ವಿದ್ಯಾರ್ಥಿ ಜೀವನದ ಕಾಲಘಟ್ಟ ಅದ್ಭುತ

h2-JG Collage 1
Published on

ಹುಬ್ಬಳ್ಳಿ: ವಿದ್ಯಾರ್ಥಿ ಜೀವನದ ಘಟ್ಟವೇ ಅತ್ಯದ್ಭುತ. ಕಳೆದ ಹೋದ ದಿನಗಳನ್ನು ಕಿಟಕಿ, ಬಾಗಿಲು ಸೇರಿ ಪ್ರತಿ ಸ್ಥಳವೂ ಕತೆಗಳನ್ನು ಹೇಳುತ್ತಿರುತ್ತವೆ ಎಂದು ಹೈಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ಸುಭಾಷ ಅಡಿ ಹೇಳಿದರು.

ಇಲ್ಲಿಯ ವಿದ್ಯಾನಗರದ ಕೆಎಲ್‌ಇ ಸಂಸ್ಥೆಯ ಜಗದ್ಗುರು ಗಂಗಾಧರ ವಾಣಿಜ್ಯ ಮಹಾವಿದ್ಯಾಲಯದ ಆವರಣದಲ್ಲಿ ಭಾನುವಾರ ಏರ್ಪಡಿಸಿದ್ದ ‘ಪುನರ್‌ಮಿಲನ’ 75ನೇ ವರ್ಷದ ಸ್ನೇಹ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಎಲ್ಲರ ಜೀವನದಲ್ಲಿ ವಿದ್ಯಾರ್ಥಿ ಕಾಲಘಟ್ಟ ಮಹತ್ವದ್ದು. ಆ ಸಮಯದಲ್ಲಿ ಕಾಲೇಜ್‌ನಲ್ಲಿ ಕಳೆದ ದಿನಗಳನ್ನು ಖುಷಿಯಿಂದ ಹಂಚಿಕೊಂಡು, ವಿನಿಮಯ ಮಾಡಿಕೊಳ್ಳುವ ಸುಸಂದರ್ಭ ಈಗ ಬಂದಿರುವುದು ನಿಮ್ಮೆಲ್ಲರ ಪುಣ್ಯ ಎಂದರು.

ವಿದ್ಯಾರ್ಥಿ ಜೀವನದಲ್ಲಿ ಜಾತಿ, ಮತ, ಪಂಥಗಳಿರುವುದಿಲ್ಲ. ಎಲ್ಲರೊಂದಿಗೆ ಬೆರೆಯುವ ಸಕಾಲವದು. ಗೆಳೆತನದ ಪ್ರೀತಿ ಎಂದೆಂದಿಗೂ ಶಾಶ್ವತ ಹೊರತು ಅಧಿಕಾರ, ಸ್ಥಾನಮಾನಗಳಲ್ಲ. ನಮಗೆ ಉನ್ನತ ಬದುಕು ಕೊಟ್ಟವರು ದೇವರ ಸಮಾನವಾದ ಗುರುಗಳು. ನಮ್ಮ ಜೀವನ ರೂಪಿಸುವಲ್ಲಿ ಗುರುಗಳ ಪಾತ್ರ ಮಹತ್ವದ್ದು ಎಂದು ಬಣ್ಣಿಸಿದರು.

ಕೆಎಲ್‌ಇ ಸಂಸ್ಥೆ ಇರದಿದ್ದರೆ ಎಷ್ಟೋ ಜನ ಶಿಕ್ಷಣದಿಂದ ವಂಚಿತರಾಗುತ್ತಿದ್ದರು. ಜಾಗತಿಕ ಮಟ್ಟದಲ್ಲಿ ಕೆಎಲ್‌ಇ ಸಂಸ್ಥೆ ಹೆಸರು ಮಾಡಿದೆ. ಇದಕ್ಕೆ ಸಪ್ತ ಋಷಿಗಳೇ ಕಾರಣ. ಇಂತಹ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ ನೀವೆಲ್ಲರೂ ಧನ್ಯರು ಎಂದು ಹೊಗಳಿದರು.

ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಮಾತನಾಡಿ, ಸಂಸ್ಥೆಯ ಮೇಲಿನ ಅಭಿಮಾನದಿಂದ ಇಂದು ಕಾಲೇಜ್ ಆವರಣದಲ್ಲಿ ಇಷ್ಟೊಂದು ಜನ ಹಳೆ ವಿದ್ಯಾರ್ಥಿಗಳು ಸೇರಿದ್ದಾರೆ. ಯಾವತ್ತೂ ವಿದ್ಯಾರ್ಥಿಗಳು ಮಾಜಿ ಆಗುವುದಿಲ್ಲ. ಅವರೆಂದೆಂದಿಗೂ ವಿದ್ಯಾರ್ಥಿಗಳೇ. ಕರ್ನಾಟಕ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಹೆಚ್ಚು ಮಹತ್ವ ಪಡೆದ ಮಹಾವಿದ್ಯಾಲಯ ಜೆ.ಜಿ. ವಾಣಿಜ್ಯ ಕಾಲೇಜ್. ನಾನು ಇಲ್ಲಿ ವ್ಯಾಸಂಗ ಮಾಡದಿದ್ದರೂ ನನಗೆ ಅತಿ ಹೆಚ್ಚು ಸಮೀಪದ ಕಾಲೇಜ್ ಇದು. ವಿದ್ಯಾರ್ಥಿಗಳು ಕಾಲೇಜ್ ಬಗ್ಗೆ ಚೆನ್ನಾಗಿ ಮಾತನಾಡುವುದೇ ಕಾಲೇಜಿಗೆ ಹೆಮ್ಮೆಯ ಸಂಗತಿ. ವಿದ್ಯಾರ್ಥಿಗಳೆಲ್ಲರೂ ನಮ್ಮ ಕಾಲೇಜಿನ ರಾಯಭಾರಿಗಳು. ಕೆಎಲ್‌ಇ ಸಂಸ್ಥೆಯ 110ನೇ ಸಾಮಾನ್ಯ ಸಭೆ ಇದೆ. ವಾರ್ಷಿಕ ಬಜೆಟ್ 3,800 ಕೋಟಿ ರೂ. ಸಂಸ್ಥೆಯದ್ದು. ಕೆಎಲ್‌ಇ ವೈದ್ಯಕೀಯ ಕಾಲೇಜ್ ಅನ್ನು 600 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಏಪ್ರಿಲ್‌ನಲ್ಲಿ ಲೋಕಾರ್ಪಣೆ ಮಾಡಲಾಗುವುದು ಎಂದರು.

ನಿವೃತ್ತ ಪ್ರಾಚಾರ್ಯ ಆರ್. ನಟರಾಜ ಮಾತನಾಡಿ, ವಿದ್ಯಾರ್ಥಿಗಳಿಲ್ಲದೇ ನಾವು ಶೂನ್ಯ. ಗುರುಗಳ ಪ್ರಭಾವ ಸಮಾಜದ ಮುಂದೆ ಬಣ್ಣಿಸುವವರು ವಿದ್ಯಾರ್ಥಿಗಳು. ನಮ್ಮ ಬೆಳಗಣಿಗೆಗೆ ನೀವೇ ಕಾರಣಕರ್ತರು ಎಂದರು.

ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಎಂ.ಆರ್. ಪಾಟೀಲ, ಕಾರ್ಯಕ್ರಮ ಸಂಯೋಜಕ ಸುನೀಲ ದೇವರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಗುರುಗಳು ಹಾಗೂ ಸಿಬ್ಬಂದಿ ಮತ್ತು ದಾನಿಗಳನ್ನು ಸನ್ಮಾನಿಸಲಾಯಿತು. ಕಾಲೇಜ್‌ನ ಹಿರಿಯ ಹಳೆಯ ವಿದ್ಯಾರ್ಥಿಗಳಾದ ನಿವೃತ್ತ ಕುಲಸಚಿವ ಎಸ್.ಆರ್. ಹಿರೇಮಠ (99), ವಿ.ಜಿ. ಪಾಟೀಲ (88) ಅವರನ್ನು ಗೌರವಿಸಲಾಯಿತು.

ಕೆಎಲ್‌ಇ ಸಂಸ್ಥೆ ನಿರ್ದೇಶಕರಾದ ಶಂಕರಣ್ಣ ಮುನವಳ್ಳಿ, ಎಸ್.ಸಿ. ಮೆಟಗುಡ್, ಕುಂದಗೋಳ ಶಾಸಕ ಎಂ.ಆರ್. ಪಾಟೀಲ, ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ಸಂಘದ ಖಜಾಂಚಿ ಬಾಬಾ ಬೂಸದ, ಪ್ರಾಚಾರ್ಯರಾದ ಪ್ರೊ.ಎಸ್.ಎಲ್. ಪಾಟೀಲ, ಡಾ. ಡಿ.ಕೆ. ವಾಘಮೋಡೆ, ಡಾ.ಬಿ.ಎಸ್. ಮಾಳವಾಡ, ಎಸ್.ಡಿ. ಐಹೊಳಿ ಇತರರು ಇದ್ದರು. ಡಾ. ನೇತ್ರಾವತಿ ಗಬ್ಬೂರ ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮಗಳು ನಂತರ ನಡೆದವು.

ಜೆಜಿಸಿಸಿ ವಿದ್ಯಾರ್ಥಿಗಳ ಅದ್ಭುತ ಸಾಧನೆ: ನಮ್ಮದು 1996ನೇ ಬ್ಯಾಚ್. ನಮ್ಮ ಈ ಕಾಲೇಜ್‌ನ ವಿದ್ಯಾರ್ಥಿಗಳು ಅದ್ಭುತವಾಗಿ ಸಾಧನೆ ಮಾಡಿದ್ದಾರೆ. ಇದರ ಹಿಂದೆ ಗುರುಗಳ ಆಶೀರ್ವಾದವಿದೆ. ಅವರು ಕಲಿಸಿಕೊಟ್ಟ ಟೀಚಿಂಗ್ ಮೆಥಡ್ ದಾರಿ ದೀಪವಾಗಿವೆ. ನಾವಿನ್ನೂ ಕಲಿಯುತ್ತಿದ್ದೇವೆ. ವಿದ್ಯಾರ್ಥಿಗಳಾಗಿದ್ದಾಗ ಅಷ್ಟೇ ಅಲ್ಲ, ಈಗಲೂ ಕಲಿಯುತ್ತಿರಬೇಕು ಎಂದ ಅವರು, ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಂತೆ ನಮ್ಮ ಕಾಲೇಜ್‌ನ ಹಳೆಯ ವಿದ್ಯಾರ್ಥಿಗಳ ಪುನರ್‌ಮಿಲನ ಕಾರ್ಯಕ್ರಮ ಏರ್ಪಾಟಾಗಿದೆ ಎಂದು ಜೆ.ಜಿ. ಕಾಮರ್ಸ್ ಕಾಲೇಜ್‌ನ ಹಳೆಯ ವಿದ್ಯಾರ್ಥಿ, ವಿಆರ್‌ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ. ಆನಂದ ಸಂಕೇಶ್ವರ ಅವರು ಬಣ್ಣಿಸಿದರು.

ಚಿಕ್ಕ ವಯಸ್ಸಿನಲ್ಲಿಯೇ ಕೆಲಸ ಆರಂಭಿಸಬೇಕು ಎಂದು ನಮ್ಮ ತಂದೆ ಡಾ. ವಿಜಯ ಸಂಕೇಶ್ವರ, ಉದ್ಯಮಿಗಳಾದ ನಾರಾಯಣಮೂರ್ತಿ, ಸುಧಾಮೂರ್ತಿ, ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ ಅವರು ಹೇಳುತ್ತಿರುತ್ತಾರೆ. ಅಂತೆಯೇ ನಾನು ಕಾಲೇಜ್‌ಗೆ ಬಂದು 2 ಗಂಟೆ ಇದ್ದರೆ, 5 ತಾಸು ನನ್ನ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೆ. ಬಳಿಗಾರ, ಶಿವನಗುತ್ತಿ ಸರ್‌ಗಳು ಪಾಠ ಚೆನ್ನಾಗಿ ಮಾಡುತ್ತಿದ್ದರು. ನಾನು ಟ್ಯೂಷನ್‌ಗೂ ಹೋಗುತ್ತಿದ್ದೆ ಎಂದು ಡಾ. ಆನಂದ ಅವರು ಹಳೆಯ ನೆನಪುಗಳನ್ನು ಮೆಲಕು ಹಾಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net