

ಮೈಸೂರು: ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹಾದೂರ್ ಶಾಸ್ತ್ರಿ ಜಯಂತಿ ಅಂಗವಾಗಿ ಸೋಮವಾರ ಗಾಂಧೀಜಿ ಅವರ ಕನಸಿನ ಸ್ವಚ್ಛ ಗ್ರಾಮ ಭಾರತ ಪರಿಕಲ್ಪನೆಗೆ ಅನುಗುಣವಾಗಿ ಇಡೀ ಒಂದು ಹಳ್ಳಿಯನ್ನು ಸ್ವಚ್ಛಗೊಳಿಸುವ ಮೂಲಕ ಅನ್ವೇಷಣಾ ಕಾಲೇಜಿನ ವಿದ್ಯಾರ್ಥಿಗಳು ಸಾರ್ಥಕ್ಯ ಮೆರೆದರು.
ಹುಣಸೂರು ತಾಲೂಕಿನ ಬಿಳಿಗೆರೆ ಗ್ರಾಮ ಅನ್ವೇಷಣಾ ಪದವಿ ಪೂರ್ವ ಕಾಲೇಜಿನ 270 ವಿದ್ಯಾರ್ಥಿಗಳು ಸಮೀಪದ ಮಾರಗೌಡನ ಹಳ್ಳಿಯ ಬೀದಿ ಬೀದಿಗಳನ್ನು ಸ್ವಚ್ಛಗೊಳಿಸುವ ಮೂಲಕ ಗಾಂಧಿ ಜಯಂತಿಗೊಂದು ಅರ್ಥ ಮೂಡಿಸಿದರು.
ಮೊದಲಿಗೆ ಕಾಲೇಜಿನ ಆವರಣದಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹಾದೂರ್ ಶಾಸ್ತ್ರಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಹಾತ್ಮರನ್ನು ಸ್ಮರಿಸಿದರು. ನಂತರ ಮಾರಗೌಡನಹಳ್ಳಿಗೆ ತೆರಳಿ ಊರಿನ ಹೆದ್ದಾರಿಯಿಂದ ಸ್ವಚ್ಛತಾ ಕಾರ್ಯ ಆರಂಭಿಸಿ, ಬೀದಿಗಳನ್ನು ಸ್ವಚ್ಛಗೊಳಿಸುವ ಮೂಲಕ ಜನರಿಗೆ ಪ್ಲಾಸ್ಟಿಕ್‌ಮುಕ್ತ ಹಳ್ಳಿಯ ಬಗ್ಗೆ ಜಾಗೃತಿ ಮೂಡಿಸಿದರು. ವಿದ್ಯಾರ್ಥಿಗಳು ತಮ್ಮ ಹಳ್ಳಿಗೆ ಬಂದು ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವುದನ್ನು ನೋಡಿದ ಗ್ರಾಮಸ್ಥರು ಸಂತೋಷದಿಂದ ವಿದ್ಯಾರ್ಥಿಗಳಿದ್ದಲ್ಲಿಗೆ ಬಂದು ಚಹಾ, ತಂಪು ಪಾನೀಯ ಕೊಟ್ಟು ತುಂಬು ಮನಸ್ಸಿನಿಂದ ಬೆಂಬಲ ನೀಡಿದ್ದು ವಿದ್ಯಾರ್ಥಿಗಳ ಮನಸ್ಸಿನಲ್ಲಿ ಸಂತಸ ಮೂಡಲು ಕಾರಣವಾಯಿತು.
ಸ್ವಚ್ಛತಾ ಕಾರ್ಯ ಮುಗಿದ ನಂತರ ಗ್ರಾಮದ ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳನ್ನೆಲ್ಲ ಕೂರಿಸಿ ಗಾಂಧಿ ಹಾಗೂ ಶಾಸ್ತ್ರಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದರು. ಗ್ರಾಮದ ಮುಖಂಡರಾದ ಪುಟ್ಟನಿಂಗಪ್ಪ, ಶಿವಕುಮಾರ್, ಕಾಂತರಾಜೇಗೌಡ ಹಾಗೂ ಶಾಲೆಯ ಮುಖ್ಯಶಿಕ್ಷಕ ಗೋವಿಂದರಾಜು ಭಾಗವಹಿಸಿದ್ದರು.
ಅನ್ವೇಷಣಾ ಸಂಸ್ಥೆಯ ಮುಖ್ಯಸ್ಥರಾದ ಎಚ್.ಕೆ.ಚಂದ್ರಮೋಹನ್, ಪ್ರಾಂಶುಪಾಲ ಎಚ್.ಎನ್.ಗಿರೀಶ್, ಉಪಪ್ರಾಂಶುಪಾಲರಾದ ಆಶಾ ನಂದೀಶ್, ಸಂಚಾಲಕರಾದ ರಘುನಂದನ್, ರವಿಚಂದ್ರ, ಉಪನ್ಯಾಸಕರಾದ ಆಶಾರಾಣಿ, ರೂಹಿ ಅಫ್ಸಾನ, ವಸೀಂ ಪಾಷ ಇತರರಿದ್ದರು.