

ಯಲ್ಲಾಪುರ: ಅರಣ್ಯ ಭೂಮಿ ಹೋರಾಟಕ್ಕೆ ಜಾತಿ, ಧರ್ಮ, ಪಕ್ಷವಿಲ್ಲ. ಅರಣ್ಯವಾಸಿಗಳ ಹಿತ ಕಾಪಾಡುವುದು ಹೋರಾಟಗಾರರ ವೇದಿಕೆ ಮೂಲ ಉದ್ದೇಶ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
ಪಟ್ಟಣದ ವೆಂಕಟ್ರಮಣ ದೇವಸ್ಥಾನದ ಆವರಣದಲ್ಲಿ ಗುರುವಾರ ಏರ್ಪಡಿಸಿದ್ದ ಅರಣ್ಯವಾಸಿಗಳ ಬೃಹತ್ ಸಭೆಯಲ್ಲಿ ಅರಣ್ಯವಾಸಿಗಳಿಗೆ ಗುರುತಿನ ಪತ್ರ ವಿತರಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಅರಣ್ಯ ಹಕ್ಕು ಕಾಯ್ದೆಯಡಿ 85,757 ಅರ್ಜಿಗಳನ್ನು ಅರಣ್ಯವಾಸಿಗಳು ಸಲ್ಲಿಸಿದ್ದು, ಅವುಗಳಲ್ಲಿ 69,733 ಅರ್ಜಿ ತಿರಸ್ಕಾರವಾಗಿವೆ. ಕೇವಲ 2,855 ಅರ್ಜಿಗಳಿಗೆ ಮಾತ್ರ ಕಾನೂನು ಮಾನ್ಯತೆ ಹಕ್ಕು ದೊರಕಿದೆ ಎಂದರು.
ಸೆ. 14ರಂದು ಬೆಂಗಳೂರಿನಲ್ಲಿ ನಡೆಯುವ ಲಕ್ಷ ವೃಕ್ಷ ಗಿಡ ನೆಡುವ ಅಭಿಯಾನದ ಛಾಯಾಚಿತ್ರ ಪ್ರದರ್ಶನ ಮತ್ತು ಅರಣ್ಯವಾಸಿಗಳ ಸಮಸ್ಯೆಗಳ ಕುರಿತು ಸಮಾಲೋಚನಾ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಅರಣ್ಯ ಅತಿಕ್ರಮಣದಾರರು ಆಗಮಿಸಬೇಕು ಎಂದರು.
ವೇದಿಕೆಯ ತಾಲೂಕು ಅಧ್ಯಕ್ಷ ಭೀಮಸಿ ವಾಲ್ಮೀಕಿ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಸೀತಾರಾಮ ನಾಯ್ಕ ಕುಂದರಗಿ, ಮಹೇಶ ಮರಾಠಿ ಆನಗೋಡ, ಅನಂತ ಗೌಡ ಮಾವಿನಮನೆ, ಚನ್ನಪ್ಪ ಗೌಡ, ಗೋಪಾಲಕೃಷ್ಣ ಹೆಗಡೆ ನಂದೊಳ್ಳಿ, ರಾಜಾಸಾಬ್ ಮದನೂರು ಮಾತನಾಡಿದರು. ಸದಸ್ಯರಾದ ಕೇಶವ ಕುಣಬಿ, ಈರಪ್ಪ ಮೊಪಣ್ಣನವರ, ಶ್ರೀಧರ ನಾಯ್ಕ ಚಳಗೇರಿ, ಸುಬ್ಬು ಬೈಲಪಡೆ, ಶೇಖರ ನಾಯ್ಕ ಹಿತ್ಲಳ್ಳಿ ಇದ್ದರು. ಭಾಸ್ಕರ ಗೌಡ ಹಿತ್ಲಳ್ಳಿ, ಗಣಪತಿ ಗೌಡ ನಿರ್ವಹಿಸಿದರು.