ಸನಾತನ ಧರ್ಮದಿಂದಲೇ ಸಂವಿಧಾನದ ಉಳಿವು, ಶಾಸಕ ಬಸನಗೌಡ ಪಾಟೀಲ ಯತ್ನಾಳ

Basangouda Patil Yatnal
Published on

ವಿಜಯಪುರ: ಸಂವಿಧಾನಕ್ಕೆ ಮತ್ತು ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರಿಗೆ ಅಪಚಾರವೆಸಗಿದ್ದು ಕಾಂಗ್ರೆಸ್....ತುರ್ತುಪರಿಸ್ಥಿತಿ ಹೇರಿದ್ದು ಕಾಂಗ್ರೆಸ್...ಬಾಬಾಸಾಹೇಬರು ನಿಧನರಾದಾಗ ಅಂತ್ಯಸಂಸ್ಕಾರಕ್ಕೂ ಜಾಗ ಕೊಡದೇ ಅವಮಾನಿಸಿದ್ದು ಕಾಂಗ್ರೆಸ್....ಪಾರ್ಥಿವ ಶರೀರ ರವಾನಿಸಲು ಸಹ ಹಣ ನೀಡದ ಹಿನ್ನೆಲೆ ಬಾಬಾಸಾಹೇಬರ ಕಾರ್ ಮಾರಿ ಹಣಹೊಂದಿಸುವ ಸ್ಥಿತಿ ತಂದಿದ್ದು ಕಾಂಗ್ರೆಸ್....ಚುನಾವಣೆಯಲ್ಲಿ ಬಾಬಾಸಾಹೇಬರ ಸೋಲಿಗೆ ಕಾರಣವಾಗಿದ್ದು ಕಾಂಗ್ರೆಸ್....ಬಾಬಾಸಾಹೇಬರು ಬರೆದ ಮೂಲ ಸಂವಿಧಾನದಲ್ಲಿಯೇ ಇಲ್ಲದ ಜಾತ್ಯತೀತ ಪದ ಸೇರ್ಪಡೆ ಮಾಡಿದ್ದು ಸಹ ಈ ಕಾಂಗ್ರೆಸ್....ಹೀಗೆ ಈ ದೇಶದ ಇತಿಹಾಸದಲ್ಲಿ ಸಂವಿಧಾನ ವಿರೋಧಿ ಮತ್ತು ಬಾಬಾಸಾಹೇಬರ ವಿರೋಧಿಯಾಗಿ ನಡೆದುಕೊಂಡಿದ್ದೇ ಕಾಂಗ್ರೆಸ್ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಾಗ್ದಾಳಿ ನಡೆಸಿದರು.

ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳಿಕೆಗೆ ಸಂಬಂಧಿಸಿದಂತೆ ನಡೆಯುತ್ತಿರುವ ಹೋರಾಟಗಳಿಗೆ ಸಂಬಂಧಿಸಿದಂತೆ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ, ಅಮಿತ್ ಷಾ ಅವರು ಬಾಬಾಸಾಹೇಬರ ಹೆಸರು ಹೇಳಿಕೊಂಡು ಕಾಂಗ್ರೆಸ್ ಮಾಡಿರುವ ಮೋಸದ ಕುರಿತು ಮಾತನಾಡಿದ್ದಾರೆ. ಅವರ ಭಾಷಣದ ಪೂರ್ಣ ವಿಡಿಯೋ ಬಿತ್ತರಿಸದೇ ಅದನ್ನು ತಿರುಚುವ ಪ್ರಯತ್ನ ಕಾಂಗ್ರೆಸ್ ಮಾಡುತ್ತಿದೆ. ಈ ದೇಶದಲ್ಲಿ ಸಂವಿಧಾನಕ್ಕೆ ಚ್ಯುತಿ ತಂದಿರುವುದೇ ಈ ಕಾಂಗ್ರೆಸ್. ಸನಾತನ ಧರ್ಮ ಉಳಿದರೆ ಮಾತ್ರ ಸಂವಿಧಾನ ಉಳಿಯಲಿದೆ ಎಂದರು.

ಕಾಂಗ್ರೆಸ್ ಅಧಿವೇಶನ

ಬೆಳಗಾವಿ ಕಾಂಗ್ರೆಸ್ ಅಧಿವೇಶನ ಕುರಿತು ಟೀಕೆ ಮಾಡಿದ ಯತ್ನಾಳ, ಅದೊಂದು ನಕಲಿ ಗಾಂಧಿ ಅಧಿವೇಶನ ಎಂದರು. ಈಗಿರುವ ಗಾಂಧಿ ಮನೆತನಕ್ಕೆ ಗಾಂಧಿ ಹೆಸರು ಹೇಗೆ ಬಂತು ಎಂಬುದನ್ನು ಹೇಳಬೇಕು. ಫಿರೋಜ ಗ ಗಾಂಢಿ ಎಂಬುದು ಗಾಂಧಿ ಹೇಗಾಯಿತು? ಎಂಬುದು ತಿಳಿಸಬೇಕು ಎಂದರು.

ಅಲ್ಲದೇ, ಬೆಳಗಾವಿಗೆ ಡಾ.ಬಾಬಾಸಾಹೇಬ ಅಂಬೇಡ್ಕರ್ ಸಹ ಆಗಮಿಸಿದ್ದಾರೆ. ಪ್ರಕರಣವೊಂದರಲ್ಲಿ ರೈತನ ಪರ ವಾದ ಮಂಡಿಸಲು ಅಂಬೇಡ್ಕರ್ ಅವರು ಆಗಮಿಸಿದ್ದರು. ಹೀಗಾಗಿ ಆ ಕುರಿತು ಅಧಿವೇಶನ ಏಕೆ ನಡೆಸುತ್ತಿಲ್ಲ? ಕಾಂಗ್ರೆಸ್‌ನವರು ಅಂಬೇಡ್ಕರ್ ದ್ರೋಹಿ ಎಂಬುದಕ್ಕೆ ಇದು ತಾಜಾ ಉದಾಹರಣೆ ಎಂದರು.

ಅಟಲ್‌ಬಿಹಾರಿ ವಾಜಪೇಯಿ ನಂತರ ಪ್ರಧಾನಿಯಾಗಿ ನರೇಂದ್ರ ಮೋದಿ ಬಳಿಕ ಯೋಗಿ ಆದಿತ್ಯನಾಥನಂಥ ನಾಯಕರು ಮುಂಚೂಣಿಗೆ ಬರಲಿದ್ದಾರೆ. ಬಿಜೆಪಿಯಲ್ಲಿ ನಾಯಕತ್ವದ ಕೊರತೆ ಇಲ್ಲ. ರಾಜ್ಯದಲ್ಲೂ ಒಳ್ಳೆಯ ನಾಯಕತ್ವ ಬಂದೇ ಬರುತ್ತದೆ. ಆತಂಕ ಬೇಡ. ನಿಶ್ಚಿತವಾಗಿಯೂ ಒಳ್ಳೆಯ ನಾಯಕತ್ವ ಬರಲಿದೆ ಎಂದರು.

ಇನ್ನು ವಕ್ಫ್ ಹೋರಾಟ ಸಂಬಂಧ ಬೆಂಗಳೂರಿನಲ್ಲಿ ಸಭೆ ಸೇರಿ ಮುಂದಿನ ಹೋರಾಟದ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದ ಯತ್ನಾಳ, ಸಿ.ಟಿ. ರವಿ ಮತ್ತು ಲಕ್ಷ್ಮಿ ಹೆಬ್ಬಾಳಕರ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕೆಂಬುದು ನಮ್ಮ ಬೇಡಿಕೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net