ರಾಷ್ಟ್ರಧ್ವಜದಲ್ಲಡಗಿದೆ ನಮ್ಮ ದೇಶದ ಶಕ್ತಿ

h3-Tiranga
Published on

ಹುಬ್ಬಳ್ಳಿ: ರಾಷ್ಟ್ರಧ್ವಜ ಭಾರತೀಯ ಸ್ವಾಭಿಮಾನದ ಸಂಕೇತ. ನಮ್ಮ ದೇಶದ ಶಕ್ತಿ ರಾಷ್ಟ್ರ ಧ್ವಜದಲ್ಲಿ ಅಡಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಬಣ್ಣಿಸಿದರು.

ಇಲ್ಲಿನ ನವೀನ ಹೋಟೆಲ್ ಸಭಾಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಆಧ್ಯಾ ಅನಿಮ್ಯಾಟಿಕ್ಸ್ ಸಂಸ್ಥೆ ಸಿದ್ಧಪಡಿಸಿರುವ ನಮ್ಮ ತಿರಂಗಾ ಕಥೆ ಕಿರುಚಿತ್ರ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಕಿರುಚಿತ್ರ ಉತ್ತಮವಾಗಿ ಮೂಡಿ ಬಂದಿದೆ. ರಾಷ್ಟ್ರಧ್ವಜದ ಇತಿಹಾಸವನ್ನು ಆರು ನಿಮಿಷದ ಅವಧಿಯಲ್ಲಿ ಪರಿಣಾಮಕಾರಿಯಾಗಿ ತೋರಿಸಿರುವುದು ಸಂತಸ ತಂದಿದೆ ಎಂದರು.

ಹುಬ್ಬಳ್ಳಿಯ ಬೆಂಗೇರಿ ಖಾದಿ ಗ್ರಾಮೋದ್ಯೋಗ ಕೇಂದ್ರದಲ್ಲಿ ಉತ್ಪಾದನೆಯಾಗುತ್ತಿರುವುದು ಅಧಿಕೃತ ರಾಷ್ಟ್ರಧ್ವಜ. ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಹಾರಾಡುತ್ತಿವೆ. ಸ್ವಾತಂತ್ರ್ಯ ಎಂದಾಗ ಥಟ್ಟನೆ ನೆನಪಿಗೆ ಬರುವುದೇ ರಾಷ್ಟ್ರಧ್ವಜ. ಭಯೋತ್ಪಾದನೆ ವಿರುದ್ಧ ಹೋರಾಟ, ಕಾರ್ಗಿಲ್ ಯುದ್ಧ ಸೇರಿದಂತೆ ದೇಶದ ರಕ್ಷಣೆಗೆ ಸಂಬಂಧಿಸಿದ ಎಲ್ಲ ಹೋರಾಟದಲ್ಲೂ ರಾಷ್ಟ್ರಧ್ವಜವೇ ಪ್ರಧಾನವಾಗಿದೆ ಎಂದರು.

ನನ್ನ ರಾಜಕೀಯ ಜೀವನ ಆರಂಭವಾಗಿದ್ದೇ ತಿರಂಗಾ ಹೋರಾಟದ ಮೂಲಕ ಎಂದು ಪ್ರಲ್ಹಾದ ಜೋಶಿ ಸ್ಮರಿಸಿದರು.

ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ತಂತ್ರಜ್ಞಾನದಲ್ಲಿ ಹುಬ್ಬಳ್ಳಿ ಏನೂ ಕಡಿಮೆಯಿಲ್ಲ ಎನ್ನುವ ರೀತಿಯಲ್ಲಿ ತಿರಂಗಾ ಕಿರುಚಿತ್ರ ನಿರ್ಮಾಣವಾಗಿದೆ. ನಮ್ಮ ಹುಬ್ಬಳ್ಳಿಯಲ್ಲಿಯೇ ತಯಾರಾಗುವ ರಾಷ್ಟ್ರಧ್ವಜ ದೇಶಾದ್ಯಂತ ಹಾರಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಇದೇ ವೇಳೆ ಇಂಗ್ಲಿಷ್ ಹಾಗೂ ಕನ್ನಡದಲ್ಲಿ ಮೂಡಿ ಬಂದಿರುವ ನಮ್ಮ ತಿರಂಗಾ ಕಥೆ ಕಿರು ಚಿತ್ರವನ್ನು ಬಿಡುಗಡೆ ಮಾಡಲಾಯಿತು.

ಸಂಸ್ಥೆ ಸಂಸ್ಥಾಪಕ ರತ್ನಕುಮಾರ ಜಿ.ಕೆ., ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ಬಿಜೆಪಿ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ, ಉದ್ಯಮಿ ರಮೇಶ ಬಾಫಣಾ, ಎಲುಬು ಮತ್ತು ಕೀಲು ತಜ್ಞ ಡಾ. ವಿವೇಕ ಪಾಟೀಲ, ಜಸವೀರ ಸಿಂಗ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net