ಕೃಷಿ ಕ್ಷೇತ್ರ, ಬೆಟ್ಟ ಅಭಿವೃದ್ಧಿಗೆ ಎಲ್ಲರ ಬೆಂಬಲ ಅಗತ್ಯ

VRUKSHAROPANA
Published on

ಸಿದ್ದಾಪುರ: ರೈತರು ಸಂಕಷ್ಟದಲ್ಲಿ ಇದ್ದಾರೆ. ಅತಿವೃಷ್ಟಿ, ಅನಾವೃಷ್ಟಿ ಬಾಧಿಸುತ್ತಿದೆ. ವನ್ಯ ಪ್ರಾಣಿಗಳ ಹಾವಳಿ ಹೆಚ್ಚಿದೆ. ಸರ್ಕಾರ ನೆರವಿಗೆ ಬರಬೇಕು. ನಮ್ಮ ನದಿ ತೀರ ಹಸಿರಿನಿಂದ ತುಂಬಲು ಶ್ರೀ ಮಠದ ಕೃಷಿ ಕ್ಷೇತ್ರ ಬೆಟ್ಟ ಅಭಿವೃದ್ಧಿಗೆ ಎಲ್ಲರ ಬೆಂಬಲ ಬೇಕು ಎಂದು ಶ್ರೀಮನ್ನೆಲೆಮಾವು ಮಠದ ಪೀಠಾಧಿಪತಿಗಳಾದ ಶ್ರೀ ಮಾಧವಾನಂದ ಭಾರತಿ ಮಹಾಸ್ವಾಮೀಜಿ ಹೇಳಿದರು.
ತಾಲೂಕಿನ ಶ್ರೀಮನ್ನೆಲೆಮಾವು ಮಠದಲ್ಲಿ ಹಮ್ಮಿಕೊಂಡಿದ್ದ ವೃಕ್ಷಾರೋಪಣ ಶಿಬಿರಕ್ಕೆ ಚಾಲನೆ ನೀಡಿ ಅವರು ಆಶೀರ್ವಚನ ನೀಡಿದರು.
ಅನಂತ ಹೆಗಡೆ ಅಶೀಸರ ಮಾತನಾಡಿ, ಈ ಹಿಂದೆ ನೆಲೆಮಾವು ಮಠದ ಬೆಟ್ಟ ಸಮೀಕ್ಷೆ ನಡೆದಿದೆ. ಬೆಟ್ಟ ರಕ್ಷಣಾ ಯೋಜನೆಗೆ ಈ ವರ್ಷವೇ ಕ್ರಿಯಾ ಯೋಜನೆ ರೂಪಿಸಬೇಕು. ಖರಾಬು ಎಂದು ಬೆಟ್ಟ ಭೂಮಿ ಘೊಷಿಸಿರುವುದು ತಪ್ಪು ಕ್ರಮ. ಇದನ್ನು ಅರಣ್ಯ ಮತ್ತು ಕಂದಾಯ ಇಲಾಖೆಗಳು ಸೇರಿ ಸರಿಪಡಿಸಬೇಕು. ಸೋಲಾರ್ ಬೇಲಿ ನಿರ್ವಿುಸಲು ರೈತರಿಗೆ ಅರಣ್ಯ ಇಲಾಖೆ ಬೆಂಬಲ ನೀಡಬೇಕು ಎಂದರು.
ಶಿರಸಿ ಅರಣ್ಯ ಇಲಾಖೆ ಉಪಅರಣ್ಯ ಸಂರಕ್ಷಣಾಧಿಕಾರಿ ಡಾ. ಅಜ್ಜಯ್ಯ ಅವರು ಬೆಟ್ಟ ರಕ್ಷಣಾ ಯೋಜನೆ ಹಾಗೂ ಸೋಲಾರ್ ಬೇಲಿ ನಿರ್ವಿುಸಲು ಎಲ್ಲ ಸಹಾಯ ನೀಡುತ್ತೇವೆ ಎಂದು ಭರವಸೆ ನೀಡಿದರು.
ಪ್ರಗತಿಪರ ಕೃಷಿಕ ಹಾಗೂ ವನ್ಯಜೀವಿ ತಜ್ಞ ಡಾ. ಬಾಲಚಂದ್ರ ಸಾಯಿಮನೆ, ತೋಟಗಾರಿಕೆ ಅಧಿಕಾರಿ ಮಹಾಬಲೇಶ್ವರ ಬಿ.ಎಸ್., ಮಠದ ಆಡಳಿತ ಮಂಡಳಿ ಅಧ್ಯಕ್ಷ ಜಿ.ಎಂ. ಹೆಗಡೆ ಹಾಗೂ ಆಡಳಿತ ಮಂಡಳಿ ಸದಸ್ಯರುಗಳಿದ್ದರು.
ವೃಕ್ಷರೋಪಣಕ್ಕೆ ಚಾಲನೆ ನೀಡಿದ ಸ್ವಾಮೀಜಿಗಳು ದಾಲ್ಚಿನ್ನಿ, ಕಂಬಿ, ಲವಂಗ ಮತ್ತಿತರ ಸಸಿಗಳನ್ನು ನೆಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net