ಬೇಡಿಕೆ ಈಡೇರಿಸದಿದ್ದರೆ ಹೋರಾಟ ತೀವ್ರ: ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಎಚ್ಚರಿಕೆ

10
Published on

ಮೈಸೂರು: ನಮ್ಮ ಬೇಡಿಕೆ ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ರೂಪಿಸಲಾಗುವುದು ಎಂದು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಹೇಳಿದರು.

ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಮಂಗಳವಾರ ಆಯೋಜಿಸಿದ್ದ ರೈತರ ಕುಂದು ಕೊರತೆ ಕುರಿತ ಸಭೆಯಲ್ಲಿ ಅವರು ಮಾತನಾಡಿದರು.

ಕಬ್ಬಿನ ಬಾಕಿ ಹಣ ನೀಡುವುದು, ಸ್ವಾಮಿನಾಥನ್ ವರದಿ ಜಾರಿಗೊಳಿಸುವುದು, ರೈತ ವಿರೋಧಿ ಕಾಯ್ದೆಗಳನ್ನು ರದ್ದುಗೊಳಿಸುವುದು ಸೇರಿದಂತೆ ರೈತರ ಸಮಸ್ಯೆಗಳ ಬಗ್ಗೆ ಗಮನಹರಿಸಬೇಕು. ಇಲ್ಲವಾದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಹೇಳಿದರು.

ಪ್ರಸಕ್ತ ಸಾಲಿಗೆ ಕಬ್ಬಿನ ಕಟಾವು ಹಂಗಾಮು ಮುಗಿದಿದ್ದು, ಮುಂದಿನ ಸಾಲಿಗೆ ಪ್ರತಿಟನ್ ಕಬ್ಬಿಗೆ 5 ಸಾವಿರ ರೂ. ನಿಗದಿ ಮಾಡಬೇಕು, ಕಬ್ಬಿನ ತೂಕದಲ್ಲಿ ಆಗುತ್ತಿರುವ ಮೋಸ ತಪ್ಪಿಸಲು ಸಕ್ಕರೆ ಕಾರ್ಖಾನೆಗಳ ಮುಂದೆ ತೂಕ ಮಾಪನ ಅಳವಡಿಸಬೇಕು. ಅಲ್ಲದೆ ಇಳುವರಿಯಲ್ಲಿನ ಮೋಸ ತಪ್ಪಿಸಲು ಸ್ಥಳೀಯ ತಜ್ಞರ ಸಮಿತಿ ರಚಿಸುವ ಜತೆಗೆ ಸರ್ಕಾರ ಕಬ್ಬಿನ ಬಾಕಿ 950 ಕೋಟಿ ರೂ. ಹಣ ನೀಡಬೇಕೆಂದು ಆಗ್ರಹಿಸಿದರು.

ರಾಜ್ಯದಲ್ಲಿ ಆನ್‌ಲೈನ್ ಗೇಮ್ ಎಂಬುದು ಕ್ಯಾನ್ಸರ್‌ನಂತೆ ಹರಡುತ್ತಿದೆ. ಇದಕ್ಕೆ ಸಿಲುಕಿ ಯುವಕರು, ಅಮಾಯಕರು ಹಣ ಕಳೆದುಕೊಂಡು ಆತ್ಮಹತ್ಯೆ ದಾರಿ ಹಿಡಿಯುತ್ತಿದ್ದಾರೆ. ಆದ್ದರಿಂದ ಇಂತಹ ಆನ್‌ಲೈನ್ ಗೇಮ್‌ಗಳನ್ನು ರಾಜ್ಯದಲ್ಲಿ ನಿಷೇಧಿಸಬೇಕು. ಇಲ್ಲದಿದ್ದರೆ ಜಿಲ್ಲಾಧ್ಯಂತ ಜಿಲ್ಲಾಧಿಕಾರಿಗಳು, ಪೊಲೀಸ್ ಅಧಿಕಾರಿಗಳ ಕಚೇರಿ ಎದುರು ಜೂಜಾಟದ ವಿರುದ್ಧ ಚಳವಳಿ ನಡೆಸಲಾಗುವುದು ಎಂದು ಎಚ್ಚರಿಸಿದರು.

ಕಾವೇರಿ ಗ್ರಾಮೀಣ ಬ್ಯಾಂಕ್ ರೈತರ ವಿರುದ್ಧ ನ್ಯಾಯಾಲಯಕ್ಕೆ ದಾವೆ ನೀಡುವ ನೋಟಿಸ್ ಮನೆಗಳಿಗೆ ಹಂಚುತ್ತಿದ್ದು, ಸಾಲ ವಸೂಲಿಗೆ ಒತ್ತಡ ಹೆಚ್ಚುತ್ತಿದೆ. ಈ ಬಗ್ಗೆ ಜಿಲ್ಲಾಡಳಿತ ಕ್ರಮಕೈಗೊಂಡು ಈ ವಿಷಯದ ಬಗ್ಗೆ ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಬೇಕಿದೆ. ನದಿ ಮೂಲದಿಂದ ಕೆರೆಕಟ್ಟೆಗಳಿಗೆ ನೀರು ತುಂಬಿಸುವುದನ್ನು ನಿಲ್ಲಿಸಲಾಗಿದ್ದು, ತಕ್ಷಣವೇ ಜಿಲ್ಲೆಯ ಕಾಲುವೆ, ನದಿಯ ಮೂಲದಿಂದ ನೀರು ತುಂಬಿಸಲು ಮುಂದಾಗಬೇಕು. ಕೃಷಿ ಪಂಪ್ ಸೆಟ್‌ಗಳಿಗೆ ಅಕ್ರಮ ಸಕ್ರಮ ಯೋಜನೆ ಮೂಲಕ ವಿದ್ಯುತ್ ಪೂರೈಸಬೇಕು ಎಂದು ಒತ್ತಾಯಿಸಿದರು.

ಸಂಘದ ಖಜಾಂಚಿ ಕೆರೆಹುಂಡಿ ರಾಜಣ್ಣ, ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ಸ್ವಾಮಿರಾಜ್, ಚಾಮರಾಜನಗರ ಜಿಲ್ಲಾಧ್ಯಕ್ಷ ಹಾಲಿನ ನಾಗರಾಜ್, ಮೈಸೂರು ಅಧ್ಯಕ್ಷ ದೇವೇಂದ್ರ ಕುಮಾರ್, ಮುಖಂಡರಾದ ಪ್ರೊ.ಶಿವರಾಜಪ್ಪ, ಮಹದೇವಯ್ಯ, ಶಿವರುದ್ರಪ್ಪ, ಮಲಿಯೂರು ಮಹೇಂದ್ರ, ಪ್ರಕಾಶ್ ಗಾಂಧಿ, ಬನ್ನೂರು ಕೃಷ್ಣಪ್ಪ, ಬಸವರಾಜ್, ರಾಮಣ್ಣ, ಮೋಹನ್, ಶಿವಣ್ಣ, ಗುರುಸ್ವಾಮಿ, ಮಾದಪ್ಪ, ಮಹದೇವಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net