

ಬೆಂಗಳೂರು: ಸಮಾಜದಲ್ಲಿನ ಅಸಮಾನತೆಯನ್ನು ಹೋಗಲಾಡಿಸಲು ವಿದ್ಯಾವಂತ ಯುವಕರು ಕೈಗೆಟಕುವ, ನ್ಯಾಯಯುತ ಮತ್ತು ಸಲಭವಾಗಿ ಸಿಗುವಂತಹ ಶಿಕ್ಷಣ, ಆರೋಗ್ಯ ಮತ್ತು ಸಮುದಾಯದ ಅಭಿವೃದ್ಧಿ ಮಾದರಿಗಳ ಪ್ರವರ್ತಕರಾಗಿ ಕಾರ್ಯನಿರ್ವಹಿಸಬೇಕಿದೆ ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಾಯೋಗಾಲಯ (ಡಿಆರ್‌ಡಿಎಲ್) ನಿವೃತ್ತ ನಿರ್ದೇಶಕ ಡಾ. ಪ್ರಹ್ಲಾದ ರಾಮರಾವ್ ತಿಳಿಸಿದರು.
ಜ್ಞಾನಜ್ಯೊತಿ ಸಭಾಂಗಣದಲ್ಲಿ ಬುಧವಾರ ನಡೆದ ಬೆಂಗಳೂರು ವಿಶ್ವವಿದ್ಯಾಲಯದ 60ನೇ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ನಾವೀನ್ಯತೆ ಎಂದರೆ ಕೇವಲ ಆವಿಷ್ಕಾರವಲ್ಲ. ಬದಲಾವಣೆ ತರುವ ಉದ್ದೇಶ ಮತ್ತು ಪ್ರತ್ನಿಸುವ ಧೈರ್ಯ, ಅಪಾಯ ಎದುರಿಸುವ ಇಚ್ಛಾಶಕ್ತಿ ಪದವೀಧರರಲ್ಲಿರಬೇಕು ಎಂದು ತಿಳಿಸಿದರು.
ಇತಿಹಾಸದಲ್ಲಿ ಯುವಕರು ಪರಿವರ್ತನಾ ಶಕ್ತಿಯಾಗಿದ್ದು, ನಾವೀನ್ಯತೆ ಮತ್ತು ಬೆಳವಣಿಗೆಯ ಮೂಲಕ ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಿದ್ದಾರೆ. ಯುವಕರ ಶಕ್ತಿ ಕೇವಲ ವಯಸ್ಸು, ಶಿಕ್ಷಣ, ಜ್ಞಾನದಲ್ಲಿ ಮಾತ್ರವಲ್ಲ, ನಿಮ್ಮ ಶಕ್ತಿ ಸ್ಪಷ್ಟತೆ, ಸವಾಲುಗಳನ್ನು ನೋಡುವ, ಬದ್ಧತೆ ಮತ್ತು ಪರಿಶ್ರಮದ ಮೂಲಕ ಪರಿಹಾರಗಳನ್ನು ಕಂಡುಕೊಳ್ಳುವ ಸಾಮರ್ಥ್ಯದಲ್ಲಿದೆ ಎಂದು ಕರೆ ನೀಡಿದರು.
ಡಿಜಿಟಲ್ ಮಾಧ್ಯಮ ಮತ್ತು ತ್ವರಿತ ಮಾಹಿತಿ ಯುಗದಲ್ಲಿ ಮನಸ್ಸನ್ನು ವಿಮರ್ಶಾತ್ಮಕವಾಗಿಟ್ಟುಕೊಳ್ಳಿ. ನಿಮಗಾಗಿ ಕಾಯುತ್ತಿರುವ ಜಗತ್ತು ಸಂಕೀರ್ಣವಾಗಿದೆ. ಆದರೆ, ಅದು ಅಸಾಧಾರಣವೂ ಆಗಿದೆ. ಅದಕ್ಕೆ ದಿಟ್ಟ ಚಿಂತಕರು, ಧೈರ್ಯಶಾಲಿ ಕಾರ್ಯಪ್ರವೃತ್ತರು ಮತ್ತು ಕರುಣೆ ಹೊಂದಿರುವ ನಾಯಕರ ಅವಶ್ಯವಿದೆ. ಆದ್ದರಿಂದ ನಿಮ್ಮ ಕನಸುಗಳು ನಿರ್ಭೀತವಾಗಿರಲಿ, ನಾವೀನ್ಯತೆಗಳು ಅರ್ಥಪೂರ್ಣವಾಗಿರಲಿ ಮತ್ತು ಪ್ರಯಾಣವು ಪ್ರಕಾಶಮಾನವಾಗಿರಲಿ. ಭವಿಷ್ಯದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಹೆಸರು ಯಾವಾಗಲೂ ಹೆಮ್ಮೆಯಿಂದ ಹೊಳೆಯುವಂತೆ ಮಾಡುವಂತೆ ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ವಿವಿ ಕುಲಪತಿ ಡಾ. ಎಸ್.ಎಂ. ಜಯಕರ್, ಕುಲಸಚಿವೆ(ಆಡಳಿತ) ಕೆ.ಟಿ. ಶಾಂತಲಾ ಮತ್ತು ಕುಲಸಚಿವ (ಮೌಲ್ಯಮಾಪನ) ಪ್ರೊ.ಸಿ.ಎಸ್.ಕರಿಗಾರ್ ಉಪಸ್ಥಿತರಿದ್ದರು.
ಡಿಜಿಟಲ್ ಅರ್ಥವ್ಯವಸ್ಥೆಯಲ್ಲಿ ಯುವಕರು ತೊಡಗಿಸಿಕೊಳ್ಳಲು ಕಠಿಣ ಪರಿಶ್ರಮ ಮತ್ತು ಸಮರ್ಪಣಾಭಾವ ಹೊಂದಿದ್ದಾಗ ಮಾತ್ರ ಯಶಸ್ವಿಯಾಗಲು ಸಾಧ್ಯವಾಗಲಿದೆ. ಸಮಾಜ ಮತ್ತು ರಾಷ್ಟ್ರದ ಹಿತಕ್ಕಾಗಿ ಸೇವೆಯನ್ನು ಮುಂದುವರಿಸಬೇಕು. ಹೊಸ ಸವಾಲುಗಳು ಮತ್ತು ಅವಕಾಶಗಳನ್ನು ಎದುರಿಸಲು ನಿಮ್ಮಲ್ಲಿ ಆತ್ಮವಿಶ್ವಾಸ ಇರಲಿ. - ಥಾವರ್‌ಚಂದ್ ಗೆಹಲೋತ್, ರಾಜ್ಯಪಾಲ ಉನ್ನತ ಶಿಕ್ಷಣದಲ್ಲಿ ಉದ್ಯೋಗ ಸಿಗುವಂತಾಗಬೇಕು ಎಂಬ ಉದ್ದೇಶದಿಂದ ಲಂಡನ್ನಿನ ಕೆಲವು ವಿಶ್ವವಿದ್ಯಾಲಯಗಳೊಂದಿಗೆ ರಾಜ್ಯ ಸರ್ಕಾರವು ಒಡಂಬಡಿಕೆ ಮಾಡಿಕೊಂಡಿದೆ. ಗ್ರೀನ್ ಎನರ್ಜಿ, ಅಗ್ರಿಟೆಕ್, ಕ್ರಿಯೇಟಿವ್ ಇಂಡಸ್ಟ್ರಿ ಆೃಂಡ್ ಮೀಡಿಯಾ, ಮೆಟೀರಿಯಲ್ಸ್ ಮತ್ತು ಮ್ಯಾನ್ಯಾಚರ್, ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಉದ್ಯೋಗ ದೊರೆಯುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿದೆ. - ಡಾ. ಎಂ.ಸಿ. ಸುಧಾಕರ್, ಉನ್ನತ ಶಿಕ್ಷಣ ಸಚಿವ
ಗೌಡಾ ಸ್ವೀಕರಿಸಲು ಖಾದರ್ ಗೈರು ಬೆಂಗಳೂರು ವಿಶ್ವವಿದ್ಯಾಲಯ 60ನೇ ವಾರ್ಷಿಕ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಸ್ವೀಕರಿಸಲು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಗೈರು ಹಾಜರಾಗಿದ್ದರು. ವಿಧಾನ ಪರಿಷತ್‌ನ ಮಾಜಿ ಸದಸ್ಯ ಡಿ.ಮಾದೇಗೌಡ, ಮತ್ತು ಜಿ.ಪಿ. ಅಗ್ರಿ ಜೆನೆಟಿಕ್ಸ್ ಪ್ರೈ.ಲಿ. ವ್ಯವಸ್ಥಾಪಕ ನಿರ್ದೇಶಕ ಡಾ. ಟಿ.ಬಿ. ಪ್ರಸನ್ನ ಸ್ವೀಕರಿಸಿದರು.
30,300 ಪದವಿ ಪ್ರದಾನ
ಪದವಿ ಮತ್ತು ಸ್ನಾತಕೋತ್ತರ ಪದವಿ ಸೇರಿ 30,300 ವಿದ್ಯಾರ್ಥಿಗಳಿಗೆ ಕುಲಾಧಿಪತಿ ಥಾವರ್‌ಚಂದ್ ಗೆಹಲೋತ್ ಪದವಿ ಪ್ರದಾನ ಮಾಡಿದರು.