ಹೆಚ್ಚಾಗುತ್ತಿದೆ ಬಿಸಿಲಿನ ಝಳ

The sun is shining.
ಹುನಗುಂದ ಪಟ್ಟಣದ ಬಿಸಿಲಿನ ತಾಪ ತಾಳಲಾರದೆ ಜನರು ಎಳನೀರು ಮತ್ತು ಕಲ್ಲಂಗಡಿ ಸವಿಯುತ್ತಿರುವುದು.
Published on

ಹುನಗುಂದ: ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಬೇಸಿಗೆ ಬಿಸಿ ಏರುತ್ತಿದ್ದು, ಜನತೆ ತಾಪ ತಾಳಲಾರದೆ ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಬೆಳಗ್ಗೆ 9.30ರಿಂದ ಆರಂಭವಾಗುವ ಬಿಸಿಲಿನ ಪ್ರಖರತೆಗೆ ಜನತೆ ರೋಸಿ ಹೋಗಿದ್ದಾರೆ. ಕಲ್ಲಂಗಡಿ, ದ್ರಾಕ್ಷಿ, ಮೋಸಂಬಿ, ಎಳನೀರು, ಮಜ್ಜಿಗಿ ಮತ್ತಿತರ ತಂಪು ಪಾನೀಯಗಳಿಗೆ ಬೇಡಿಕೆ ಅಧಿಕವಾಗುತ್ತಿದೆ. ಗಗನಕ್ಕೇರಿದ ಬೆಲೆ: ಬಿಸಿಲಿನ ತಾಪದೊಂದಿಗೆ ತಂಪು ಪಾನೀಯಗಳ ಬೆಲೆಯೂ ಗಗನಕ್ಕೇರಿರುವುದರಿಂದ ಜನತೆಯ ಜೇಬಿಗೆ ಕತ್ತರಿ ಬೀಳುತ್ತಿದೆ. 35 ರೂ. ಇದ್ದ ಎಳನೀರು 45 ರೂ. ಆಗಿದೆ. ಕಲ್ಲಂಗಡಿ ಹಣ್ಣಿನ ಬೆಲೆ 50 ರಿಂದ 100 ರೂ.ವರೆಗೆ ಇದೆ. 10 ರೂ.ಗೆ 3 ನಿಂಬೆ ದೊರೆಯುತ್ತಿವೆ. ಹಣ್ಣು, ಲಸ್ಸಿ, ಮಜ್ಜಿಗೆ, ಕಬ್ಬಿನ ಹಾಲು ಮತ್ತಿತರ ಪಾನೀಯಗಳ ಬೆಲೆಯೂ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಬದುಕು ದುಸ್ತರ: ಈ ವರ್ಷ ಬಿಸಿಲಿನ ಜಳಕ್ಕೆ ಭೂಮಿ ಕಾದ ಕಬ್ಬಿಣದಂತಾಗಿದ್ದು, ಜನತೆ ಮನೆಯಿಂದ ಹೊರಬರಲು ಹಿಂಜರಿಯುತ್ತಿದ್ದಾರೆ. ಈ ಬಾರಿ ಗರಿಷ್ಠ ತಾಪಮಾನ 37ಡಿಗ್ರಿ ಸೆಲ್ಸಿಯಸ್‌ದಾಖಲಾಗಿದ್ದು, ಮಧ್ಯಾಹ್ನದ ಹೊತ್ತಿನಲ್ಲಿ ಮನೆಯಲ್ಲಿ ಕುಳಿತುಕೊಳ್ಳಲು ಆಗದೆ ಜನತೆ ಗಿಡ-ಮರಗಳ ನೆರಳಿನಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ರಾತ್ರಿ ವೇಳೆ ಮನೆಯ ಮಾಳಿಗೆ ಮೇಲೆ ಮಲಗುವ ಪರಿಸ್ಥಿತಿ ಎದುರಾಗಿದೆ. ಬಿಸಿಲಿನ ಹೊಡೆತಕ್ಕೆ ಬದುಕು ನಡೆಸುವುದೆ ದುಸ್ತರವಾಗಿದೆ. ಜನರಲ್ಲಿ ಅನಾರೋಗ್ಯದ ಆತಂಕ: ಬಿಸಿಲಿನ ಜಳದಿಂದ ಮಕ್ಕಳು ಹಾಗೂ ವೃದ್ಧರ ಅನಾರೋಗ್ಯದಲ್ಲಿ ವ್ಯತ್ಯಾಸ ಉಂಟಾಗುತ್ತಿದ್ದು, ಅನೇಕ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ. ಭೂಮಿಗೆ ಮಳೆಸುರಿದರೆ ಮಾತ್ರ ಬಿಸಿಲಿನ ತಾಪ ಸಲ್ಪ ಮಟ್ಟಿಗೆ ಕಡಿಮೆಯಾಗಲಿದೆ. ವೃದ್ಧರು ತಂಪಾದ ವಾತಾವರಣದಲ್ಲಿ ಇರಬೇಕು. ಶುದ್ಧ ನೀರು ಕುಡಿಯಬೇಕು. ಹೆಚ್ಚಾಗಿ ಮಜ್ಜಿಗೆ, ಎಳನೀರು, ಕಲ್ಲಂಗಡಿ ಹಣ್ಣು ಸೇವನೆ ಮಾಡಬೇಕು. ಹೊರಗಡೆ ಎಣ್ಣೆಯಲ್ಲಿ ಕರಿದ ಮಸಾಲೆ ತಿಂಡಿ ಪದಾರ್ಥಗಳನ್ನು ಸೇವಿಸಬಾರದು. ಡಾ.ಎಸ್.ಎಚ್. ಅಂಗಡಿ, ತಾಲೂಕು ವೈದ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net