

ಶಿರಸಿ: ಅಡಕೆ ಕಾರ್ಯಕ್ಕೆ ಬಳಸುವ ದೋಟಿಗಳಿಗೆ ಈ ವರ್ಷ ಸಬ್ಸಿಡಿ ಹಣ ಇನ್ನೂ ಬಿಡುಗಡೆಯಾಗಿಲ್ಲ. ತೋಟಗಾರಿಕೆ ಇಲಾಖೆಗೆ ಅರ್ಜಿ ಸಲ್ಲಿಸಿದವರು ಹಣಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.
ಮಳೆಗಾಲದಲ್ಲಿ ಎರಡು ಬಾರಿ ಬೋರ್ಡೋ ದ್ರಾವಣ ಸಿಂಪಡಣೆ, ಡಿಸೆಂಬರ್, ಜನವರಿ ತಿಂಗಳ ಅವಧಿಯಲ್ಲಿ ಅಡಕೆ ಕಟಾವು ಕಾರ್ಯಕ್ಕೆ ಸಿಬ್ಬಂದಿ ಮರವೇರಿ ಕೃಷಿ ಕಾರ್ಯ ನೆರವೇರಿಸುತ್ತಿದ್ದರು. ಹೀಗಾಗಿ, ಮರ ಏರುವವರಿಗೆ ಬೇಡಿಕೆ ಸಹಜವಾಗಿಯೇ ಜಾಸ್ತಿಯಾಗಿತ್ತು. ಅಲ್ಲದೆ, ಮಳೆಗಾಲದಲ್ಲಿ ಮಲೆನಾಡಿನಲ್ಲಿ ಅಡಕೆ ಮರ ಏರುವ ಕಾಯಕವೂ ಕಠಿಣ. ಮರ ಜಾರುವಿಕೆಯಿಂದ ಅನೇಕ ಕಾರ್ಮಿಕರು ಮರದಿಂದ ಬಿದ್ದು ಗಾಯಗೊಂಡ ಘಟನೆಗಳೂ ನಡೆಯುತ್ತಿದ್ದವು.
ಇತ್ತೀಚಿನ ವರ್ಷಗಳಲ್ಲಿ ನೆಲದಲ್ಲಿಯೇ ನಿಂತು ಕೆಲಸ ಮಾಡಬಹುದಾದ ದೋಟಿಗಳ ಆವಿಷ್ಕಾರವಾಗಿದೆ. ಇದು ಕೆಲಸವನ್ನು ಸುಲಭಗೊಳಿಸಿದ್ದಲ್ಲದೆ ಸುರಕ್ಷತೆಯೂ ಆಗಿದೆ. ಈ ದೋಟಿಗಳನ್ನು ಕೃಷಿ ಇಲಾಖೆ ಸಬ್ಸಿಡಿ ವ್ಯಾಪ್ತಿಗೆ ಸೇರಿಸಿದೆ. ಕೇಂದ್ರ ಸರ್ಕಾರದ ಎಸ್‌ಎಂಎಎಂ ( ಸಬ್ ಮಿಷನ್ ಆನ್ ಅಗ್ರಿಕಲ್ಚರ್ ಮೆಕೆನೈಜೇಶನ್ ) ಅಡಿ ಪರಿಗಣಿಸಿ ಕೃಷಿಯಲ್ಲಿ ಯಂತ್ರೋಪಕರಣಗಳ ಅಳವಡಿಕೆಯನ್ನು ಉತ್ತೇಜಿಸುವ ಸಲುವಾಗಿ ಸಬ್ಸಿಡಿ ನೀಡಲಾರಂಭಿಸಿದೆ. ಮಾರುಕಟ್ಟೆಯಲ್ಲಿ ಪ್ರತಿ ದೋಟಿಗೆ 70ರಿಂದ 80 ಸಾವಿರ ರೂ. ದರವಿದೆ. ರೈತರು ದೋಟಿಗಳನ್ನು ಖರೀದಿಸಿದ ಬಳಿಕ ಬಿಲ್, ಪಹಣಿಪತ್ರಿಕೆ, ಬ್ಯಾಂಕ್ ದಾಖಲೆಗಳೊಂದಿಗೆ ತೋಟಗಾರಿಕೆ ಇಲಾಖೆಗೆ ಅರ್ಜಿ ಸಲ್ಲಿಸಬೇಕಿತ್ತು. ಸಾಮಾನ್ಯ ರೈತರಿಗೆ ಶೇ. 40ರಷ್ಟು, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಶೇ. 50ರಷ್ಟು ಸಹಾಯಧನ ಲಭಿಸುತ್ತಿತ್ತು. ರೈತರಿಗೆ 30 ಸಾವಿರದಿಂದ 40 ಸಾವಿರ ರೂ.ವರೆಗೆ ಸಬ್ಸಿಡಿ ದೊರೆಯುತ್ತಿತ್ತು.
2022-23ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 750 ರೈತರು ಸಬ್ಸಿಡಿ ಪಡೆದಿದ್ದಾರೆ. 2023-24ನೇ ಸಾಲಿನಲ್ಲಿ 810 ರೈತರು ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಆದರೆ, 23-24ರಲ್ಲಿ ಅರ್ಜಿ ಸಲ್ಲಿಸಿದವರಿಗೆ ಸರ್ಕಾರದ ಸಹಾಯಧನವೇ ಮಂಜೂರಾಗಿಲ್ಲ.
2.5 ಕೋಟಿ ರೂ. ಬರಬೇಕಿದೆ...
ಇತ್ತೀಚಿನ ವರ್ಷಗಳಲ್ಲಿ ಅಡಕೆ ದೋಟಿಯ ಬಳಕೆ, ಜನಪ್ರಿಯತೆ ಹೆಚ್ಚಾಗಿದೆ. ಅಡಕೆ ಬೆಳೆಯುವ ಕ್ಷೇತ್ರ ಗಣನೀಯವಾಗಿ ಏರಿಕೆಯಾಗಿದ್ದರ ಪರಿಣಾಮ ಮರ ಏರಿ ಕೆಲಸ ಮಾಡುವ ಕಾರ್ಮಿಕರ ಸಂಖ್ಯೆ ಅಡಕೆ ಕ್ಷೇತ್ರಕ್ಕೆ ಅನುಗುಣವಾಗಿ ಲಭ್ಯವಾಗುತ್ತಿಲ್ಲ. ಅಲ್ಲದೆ ಹೊಸ ಅಡಕೆ ತೋಟಗಳಲ್ಲಿ ಅಡಕೆ ಮರಗಳು 30ರಿಂದ 50 ಅಡಿ ಮಾತ್ರ ಎತ್ತರ ಇರುವ ಕಾರಣ ದೋಟಿ ಮೂಲಕ ಸುಲಭವಾಗಿ ಕಾರ್ಯ ನಿರ್ವಹಿಸಬಹುದಾಗಿದೆ. ಈ ಎಲ್ಲದರ ಹಿನ್ನೆಲೆಯಲ್ಲಿ ಈ ವರ್ಷ 810 ರೈತರು ದೋಟಿ ಖರೀದಿಸಿದ್ದಾರೆ. 2023-24ನೇ ಸಾಲಿನಲ್ಲಿ ಒಟ್ಟು 2.5 ಕೋಟಿ ರೂ. ಸಬ್ಸಿಡಿ ಸಂದಾಯವಾಗಬೇಕಾಗಿದೆ.
ಏಕೆ ಹೀಗೆ?
ಎಸ್‌ಎಂಎಎಂನ ಬದಲಾದ ಗೈಡ್ ಲೈನ್‌ಲ್ಲಿ ಅಲ್ಯುಮಿನಿಯಂ ಸಾಧನಗಳಿಗೆ ಸಹಾಯಧನ ಕಡಿಮೆ ಇದೆ. ಅಡಕೆ ಕಾರ್ಯ ನಡೆಸುವ ದೋಟಿಗಳನ್ನು ಈ ಯೋಜನೆಯಲ್ಲಿ ಅಲ್ಯುಮಿನಿಯಂ ಉಪಕರಣ ಎಂದು ಪರಿಗಣಿಸಲಾಗಿದ್ದು, ನಿಯಮಾವಳಿ ಪ್ರಕಾರ ಪ್ರತಿ ದೋಟಿಗೆ 4ರಿಂದ 5 ಸಾವಿರ ರೂ. ಮಾತ್ರ ಸಹಾಯಧನ ನೀಡಬಹುದಾಗಿದೆ. ಪ್ರತಿ ದೋಟಿಗೆ ರೈತರು 70ರಿಂದ 80 ಸಾವಿರ ರೂ. ನೀಡಿ ಖರೀದಿಸಿರುವುದರಿಂದ ಈ ಸಹಾಯಧನ ನಾಮ್‌ಕೇವಾಸ್ತೆ ಎಂಬಂತಾಗಿದೆ. ಅಡಕೆ ಇಳಿಸುವ ಈ ದೋಟಿ ಕೇವಲ ಅಲ್ಯುಮಿನಿಯಂನಿಂದ ತಯಾರಾಗಿಲ್ಲ, ವಿವಿಧ ಲೋಹ ಬಳಸಿ ಸಿದ್ಧಪಡಿಸಿರುವುದರಿಂದ ಇವುಗಳನ್ನು ಅಲ್ಯುಮಿನಿಯಂ ಎಂದು ಪರಿಗಣಿಸಬಾರದು ಎಂದು ತೋಟಗಾರಿಕೆ ಇಲಾಖೆ ಎಸ್‌ಎಂಎಎಂಗೆ ಮನವರಿಕೆ ಮಾಡಿಕೊಡಲು ಯತ್ನಿಸಿದೆ. ಅಲ್ಲದೆ, ಈಗಾಗಲೇ ರೈತರು ಸಲ್ಲಿಸಿದ ಅರ್ಜಿಯನ್ನು ಬಾಕಿ ಇಟ್ಟುಕೊಂಡು ಎಸ್‌ಎಂಎಎಂನಿಂದ ಸ್ಪಷ್ಟನೆ ಸಿಕ್ಕ ಬಳಿಕವೇ ವಿಲೇವಾರಿ ಮಾಡಲು ನಿರ್ಧರಿಸಿದೆ.
2022-23ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 700ಕ್ಕೂ ಅಧಿಕ ರೈತರು ಅಡಕೆ ದೋಟಿಗೆ ಸಬ್ಸಿಡಿ ಪಡೆದುಕೊಂಡಿದ್ದರು. ಆದರೆ, ಸಬ್ ಮಿಷನ್ ಆನ್ ಅಗ್ರಿಕಲ್ಚರ್ ಮೆಕೆನೈಜೇಶನ್ ಯೋಜನೆಯಲ್ಲಿ ಈ ವರ್ಷ ದೋಟಿಗಳನ್ನು ಅಲ್ಯುಮಿನಿಯಂ ಉಪಕರಣ ಎಂದು ಪರಿಗಣಿಸಿದ್ದರಿಂದ ಸಬ್ಸಿಡಿಗೆ ತೊಂದರೆ ಆಗಿದೆ. ಈ ಬಗ್ಗೆ ಸರ್ಕಾರದ ಮುಂದಿನ ಸೂಚನೆಗೆ ಕಾಯುತ್ತಿದ್ದೇವೆ. ಡಾ. ಬಿ.ಪಿ. ಸತೀಶ, ತೋಟಗಾರಿಕೆ ಇಲಾಖೆ ಡಿಡಿ