೆಗೆ ಬರುವಂತಾಗಿದೆ. ಮೂಲಸೌಲಭ್ಯದ ಕೊರತೆಯಿಂದಾಗಿ ಕೆಲವರು ಶಿಕ್ಷಣದಿಂದ ವಂಚಿತರಾಗಿದ್ದಾರೆ ಎಂದು ಸಿದ್ದಾಪುರ ತಾಪಂ ಮಾಜಿ ಸದಸ್ಯ ವಿವೇಕ ಭಟ್ಟ ಗಡಿಹಿತ್ಲ ಹಾಗೂ ದಿನೇಶ ಕೋಡಿಗದ್ದೆ ಹೇಳುತ್ತಾರೆ.
ತಾವು ಬೆಳೆದ ಭತ್ತ, ಅಡಕೆಯನ್ನೆಲ್ಲ ಸಿದ್ದಾಪುರ ಮಾರುಕಟ್ಟೆಗೆ ತರಬೇಕೆಂದರೂ ಸಮರ್ಪಕ ರಸ್ತೆ ಇಲ್ಲ. ಸೇತುವೆ ಹಾಗೂ ರಸ್ತೆ ನಿರ್ಮಿಸಿಕೊಡುವಂತೆ ಜನತೆ ಆಗ್ರಹಿಸುತ್ತಿದ್ದರೂ ತಮ್ಮ ಕೂಗಿಗೆ ಯಾವಾಗ ಮುಕ್ತಿ ಸಿಗುತ್ತದೆ ಎಂದು ಕಾಯುತ್ತಿದ್ದಾರೆ.
ಈಡೇರದ ಭರವಸೆ: ಮಾಜಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಇಲ್ಲಿಗೆ ಭೇಟಿ ನೀಡಿ ಸೇತುವೆ ಮಾಡಿಸಿಕೊಡುವ ಭರವಸೆ ನೀಡಿದ್ದರು. ಇಂದಿನ ಉಸ್ತುವಾರಿ ಸಚಿವರಾದ ಮಂಕಾಳ ವೈದ್ಯ ಅವರು ಶಾಸಕರಾಗಿದ್ದಾಗ ಸೇತುವೆ ಮಾಡಿಸಿಕೊಡುವುದಾಗಿ ಹೇಳಿದ್ದರು ಎಂದು ಸ್ಥಳೀಯರು ಹೇಳುತ್ತಾರೆ. ಕೊಡ್ಗಿಯಲ್ಲಿ ಐತಿಹಾಸಿಕ ರಾಮಲಿಂಗೇಶ್ವರ ದೇವಾಲಯವಿದೆ. ಇಲ್ಲಿಗೆ ಹೊನ್ನಾವರ ಹಾಗೂ ಸಿದ್ದಾಪುರ ತಾಲೂಕಿನ ಭಕ್ತರು ಹೋಗುತ್ತಾರೆ. ದೇವಾಲಯದ ಸಮೀಪ ಐತಿಹಾಸಿಕ ಗುಹೆ ಇದ್ದು ಇದು ಸಿದ್ದಾಪುರ ತಾಲೂಕಿನ ಬಿಳಗಿ ವ್ಯಾಪ್ತಿಗೆ ಬರುತ್ತದೆ. ಬಿಳಗಿ ರಾಜರ ಕಾಲದಲ್ಲಿ ಇದು ನಿರ್ಮಾಣ ಆಗಿರಬಹುದು ಎಂದು ಸ್ಥಳೀಯ ಹಿರಿಯರು ಹೇಳುತ್ತಾರೆ.