

ಮುಳಗುಂದ: ಪ್ರತ್ಯೇಕ ಗ್ರಾಮ ಪಂಚಾಯಿತಿ ಸ್ಥಾನಮಾನ ನೀಡದಿದ್ದರೆ ಚುನಾವಣೆಗಳನ್ನು ಬಹಿಷ್ಕರಿಸುತ್ತೇವೆ ಎಂದು ಪಟ್ಟು ಹಿಡಿದಿರುವ ನೀಲಗುಂದ ಗ್ರಾಮಕ್ಕೆ ಗುರುವಾರ ಭೇಟಿ ನೀಡಿದ ಗದಗ ಉಪ ವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ತಹಸೀಲ್ದಾರ್ ಶ್ರೀನಿವಾಸಮೂರ್ತಿ ಕುಲಕರ್ಣಿ ಹಾಗೂ ಗದಗ ಇಒ ಎನ್.ಎಚ್. ಓಲೇಕಾರ ಗ್ರಾಮಸ್ಥರೊಂದಿಗೆ ಚರ್ಚೆ ನಡೆಸಿದರು.
ಆದರೆ, ಅಧಿಕಾರಿಗಳ ಮನವಿಗೆ ಮಣಿಯದ ಗ್ರಾಮಸ್ಥರು ಸೊಪ್ಪು ಹಾಕಲಿಲ್ಲ. ‘ಚಿಂಚಲಿ ಗ್ರಾಪಂನಲ್ಲಿ ಗೂಂಡಾಗಿರಿ ನಡೆಯತ್ತಿದೆ. ಹೀಗಾಗಿ ಗ್ರಾಮದ ಯಾವುದೇ ಕೆಲಸ ಆಗುತ್ತಿಲ್ಲ. ಈ ಗ್ರಾಪಂನಲ್ಲಿ ಹತ್ತಾರು ಜನ ಪಿಡಿಒಗಳು ಬಂದು ಹೋಗಿದ್ದಾರೆ. ನಮಗೆ ಪ್ರತ್ಯೇಕ ಗ್ರಾಪಂ ಬೇಕೇ ಬೇಕು. ಅಲ್ಲಿಯವರೆಗೆ ಎಲ್ಲ ಚುನಾವಣೆಗಳನ್ನು ಬಹಿಷ್ಕರಿಸುತ್ತೇವೆ’ ಎಂದು ಪಟ್ಟು ಹಿಡಿದರು.
ಪ್ರತ್ಯೇಕ ಗ್ರಾಪಂ ಸಾಧ್ಯವಾಗದಿದ್ದರೆ ಚಿಂಚಲಿ ಗ್ರಾಪಂ ಕಾರ್ಯಾಲಯವನ್ನು ನೀಲಗುಂದ ಗ್ರಾಮಕ್ಕೆ ಸ್ಥಳಾಂತರಿಸಬೇಕು. ಇಲ್ಲಿ ಸುಸಜ್ಜಿತ ಕಟ್ಟಡವಿದೆ. ತಕ್ಷಣ ಈ ಪ್ರಕ್ರಿಯೆ ನಡೆಯಬೇಕು. ಇಲ್ಲವಾದಲ್ಲಿ ಚುನಾವಣೆ ಬಹಿಷ್ಕಾರ ಮಾಡಿಯೇ ತೀರುತ್ತೇವೆ ಎಂದು ತಮ್ಮ ಬೇಡಿಕೆಯನ್ನು ಪುನರುಚ್ಚರಿಸಿದರು.
ಪಿಡಿಒ ಎಸ್.ಎಸ್. ತೊಂಡಿಹಾಳ, ಗ್ರಾಮ ಲೆಕ್ಕಾಧಿಕಾರಿ ಶರಣಪ್ಪ ಹುಯಿಲ್ಗೋಳ, ಕುಬೇರಡ್ಡಿ ಬಂಗಾರಿ, ಶಂಕ್ರಪ್ಪ ಅದರಗುಂಚಿ, ಚನ್ನಪ್ಪ ತಿರ್ಲಾಪೂರ, ಶಿವಪ್ಪ ಕೋಳಿವಾಡ, ಬಸವರಾಜ ಭಜಂತ್ರಿ, ಪ್ರಭು ಅಂಗಡಿ, ಬಸವರಾಜ ಜಕ್ಕಮ್ಮನವರ, ಮಲ್ಲಪ್ಪ ಬಾಲರಡ್ಡಿ, ವಿನಾಯಕ ಬಂಗಾರಿ, ಶೇಖಪ್ಪ ಕಾಟೊಳ್ಳಿ, ಮಹಾದೇವಪ್ಪ ಚಿಕ್ಕಗಸಿ, ಮಾನಪ್ಪ ಬಡಿಗೇರ, ಯಲ್ಲಪ್ಪ ಕುರ್ತಕೋಟಿ, ಪ್ರವೀಣ ಬಂಗಾರಿ, ನವೀನ ಬಂಗಾರಿ, ಬಂಡೆಪ್ಪ ಕಂಪ್ಲಿ, ಹನುಮಪ್ಪ ವಗ್ಗನವರ ಸೇರಿದಂತೆ ಪ್ರತ್ಯೇಕ ಗ್ರಾಪಂ ಹೋರಾಟ ಸಮೀತಿ ಸದಸ್ಯರು ಹಾಗೂ ಗ್ರಾಮಸ್ಥರು ಹಾಜರಿದ್ದರು.
ಪ್ರತ್ಯೇಕ ಗ್ರಾಪಂ ಮಾಡಲು ಸರ್ಕಾರದ ಮಟ್ಟದಲ್ಲಿ ಆದೇಶವಾಗಬೇಕು. ವಿಶೇಷ ಪ್ರಕರಣಗಳಲ್ಲಿ ಮಾಡಲು ಕಾನೂನು ಮೊರೆ ಹೋಗಬಹುದು. ಯಾವುದಕ್ಕೂ ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಿ ಮುಂದಿನ ಕ್ರಮ ಕೈಗೊಳ್ಳುವಂತೆ ಕೋರುತ್ತೇನೆ.| ರಾಯಪ್ಪ ಹುಣಸಿಗಿ, ಗದಗ ಉಪ ವಿಭಾಗಾಧಿಕಾರಿ
ಚಿಂಚಲಿಯಲ್ಲಿ 25 ನಾಮಪತ್ರ ಸಲ್ಲಿಕೆ
ಚಿಂಚಲಿ ಗ್ರಾಪಂನಲ್ಲಿ ಗುರುವಾರದವರೆಗೆ ಒಟ್ಟು 25 ನಾಮಪತ್ರ ಸಲ್ಲಿಕೆಯಾಗಿದ್ದು, ಚಿಂಚಲಿ ಗ್ರಾಮದ ವಾರ್ಡ್ ನಂ.1ರಲ್ಲಿ 6, ವಾರ್ಡ್ ನಂ. 2ರಲ್ಲಿ 4, ವಾರ್ಡ್ ನಂ. 3ರಲ್ಲಿ 15 ನಾಮಪತ್ರ ಸಲ್ಲಿಕೆಯಾಗಿವೆ. ಚಿಂಚಲಿ ಗ್ರಾಮದ ಅಭ್ಯರ್ಥಿಗಳು ಮಾತ್ರ ನಾಮಪತ್ರ ಸಲ್ಲಿಸಿದ್ದು, ಇದೇ ಗ್ರಾಪಂ ವ್ಯಾಪ್ತಿಗೆ ಒಳಪಡುವ ಕಲ್ಲೂರು ಹಾಗೂ ನೀಲಗುಂದ ಗ್ರಾಮಗಳಲ್ಲಿ ಇದುವರೆಗೆ ಯಾರೂ ನಾಮಪತ್ರ ಸಲ್ಲಿಸಿಲ್ಲ. ಪ್ರತ್ಯೇಕ ಗ್ರಾಪಂಗಾಗಿ ಅವರ ಹೋರಾಟ ಮುಂದುವರಿದಿದೆ.