

ಚಳ್ಳಕೆರೆ: ನಾಡಿನ ಸಾಂಸ್ಕೃತಿಕ ವೀರರು ಮತ್ತು ಶರಣರು, ಸಂತರ ಬದುಕಿನ ಆದರ್ಶವನ್ನು ಸಮಾಜಕ್ಕೆ ಪರಿಚಯಿಸುವ ಉದ್ದೇಶದಿಂದ ಜಯಂತಿ ಆಚರಣೆ ಜಾರಿಗೊಳಿಸಿದ ಕೀರ್ತಿ ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ತಾಲೂಕು ಆಡಳಿತ ನಗರದಲ್ಲಿ ಗುರುವಾರ ಆಯೋಜಿಸಿದ್ದ ಶರಣ ನುಲಿಯ ಚಂದಯ್ಯ, ಬ್ರಹ್ಮಶ್ರೀ ನಾರಾಯಣಗುರು ಜಯಂತ್ಯುತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
12ನೇ ಶತಮಾನದಲ್ಲಿ ಬಸವಣ್ಣನ ಅನುಯಾಯಿಗಳಾಗಿದ್ದ ನುಲಿಯ ಚಂದಯ್ಯನಂತಹ ಅನೇಕ ಶರಣ-ಶರಣೆಯರು ಸಾಮಾಜಿಕ ಅಸಮಾನತೆಗಳ ವಿರುದ್ಧ ಹೋರಾಟ ಮಾಡಿದವರು. ಮೌಢ್ಯ, ಜಾತಿ ತಾರತಮ್ಯ ಕೊನೆಗಾಣಿಸಿ, ಸಮ ಸಮಾಜ ನಿರ್ಮಾಣಕ್ಕೆ ತಮ್ಮ ಬದುಕನ್ನು ಮುಡುಪಾಗಿಸಿದ ಮಹಾತ್ಮರು ಎಂದು ಬಣ್ಣಿಸಿದರು.
ಸಾಕ್ಷರತಾ ಜಾಗೃತಿಯಲ್ಲಿ ಹೆಸರು ಪಡೆದಿರುವ ಕೇರಳದಲ್ಲಿ ಜನಿಸಿದ ಬ್ರಹ್ಮಗುರು ನಾರಾಯಣಗುರು ಅವರ ಶಿಕ್ಷಣದ ಜಾಗೃತಿ ಮತ್ತು ಮಾನವನ ಸ್ವಯಂ ಶಕ್ತಿಯೇ ದೇವರು ಎಂದು ಸಾರಿದ ದಾರ್ಶನಿಕರು. ಒಮ್ಮೆ ಗಾಂಧೀಜಿ ಅವರು ನಾರಾಯಣಗುರು ಬಳಿಗೆ ಹೋಗಿ ಭೇಟಿ ಮಾಡಿರುವುದು ಅವರ ಬದುಕಿನ ಆದರ್ಶಕ್ಕೆ ಸಾಕ್ಷಿ ಎಂದು ಹೇಳಿದರು.
ದುರಾಸೆ, ವಿಲಾಸಿ ಬದುಕಿನ ಹಿಂದೆ ಓಡುತ್ತಿರುವ ಸಮಾಜಕ್ಕೆ ಬಸವ, ಬುದ್ಧ, ಅಂಬೇಡ್ಕರ್ ಆದರ್ಶ ಸೇರಿ ಶರಣರು ಮತ್ತು ದಾರ್ಶನಿಕರ ಚಿಂತನೆಗಳು ಬಹಳ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಜಾಗೃತಿ ಬೆಳೆಯಬೇಕಿದೆ ಎಂದರು.
ಉಪನ್ಯಾಸಕ ಕೃಷ್ಣಮೂರ್ತಿ ಮಾತನಾಡಿ, ನುಲಿಯ ಚಂದಯ್ಯ, ನಾರಾಯಣಗುರು ಕಲಾ ತಪಸ್ವಿಗಳಿದ್ದಂತೆ. ಸಮಾಜದ ಉಳಿತನ್ನು ಬಯಸಿ ತಮ್ಮ ಬದುಕನ್ನು ನಿಸ್ವಾರ್ಥ ಸೇವೆಗೆ ತೊಡಗಿಸಿದವರು. ಸಮಾಜದಲ್ಲಿ ಶಿಕ್ಷಣದ ಜಾಗೃತಿ, ಮೌಢ್ಯ ನಿರ್ಮೂಲನೆ, ಸಮಾನತೆಗಾಗಿ ಹೋರಾಟ ನಡೆಸಿದವರು ಎಂದು ಹೇಳಿದರು.
ಉಪವಿಭಾಗಾಧಿಕಾರಿ ಕಾರ್ತಿಕ್, ತಹಸೀಲ್ದಾರ್ ರೇಹಾನ್ ಪಾಷಾ, ನಗರಸಭಾ ಸದಸ್ಯ ಟಿ.ಮಲ್ಲಿಕಾರ್ಜುನ, ಗ್ರಾಪಂ ಅಧ್ಯಕ್ಷ ಕಲ್ಲೇಶಪ್ಪ, ಈಡಿಗ ಸಮಾಜ ತಾಲೂಕಾಧ್ಯಕ್ಷ ಸಿ.ಒ.ರವಿಕುಮಾರ್, ಬಿ.ವಿ.ಸಿರಿಯಪ್ಪ, ಅಬಕಾರಿ ಮಂಜಣ್ಣ, ಪಾಂಡುರಂಗಪ್ಪ, ದೊಡ್ಡರಂಗಪ್ಪ, ಭೀಮನಕೆರೆ ಶಿವಮೂರ್ತಿ, ನೇತಾಜಿ ಪ್ರಸನ್ನ, ಜಿ.ಬಿ.ಶಶಿಧರ, ಉಮೇಶ್, ಕರೀಕೆರೆ ರಾಜಣ್ಣ, ಲಿಂಗೇಗೌಡ ಇತರರಿದ್ದರು.