ರಾಷ್ಟ್ರೀಯತೆ-ಭ್ರಷ್ಟಾಚಾರ ನಡುವೆ ಸೆಣಸಾಟ

Kageri
Published on

ಗೋಕರ್ಣ: ಈ ಬಾರಿಯ ಲೋಕಸಭೆ ಚುನಾವಣೆ ಎರಡು ಅಭ್ಯರ್ಥಿಗಳ ನಡುವಿನ ಸೆಣಸಾಟ ಅಲ್ಲ. ರಾಷ್ಟ್ರೀಯತೆ, ತತ್ವ ಸಿದ್ಧಾಂತವಾದಿ ಪಕ್ಷ ಮತ್ತು ದೇಶಕ್ಕೆ ಆರು ದಶಕಗಳಲ್ಲಿ ಭ್ರಷ್ಟಾಚಾರವನ್ನು ಧಾರೆ ಎರೆದ ರಾಜಕೀಯ ಪಕ್ಷದ ನಡುವಿನ ಅಗ್ನಿ ಪರೀಕ್ಷೆಯಾಗಿದೆ ಎಂದು ಬಿಜೆಪಿ ಲೋಕಸಭೆ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಇಲ್ಲಿನ ಪುರಾಣ ಪ್ರಸಿದ್ಧ ಶ್ರೀಮಹಾಬಲೇಶ್ವರ ಆತ್ಮಲಿಂಗಕ್ಕೆ ಮಂಗಳವಾರ ವಿಶೇಷ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ಕಳೆದ ಆರು ಬಾರಿ ಈ ಕ್ಷೇತ್ರವನ್ನು ಬಿಜೆಪಿ ಗೆದ್ದು ದಾಖಲೆ ನಿರ್ಮಿಸಿದೆ. ಹಿಂದಿನ ಎರಡು ಚುನಾವಣೆಯಂತೆ ಈ ಸಲವೂ ಪ್ರಧಾನಿ ಮೋದಿ ಅವರ ವಿಶ್ವಮಾನ್ಯ ಸಾಧನೆಯೇ ಈ ಕ್ಷೇತ್ರದಲ್ಲಿ ಪಕ್ಷವನ್ನು ಗೆಲ್ಲಿಸಲಿದೆ. ಪ್ರತಿ ಮತದಾರ ಬಿಜೆಪಿಗೆ ನೀಡುವ ಮತ ಮೋದಿಯವರ ಪ್ರಧಾನಿ ಸ್ಥಾನವನ್ನು ಬಲಗೊಳಿಸಲಿದೆ ಎಂದರು.

ಚುನಾವಣೆಗಾಗಿ ಸೌದಿ ದೇಶಗಳಿಂದ ವಿಶೇಷ ವಿಮಾನದ ಮೂಲಕ ಭಟ್ಕಳಕ್ಕೆ ಬರಲಿರುವ ಮತದಾರರ ಕುರಿತ ಪ್ರಶ್ನೆಗೆ, ಈ ಬಗ್ಗೆ ನನಗೆ ಯಾವುದೇ ಮಾಹಿತಿಯಿಲ್ಲ. ವಿಚಾರಿಸಿ ಪ್ರತಿಕ್ರಿಯೆ ನೀಡುತ್ತೇನೆ ಎಂದರು.

ಜೆಡಿಎಸ್ ಮುಖಂಡ ಸೂರಜ್ ನಾಯ್ಕ ಸೋನಿ ಮಾತನಾಡಿ, ಈ ಸಲದ ಚುನಾವಣೆಯಲ್ಲಿ ಸಮಸ್ತ ಜೆಡಿಎಸ್ ಪಕ್ಷ ಬಿಜೆಪಿ ಸಂಗಡ ಹೆಗಲಿಗೆ ಹೆಗಲು ಕೊಟ್ಟು ಶ್ರಮಿಸಲಿದೆ ಎಂದರು.

ಮಂದಿರ ಸಮಿತಿ ಸದಸ್ಯರಾದ ವೇ.ಮಹಾಬಲ ಉಪಾಧ್ಯ, ವೇ.ಪರಮೇಶ್ವರ ಮಾರ್ಕಾಂಡೆ, ವೇ.ದತ್ತಾತ್ರೇಯ ಹಿರೇಗಂಗೆ ಮತ್ತು ಮುರಳೀಧರ ಪ್ರಭು ಪೂಜಾ ವ್ಯವಸ್ಥೆ ನಿರ್ವಹಿಸಿದರು. ಬಿಜೆಪಿ ಪ್ರಮುಖರಾದ ಸುಬ್ರಾಯ ವಾಳ್ಕೆ, ತಾಲೂಕಾಧ್ಯಕ್ಷ ಜಿ.ಐ. ಹೆಗಡೆ, ಜಿಲ್ಲಾ ಹಿಂದುಳಿದ ಸೆಲ್ ಖಜಾಂಚಿ ಮಹೇಶ ಶೆಟ್ಟಿ, ರಾಜ್ಯ ವಾಣಿಜ್ಯ ಪ್ರಕೋಷ್ಠದ ಸದಸ್ಯ ಮಂಜುನಾಥ ಜನ್ನು, ಪಂಚಾಯಿತಿ ಅಧ್ಯಕ್ಷೆ ಸುಮನಾ ಗೌಡ, ತಾಲೂಕು ಉಪಾಧ್ಯಕ್ಷ ಗಣೇಶ ಪಂಡಿತ ತದಡಿ, ರಾಮು ಕೆಂಚನ್, ಶೇಖರ ನಾಯ್ಕ, ಬಾಲಚಂದ್ರ ಪ್ರಸಾದ, ಗಣಪತಿ ನಾಯ್ಕ, ಮಂಜುನಾಥ ಶೆಟ್ಟಿ, ನಾಗೇಶ ಜಿ. ಗೌಡ, ಸತೀಶ ದೇಶಭಂಡಾರಿ, ಶ್ರೀನಿವಾಸ ನಾಯಕ, ಮಹಾಬಲೇಶ್ವರ ಗೌಡ, ಅನಂತ ಗೌಡ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net