ಪರಿಹಾರ ವಿತರಿಸದಿದ್ದರೆ ಹೋರಾಟ ತೀವ್ರ

byd manavi
Published on

ಬ್ಯಾಡಗಿ: ಕಳಪೆ ಮೆಣಸಿನಕಾಯಿ ಬೀಜ ಪೂರೈಸಿದ ಖಾಸಗಿ ಕಂಪನಿಯಿಂದ ಭಾನುವಾರ ಸಂಜೆಯೊಳಗೆ ರೈತರಿಗೆ ಪರಿಹಾರ ಮೊತ್ತ ವಿತರಿಸದಿದ್ದಲ್ಲಿ ತಾಲೂಕಿನಾದ್ಯಂತ ಮೇ 26ರಿಂದ ಸರ್ಕಾರಿ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು ಪಾಲ್ಗೊಳ್ಳಲು ಬಿಡುವುದಿಲ್ಲ ಎಂದು ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ತಿಳಿಸಿದರು.

ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಶಾಸಕರ ಕಾರ್ಯಾಲಯ ಎದುರು ಶುಕ್ರವಾರ ಮೂರನೇ ದಿನದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ತಾಲೂಕಿನಲ್ಲಿ ಕಳಪೆ ಬೀಜ ಪೂರೈಸಿದ ಕಂಪನಿಯಿಂದ ಪರಿಹಾರ ಕೊಡಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದೇವೆ. ಆದರೆ, ಮಾರಾಟ ಅಂಗಡಿಯವರು ಹಾಗೂ ಕಂಪನಿ ವ್ಯವಸ್ಥಾಪಕರು ರೈತರ ವಿರುದ್ಧ ತಿರುಗಿ ಬಿದ್ದಿದ್ದರಿಂದ ಹೋರಾಟ ತೀವ್ರವಾಗಿದೆ. ಈ ಮಧ್ಯೆ ಗುಂಡೇನಹಳ್ಳಿ ಗ್ರಾಮದಲ್ಲಿ ಮತ್ತೆ ಕಳಪೆ ಬೀಜಗಳನ್ನೇ ಪೂರೈಸಲಾಗಿದೆ. ಸೌಜನ್ಯಕ್ಕಾದರೂ ತಾಲೂಕಾಡಳಿತ, ಜಿಲ್ಲಾಡಳಿತ, ರೈತರಿಗೆ ಸಮಸ್ಯೆಗೆ ಸ್ಪಂದಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಕಳಪೆ ಬೀಜ ವಿರುದ್ಧ ಹೋರಾಟ ಹಮ್ಮಿಕೊಳ್ಳುತ್ತೇವೆ. ಕೂಡಲೇ ಜಿಲ್ಲಾಧಿಕಾರಿಗಳು ಕಠಿಣ ಕ್ರಮ ತೆಗೆದುಕೊಂಡು ನಷ್ಟಗೊಂಡ ರೈತರಿಗೆ ಪರಿಹಾರ ಕೊಡಿಸಬೇಕು ಎಂದು ಒತ್ತಾಯಿಸಿದರು.

ರೈತ ಸಂಘದ ತಾಲೂಕಾಧ್ಯಕ್ಷ ರುದ್ರಗೌಡ್ರ ಕಾಡನಗೌಡ್ರ ಮಾತನಾಡಿ, ಜಿಲ್ಲಾದ್ಯಂತ ಖಾಸಗಿ ಕಂಪನಿಯವರ ಕಳಪೆ ಬೀಜ ಮಾರಾಟದ ದಂಧೆಯಲ್ಲಿ ಅಧಿಕಾರಿಗಳೇ ನೇರವಾಗಿ ಶಾಮೀಲಾಗಿರುವ ಸಂಶಯ ಕಾಡುತ್ತಿದೆ. ಎರಡು ವರ್ಷಗಳಿಂದ ಶೇ. 90ರಷ್ಟು ಬೀಜ ಮಾರಾಟಗಾರರು ಪರವಾನಿಗೆ ಪಡೆದಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಘಟನೆಯನ್ನು ಗಂಭೀರವಾಗಿ ಪರಿಗಣಿಸಿ, ತಪ್ಪಿತಸ್ಥ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡುವಂತೆ ಒತ್ತಾಯಿಸಿದರು.

ರೈತಸಂಕುಲಕ್ಕೆ ಅನ್ಯಾಯವಾದಲ್ಲಿ ಚಳವಳಿ ಮಾಡುವುದು ನಮ್ಮ ಹಕ್ಕಾಗಿದೆ. ಕಳಪೆ ಬೀಜದ ಬ್ಯಾಡಗಿ ಹೋರಾಟ ರಾಜ್ಯಕ್ಕೆ ಮಾದರಿಯಾಗಲಿದೆ ಎಂದರು.

ರೈತಸಂಘದ ಗಂಗಣ್ಣ ಎಲಿ, ಚಿಕ್ಕಪ್ಪ ಛತ್ರದ, ಜಾನ್ ಪುನೀತ್, ಫಕೀರೇಶ ಅಜಗೊಂಡ್ರ, ಮೌನೇಶ ಕಮ್ಮಾರ, ಪ್ರಕಾಶ ಕೋಡಿಹಳ್ಳಿ, ಕೆ.ವಿ.ದೊಡ್ಡಗೌಡ್ರ, ವೀರೇಶ ದೇಸಾಯಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net