ಎರಡು ದಶಕಗಳಿಂದ ರಸ್ತೆಗಾಗಿ ಹೋರಾಟ

3spt6
Published on

ಹಿರಿಕರ ರವಿ ಸೋಮವಾರಪೇಟೆ


ಕೃಷಿ ಕಾಯಕದಲ್ಲಿ ಬದುಕು ಕಟ್ಟಿಕೊಂಡಿರುವ ಯಲಕನೂರು ಹೊಸಳ್ಳಿ ಗ್ರಾಮದ ರೈತರಿಗೆ ಎರಡು ದಶಕದಿಂದ ರಸ್ತೆಗಾಗಿ ಹೋರಾಟ ಮಾಡಬೇಕಾದ ದುರ್ಗತಿ ಬಂದಿದೆ.


ಹೋರಾಟ, ಪ್ರತಿಭಟನೆ ಮಾಡಿದರೂ ರಸ್ತೆಗೆ ಅನುದಾನ ಸಿಗದೇ ಗ್ರಾಮ ನಿವಾಸಿಗಳು ತಲೆ ಮೇಲೆ ಕೈ ಇಟ್ಟುಕೊಳ್ಳುವಂತಾಗಿದೆ. ಸರ್ಕಾರದ ಮೇಲೆ ಒತ್ತಡ ತಂದು ಅನುದಾನ ತರಲು ಜನಪ್ರತಿನಿಧಿಗಳಿಗೆ ಹಾಗು ಅಧಿಕಾರಿಗಳಿಗೆ ಸಾಧ್ಯವಾಗದಿರುವುದು ದುರಂತವೇ ಸರಿ ಎಂದು ರಾಜ್ಯದ ನಂ.೧ ಪತ್ರಿಕೆ ವಿಜಯವಾಣಿ ವತಿಯಿಂದ ಭಾನುವಾರ ಆಯೋಜಿಸಿದ್ದ ಗ್ರಾಮ ಸಂಚಾರದಲ್ಲಿ ಗ್ರಾಮಸ್ಥರು ದೂರಿದ್ದಾರೆ.


ಸೋಮವಾರಪೇಟೆಯಿಂದ ಕುಶಾಲನಗರಕ್ಕೆ ಸಂಪರ್ಕ ಕಲ್ಪಿಸುವ ಮಸಗೋಡು, ನೇರುಗಳಲೆ, ಅರೆಯೂರು, ಸೀಗೆಹೊಸೂರು, ಕಣಿವೆ ಮಾರ್ಗದ ರಸ್ತೆ ಯಲಕನೂರು ಹೊಸಳ್ಳಿ ಗ್ರಾಮದಲ್ಲಿ ಹಾದುಹೋಗುತ್ತದೆ. ಅರೇಯೂರು ಗ್ರಾಮದಿಂದ ಕಣಿವೆಗೆ ತೆರಳುವ ರಸ್ತೆ ಸಂಪೂರ್ಣ ಹಾಳಾಗಿದೆ. ಗುಂಡಿಗಳ ಮಧ್ಯೆ ರಸ್ತೆ ಹುಡುಕುವುದೇ ಕಷ್ಟ ಸಾಧ್ಯವಾಗಿದೆ.


ಇದೇ ರಸ್ತೆಯಲ್ಲಿ ಗ್ರಾಮದ ಜನರು ಸಂಚರಿಸಬೇಕು. ವಾಹನಗಳನ್ನು ಚಾಲಿಸಬೇಕು. ವಿದ್ಯಾರ್ಥಿಗಳು ಕಾಲ್ನಡಿಗೆಯಲ್ಲಿ ಶಾಲಾ ಕಾಲೇಜಿಗೆ ತೆರಳಬೇಕು. ಕಲ್ಲುಗಣಿಗಾರಿಕೆ ಮತ್ತು ಕಾಡಾನೆಗಳು ಹೊಸಳ್ಳಿ ಗ್ರಾಮದ ರೈತರ ನೆಮ್ಮದಿಯನ್ನು ಕಸಿದುಕೊಂಡಿವೆ. ಗ್ರಾಮ ವ್ಯಾಪ್ತಿಯಲ್ಲಿ ೪೦ ಕಲ್ಲುಗಣಿಗಳು ಕಾರ್ಯನಿರ್ವಹಿಸುತ್ತಿದೆ. ಪ್ರತಿದಿನ ಹೆಚ್ಚಿನ ಟಿಪ್ಪರ್‌ಗಳು ಸಂಚರಿಸುತ್ತವೆ. ಇಡೀ ಗ್ರಾಮ ಪ್ರತಿದಿನ ಧೂಳುಮಯವಾಗಿರುತ್ತದೆ. ಅನೇಕರು ಅನಾರೋಗ್ಯದಿಂದ ಬಳಲುವಂತಾಗಿದೆ. ಮಕ್ಕಳು ಸಮಸ್ಯೆ ಎದುರಿಸುವಂತಾಗಿದೆ. ಕಲ್ಲುಗಣಿಯಿಂದ ವಾರ್ಷಿಕ ಕೋಟಿಗಟ್ಟಲೆ ರಾಜಧನ ಸರ್ಕಾರದ ಬೊಕ್ಕಸಕ್ಕೆ ಸೇರುತ್ತಿದೆ. ಆದರೆ ರಸ್ತೆಗೆ ಅನುದಾನ ನೀಡದೆ ಅನ್ಯಾಯ ಎಸಗಲಾಗಿದೆ. ಇದು ಅಮಾನವೀಯ ಕೃತ್ಯ ಎಂದು ಗ್ರಾಮಸ್ಥರು ದೂರಿದರು.


೧೬ ಟನ್‌ನಷ್ಟು ತೂಕದ ಟಿಪ್ಪರ್‌ಗಳು ಮಾತ್ರ ರಸ್ತೆಯಲ್ಲಿ ಸಂಚರಿಸಬೇಕು. ಆದರೆ ೩೦ ಟನ್ ತೂಕದ ಟಿಪ್ಪರ್ ಪ್ರತಿದಿನ ಸಂಚರಿಸುತ್ತವೆ. ಆರ್‌ಟಿಒ ಮತ್ತು ಗಣಿ ಮತ್ತು ಭೂವಿಜ್ಞಾನ ಇಲಾಖೆ ಕೊಡಗಿನಲ್ಲಿ ಇರುವ ಬಗ್ಗೆ ಕುರುಹುಗಳ ಕಾಣಸಿಗುತ್ತಿಲ್ಲ. ಒಂದು ದಶಕದ ಹಿಂದೆ ರಸ್ತೆ ಸುಸ್ಥಿತಿಯಲ್ಲಿದ್ದಾಗ ಈ ಮಾರ್ಗದಲ್ಲಿ ೫ ಖಾಸಗಿ ಬಸ್‌ಗಳು ಸಂಚರಿಸುತ್ತಿದ್ದವು. ಸೋಮವಾರಪೇಟೆ, ಕುಶಾಲನಗರ, ಮಡಿಕೇರಿಯಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳು ನೆಮ್ಮದಿಯಿಂದ ಇದ್ದರು. ರೈತರು ಬೆಳೆದ ಕೃಷಿ ಫಸಲು ಸಾಗಾಟಕ್ಕೆ ಸಮಸ್ಯೆಯಿರಲಿಲ್ಲ ಎಂದು ಗ್ರಾಮಸ್ಥರು ಹೇಳಿದರು.


ಗ್ರಾಮದಲ್ಲಿ ೨೦೦ ರೈತ ಕುಟುಂಬಗಳಿವೆ. ಯಡವನಾಡು, ಬಾಣಾವಾರ ಮೀಸಲು ಅರಣ್ಯಕ್ಕೆ ಹೊಂದಿಕೊಂಡಂತೆ ಗ್ರಾಮವಿದೆ. ಕಾಡಾನೆ ಮತ್ತು ಕಾಡುಪ್ರಾಣಿಗಳು ತಿಂದು ಉಳಿದ ಫಸಲನ್ನು ತೆಗೆದುಕೊಳ್ಳುವ ಪರಿಸ್ಥಿತಿ ಒದಗಿದೆ. ಕಾಡಾನೆಗಳ ಹಾವಳಿಗೆ ಸರ್ಕಾರ ಶಾಶ್ವತ ಪರಿಹಾರ ಕಂಡುಹಿಡಿಯದ ಪರಿಣಾಮ ಕಾಡುಪ್ರಾಣಿಗಳಿಂದ ಫಸಲನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗದೇ ಸಂಕಷ್ಟದ ಬದುಕು ಸಾಗಿಸುತ್ತಿದ್ದಾರೆ.

ರೈತರು ಜೋಳ, ಸಿಹಿಗೆಣಸು, ಭತ್ತ, ಶುಂಠಿ, ಸುವರ್ಣಗೆಡ್ಡೆ ಬೆಳೆಯುತ್ತಾರೆ. ಆದರೆ ಕಾಡಾನೆಗಳ ಹಿಂಡು ರಾತ್ರಿಯಾಗುತ್ತಿದ್ದಂತೆ ಗ್ರಾಮ ವಾಸ್ತವ್ಯ ಮಾಡುತ್ತವೆ. ಕೃಷಿ ಫಸಲನ್ನು ನಾಶಪಡಿಸಿ ರಸ್ತೆಯಲ್ಲೆ ಸಂಚರಿಸುತ್ತವೆ. ಹಗಲಿನ ವೇಳೆಯಲ್ಲೂ ರಸ್ತೆಯಲ್ಲಿ ವಿದ್ಯಾರ್ಥಿಗಳು ನಡೆದಾಡಲೂ ಭಯಪಡುತ್ತಾರೆ.


ಕೃಷಿ ಫಸಲು ಹಾನಿಗೆ ಪರಿಹಾರ ನೀಡುವುದಾಗಿ ಅರಣ್ಯ ಇಲಾಖೆ ಹೇಳುತ್ತದೆ. ೫೦ ಸಾವಿರ ರೂ, ೧ಲಕ್ಷದಷ್ಟು ಬೆಳೆಹಾನಿಯಾದರೆ ೨ಸಾವಿರ ರೂ ಅಥವಾ ೫ ಸಾವಿರ ಪರಿಹಾರ ಸಿಗುತ್ತದೆ. ಪರಿಹಾರ ಪಡೆಯಲು ದಾಖಲಾತಿಗಳನ್ನು ಹೊಂದಿಸಲು ಎರಡು ಸಾವಿರ ಖರ್ಚು ಮಾಡಬೇಕು ಎಂದು ರೈತರು ಹೇಳಿದರು.
ಒಟ್ಟಿನಲ್ಲಿ ಯಲಕನೂರು ಹೊಸಳ್ಳಿ ಗ್ರಾಮಕ್ಕೆ ಉತ್ತಮವಾಗ ರಸ್ತೆ ನಿರ್ಮಾಣವಾದರೆ ಬಹುತೇಕ ಸಮಸ್ಯೆಗಳಿಂದ ಮುಕ್ತಿ ಪಡೆಬಹುದು. ಕಾಡಾನೆಗಳ ನಿಯಂತ್ರಣಕ್ಕೆ ಸರ್ಕಾರ ಶಾಶ್ವತ ಪರಿಹಾರ ಕಂಡುಹಿಡಿಯಲು ಸೂಕ್ತ ಅನುದಾನ ನೀಡಬೇಕಾಗಿದೆ.

ಎಲಕನೂರು ಹೊಸಳ್ಳಿ ಗ್ರಾಮಕ್ಕೆ ರಸ್ತೆ ಸರಿಯಿಲ್ಲ. ರಸ್ತೆಗಾಗಿ ಕಳೆದ ಅ೧೦ರಂದು ಸೋಮವಾರಪೇಟೆ ಲೋಕೋಪಯೋಗಿ ಇಲಾಖೆಯ ಎದುರು ದೊಡ್ಡ ಮಟ್ಟದ ಪ್ರತಿಭಟನೆ ಮಾಡಲಾಗಿತ್ತು. ೧೦ ಗ್ರಾಮಗಳ ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ನ೩೦ ಒಳಗೆ ರಸ್ತೆಗೆ ಅನುದಾನ ಕಲ್ಪಿಸುತ್ತೇವೆ ಎಂದು ಕಾರ್ಯಪಾಲಕ ಅಭಿಯಂತರು ಭರವಸೆ ನೀಡಿದ್ದರು. ಈಗ ಅಧಿಕಾರಿ ಉಲ್ಟಾ ಹೊಡೆಯುತ್ತಿದ್ದಾರೆ. ರೈತರಿಗೆ ಅನ್ಯಾಯ ಮಾಡಿದರೆ, ಅದರ ಪ್ರತಿಫಲ ಅನುಭವಿಸಬೇಕಾಗುತ್ತದೆ.-ಕೆ.ಎನ್.ರತನ್, ಕಾರ್ಯದರ್ಶಿ ಗ್ರಾಮಾಭಿವೃದ್ಧಿ ಮಂಡಳಿ, ಯಲಕನೂರು ಹೊಸಳ್ಳಿ ಗ್ರಾಮ ಕೃಷಿಯಿಂದಲೇ ಕುಟುಂಬ ನಡೆಯಬೇಕು. ಕೃಷಿ ಫಸಲು ಕಾಡಾನೆ ಪಾಲಾಗುತ್ತಿದೆ. ರೈತರ ಕಷ್ಟವನ್ನು ಕೇಳುವವರು ಇಲ್ಲದಂತಾಗಿದೆ. ಸೂಕ್ತ ಪರಿಹಾರ ಸಿಗುತ್ತಿಲ್ಲ. ಆಸ್ತಿ ದಾಖಲಾತಿ ಇಲ್ಲದವರಿಗೆ ನಯಾಪೈಸೆ ಪರಿಹಾರ ಸಿಗುತ್ತಿಲ್ಲ. ಕಾಡಾನೆ ಹಾವಳಿ ನಿಯಂತ್ರಿಸಲು ಅರಣ್ಯ ಇಲಾಖೆ ಕ್ರಮಕೈಗೊಳ್ಳಬೇಕು.-ರೋಹಿಣಿ, ಗೃಹಿಣಿ, ಹೊಸಳ್ಳಿ ಗ್ರಾಮ ಫಸಲು ಹಾನಿಗೆ ಸೂಕ್ತ ಪರಿಹಾರ ಸಿಗಬೇಕು. ೫೦ ಸಾವಿರ ರೂ.ನಷ್ಟು ಫಸಲು ಹಾನಿಯಾದರೆ ೬೦ ಸಾವಿರ ರೂನಷ್ಟು ಪರಿಹಾರ ಸಿಗುವಂತಾಗಬೇಕು. ಆದರೆ ಈಗ ೨ಸಾವಿರ ಸಿಗುತ್ತಿದೆ. ಸರ್ಕಾರದ ಇಂತಹ ಅವೈಜ್ಞಾನಿಕ ನೀತಿಯಿಂದ ಕೃಷಿಯಿಂದ ರೈತರು ಮುಕ್ತರಾಗುತ್ತಿದ್ದಾರೆ. ರೈತರ ಸಾಲಮನ್ನಾಕ್ಕೆ ಬೇಡಿಕೆಯಿಟ್ಟರೂ ಸರ್ಕಾರ ಬೇಡಿಕೆ ಈಡೇರಿಸುತ್ತಿಲ್ಲ. ರೈತರ ಕಷ್ಟ ಸರ್ಕಾರಕ್ಕೆ ಗೊತ್ತಾಗುತ್ತಿಲ್ಲ.-ಎಚ್.ಕೆ.ಲೋಕೇಶ್, ಅಧ್ಯಕ್ಷರು, ಗ್ರಾಮಾಭಿವೃದ್ಧಿ ಮಂಡಳಿ, ಯಲಕನೂರು ಹೊಸಳ್ಳಿ ಮಸಗೋಡು ಗ್ರಾಮದಿಂದ ಅರೇಯೂರು ಮಾರ್ಗವಾಗಿ ಕಣಿವೆ ಮುಖ್ಯ ರಸ್ತೆವರೆಗೆ ೧೮ ಕಿ.ಮೀ ರಸ್ತೆ ಪೂರ್ಣ ಪ್ರಮಾಣದಲ್ಲಿ ಡಾಂಬರೀಕರಣಗೊಂಡಿರುವುದು ಗ್ರಾಮದ ಹಿರಿಯರಿಗೂ ಗೊತ್ತಿಲ್ಲ. ಅಲ್ಲಲ್ಲಿ ಪ್ಯಾಚ್ ವರ್ಕ್ ಮಾಡಿರುವುದನ್ನು ನಾವು ನೋಡಿದ್ದೇವೆ. ಜೀವನ ಪರ್ಯಾಂತ ಗುಂಡಿಬಿದ್ದ ರಸ್ತೆಯಲ್ಲೇ ಸಂಚರಿಸುವಂತಾಗಿದೆ. ರಸ್ತೆ ಕಾಮಗಾರಿಗೆ ಸರ್ಕಾರ ಅನುದಾನ ಕಲ್ಪಿಸದಿದ್ದರೆ, ಮುಂದಿನ ಚುನಾವಣೆ ಬಹಿಷ್ಕಾರದ ಬಗ್ಗೆಯೂ ತೀರ್ಮಾನ ಮಾಡಲಾಗುತ್ತದೆ. -ಬೋಜೇಗೌಡ, ಕೃಷಿಕ, ಹೊಸಳ್ಳಿ ಗ್ರಾಮ ಕೃಷಿ ಫಸಲು ತಿನ್ನಲು ಕಾಡಾನೆಗಳು ಸಂಜೆ ೪ಗಂಟೆಯ ಹೊತ್ತಿಗಾಗಲೇ ಗ್ರಾಮಕ್ಕೆ ಬರುತ್ತವೆ. ಶಾಲಾ, ಕಾಲೇಜು ವಿದ್ಯಾರ್ಥಿಗಳು ಭಯದಿಂದಲೇ ನಡೆದುಕೊಂಡು ಹೋಗಬೇಕು. ಉತ್ತಮ ರಸ್ತೆಯಾದರೆ, ಖಾಸಗಿ ಹಾಗು ಸರ್ಕಾರಿ ಬಸ್‌ಗಳು ಗ್ರಾಮದ ಮೂಲಕ ಸಂಚರಿಸುತ್ತವೆ. ವಿದ್ಯಾರ್ಥಿಗಳಿಗೆ ಉಪಯೋಗವಾಗಲಿದೆ. ಸರ್ಕಾರ ರಸ್ತೆಗೆ ಅನುದಾನ ಬಿಡುಗಡೆ ಮಾಡಲಿ.-ಸಹನಾ, ವಿದ್ಯಾರ್ಥಿನಿ, ಹೊಸಳ್ಳಿ ಗ್ರಾಮ ಯಲಕನೂರು ಹೊಸಳ್ಳಿ ಗ್ರಾಮದ ರಸ್ತೆ ಹಾಳಾಗಿದೆ. ರಸ್ತೆ ಕಾಮಗಾರಿಗೆ ಕ್ರಿಯಾಯೋಜನೆ ಮಾಡಿ, ಸರ್ಕಾರಕ್ಕೆ ಕಳುಹಿಸಲಾಗಿದೆ. ತುರ್ತಾಗಿ ಆಗಬೇಕಾದ ಸ್ಥಳದಲ್ಲಿ ವೆಟ್‌ಮಿಕ್ಸ್ ಹಾಕಲಾಗಿದೆ. ನಂತರ ಹಂತ ಹಂತವಾಗಿ ಪೂರ್ತಿ ರಸ್ತೆ ಕಾಮಗಾರಿ ಮಾಡಲಾಗುವುದು.-ಮಹೇಂದ್ರ ಕುಮಾರ್, ಎಇಇ, ಲೋಕೋಪಯೋಗಿ ಇಲಾಖೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net