

ರಾಯಚೂರು: ಶರಣರು ಸಮಾಜದಲ್ಲಿ ಉತ್ತಮ ಬದುಕು ರೂಪಿಸಿಕೊಳ್ಳಲು ಹಲವು ಮಾರ್ಗಗಳು ಮತ್ತು ಸಂದೇಶಗಳನ್ನು ಜಗತ್ತಿಗೆ ತಮ್ಮ ವಚನ ಮತ್ತು ಕೀರ್ತನೆಗಳ ಮೂಲಕ ತಿಳಿಸಿದ್ದಾರೆ. ಶರಣರು ಸಾಗಿ ಹೋದ ಮಾರ್ಗದಲ್ಲಿ ನಾವು ಮುನ್ನಡೆಯಬೇಕಾಗಿದೆ ಎಂದು ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಹೇಳಿದರು.
ಸ್ಥಳೀಯ ವೀರಶೈವ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಕುರುಬರ ಸಂಘದಿಂದ ಗುರುವಾರ ಹಮ್ಮಿಕೊಂಡಿದ್ದ ಭಕ್ತ ಕನಕದಾಸ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅಜ್ಞಾನದಿಂದ ಸುಜ್ಞಾನದೆಡೆ ಹೋಗುವ ಮಾರ್ಗವನ್ನು ಕನಕದಾಸರು ನೀಡಿದ್ದಾರೆ ಎಂದರು.
ಕನಕದಾಸರು ತಮ್ಮ ವಿಚಾರಧಾರೆಗಳ ಮೂಲಕ ಸಮಾಜ ಮತ್ತು ಜನರ ಬದುಕನ್ನು ಸುಧಾರಿಸುವ ಕೆಲಸ ಮಾಡಿದರು. ಅವರು ವಿಚಾರಧಾರೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಉತ್ತಮ ಬದುಕು ಕಟ್ಟಿಕೊಳ್ಳಲು ಎಲ್ಲರೂ ಮುಂದಾಗಬೇಕು ಎಂದು ಹೇಳಿದರು.
ನಗರ ಶಾಸಕ ಡಾ.ಶಿವರಾಜ ಪಾಟೀಲ್ ಮಾತನಾಡಿ, ಹಿಂದಿನ ಕಾಲದ ಶರಣರು, ದಾಸರು, ಸಂತರು ಸಮಾಜವನ್ನು ತಿದ್ದುವ ಕಾರ್ಯವನ್ನು ಮಾಡಿದ್ದಾರೆ. ಅಂತಹ ಮಹಾತ್ಮರ ಆದರ್ಶ ವಿಚಾರಗಳನ್ನು ತಿಳಿದುಕೊಂಡು ಜೀವನದಲ್ಲಿ ಅಳವಡಿಸಿಕೊಂಡರೆ ಜಯಂತಿ ಆಚರಣೆಗೆ ಸಾರ್ಥಕತೆ ಬರಲಿದೆ ಎಂದು ತಿಳಿಸಿದರು.
ಮಾನ್ವಿ ಕಲ್ಮಠದ ಪಿಯು ಕಾಲೇಜು ಉಪನ್ಯಾಸಕ ರಮೇಶಬಾಬು ಯಾಳಗಿ ಮಾತನಾಡಿ, ಕನಕದಾಸರು ನಿಜತನವನ್ನು ಎತ್ತಿ ತೋರಿಸಿದ ಮಹಾಜ್ಞಾನಿಯಾಗಿದ್ದರು. ಅವರ ಕುರಿತು ಚಿಂತನ, ಮಂಥನ ನಡೆಸಬೇಕು. ಕನಕದಾಸರು ಕೇವಲ ಒಂದು ಸಮುದಾಯಕ್ಕೆ ಸಮೀತರಾಗದೆ ವಿಶ್ವದ ಆಸ್ತಿಯಾಗಿದ್ದಾರೆ ಎಂದರು.
ಇದಕ್ಕೂ ಮೊದಲು ನಗರದ ಕನಕದಾಸ ವೃತ್ತದಿಂದ ಕಲ್ಯಾಣ ಮಂಟಪದವರೆಗೆ ಕನಕದಾಸರ ಭಾವಚಿತ್ರ ಮೆರವಣಿಗೆ ನಡೆಸಲಾಯಿತು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದವರಿಗೆ ಸನ್ಮಾನಿಸಿ, ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ ಗೌಡ, ಜಿಲ್ಲಾಕಾರಿ ಚಂದ್ರಶೇಖರ ನಾಯಕ, ಎಸ್ಪಿ ಬಿ.ನಿಖಿಲ್, ಅಪರ ಜಿಲ್ಲಾಕಾರಿ ಡಾ.ಕೆ.ಆರ್.ದುರಗೇಶ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಮಂಗಳಾ ನಾಯಕ, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಕೆ.ಬಸವಂತಪ್ಪ, ಪದಾಕಾರಿಗಳಾದ ನೀಲಕಂಠ ಬೇವಿನ್, ಬಿ.ಬಸವರಾಜ, ಕೆ.ಪಂಪಾಪತಿ, ನಾಗೇಂದ್ರಪ್ಪ ಮಟಮಾರಿ ಉಪಸ್ಥಿತರಿದ್ದರು.