ಮತದಾರರ ವಿಶ್ವಾಸ ಗಳಿಸಲು ತಂತ್ರ ಜೋರು

Shiggaon constituency map
Published on

ಶಿಗ್ಗಾಂವಿ: ಕ್ಷೇತ್ರದ ಶಾಸಕರಾಗಿದ್ದ ಬಸವರಾಜ ಬೊಮ್ಮಾಯಿ ರಾಜೀನಾಮೆಯಿಂದ ತೆರವಾಗಿರುವ ಶಿಗ್ಗಾಂವಿ-ಸವಣೂರ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಣೆಗೂ ಮುನ್ನವೇ ಆಕಾಂಕ್ಷಿಗಳು ಮತದಾರರ ವಿಶ್ವಾಸ ಗಳಿಸಲು ಮನೆ ಮನೆ ಭೇಟಿ, ಪ್ರಚಾರ ಶುರುವಿಟ್ಟುಕೊಂಡಿದ್ದಾರೆ.

ಕ್ಷೇತ್ರ ಉಳಿಸಿಕೊಳ್ಳಲು ಬಿಜೆಪಿ ಸೂಕ್ತ ಅಭ್ಯರ್ಥಿಗಾಗಿ ಹುಡುಕಾಟ ಆರಂಭಿಸಿದೆ. ಆಡಳಿತಾರೂಢ ಕಾಂಗ್ರೆಸ್ ಪಕ್ಷ ಸಂಘಟನೆ ಮೂಲಕ ಕ್ಷೇತ್ರ ಕಸಿಯಲು ಪ್ರಯತ್ನಿಸುತ್ತಿದೆ. ಬಸವರಾಜ ಬೊಮ್ಮಾಯಿ ಅವರ ಅಭಿವೃದ್ಧಿ ಕೆಲಸಗಳು ಕ್ಷೇತ್ರದ ಜನರ ಮನಗೆದ್ದಿವೆ. ಹೀಗಾಗಿ, ಉಪ ಚುನಾವಣೆಯಲ್ಲಿ ಅವರ ಮಗ ಭರತ್ ಅವರಿಗೆ ಟಿಕೆಟ್ ನೀಡಬೇಕು ಎಂದು ಹಲವು ಬಿಜೆಪಿ ಮುಖಂಡರು ಒತ್ತಾಯಿಸುತ್ತಿದ್ದಾರೆ.

ಸ್ಥಳೀಯರಾದ ಶ್ರೀಕಾಂತ ದುಂಡಿಗೌಡ್ರ, ಶಶಿಧರ ಎಲಿಗಾರ, ಶಿವಾನಂದ ಮ್ಯಾಗೇರಿ, ಗಂಗಣ್ಣ ಸಾತಣ್ಣನವರ, ಲಿಡ್ಕರ್ ನಿಗಮದ ಮಾಜಿ ಉಪಾಧ್ಯಕ್ಷ ಡಿ.ಎಸ್. ಮಾಳಗಿ ಅವರು ಪ್ರತಿ ಚುನಾವಣೆಯಲ್ಲೂ ಬಸವರಾಜ ಬೊಮ್ಮಾಯಿ ಅವರ ಗೆಲುವಿಗಾಗಿ ಶ್ರಮಿಸಿದ್ದೇವೆ, ಟಿಕೆಟ್ ತಮಗೇ ಕೊಡಬೇಕೆಂದು ನಾಯಕರಿಗೆ ದುಂಬಾಲು ಬಿದ್ದಿದ್ದಾರೆ. ತಮ್ಮದೇ ಕಾರ್ಯಕರ್ತರ ಪಡೆ ಕಟ್ಟಿಕೊಂಡು ಕ್ಷೇತ್ರದಲ್ಲಿ ಸಂಚರಿಸುವ ಮೂಲಕ ಪ್ರಚಾರ ಕಾರ್ಯವನ್ನೂ ಕೈಗೊಂಡಿದ್ದಾರೆ.

ಬಿಜೆಪಿ ವಲಯದಲ್ಲಿ ಉಪ ಚುನಾವಣೆಯ ಕಾವು ಅಷ್ಟೊಂದು ಜೋರಾಗಿ ಕಾಣದಿದ್ದರೂ, ಒಳಗೊಳಗೆ ಕಾರ್ಯತಂತ್ರ ಹೆಣೆಯುವಿಕೆ ನಡೆದಿದೆ. ಹೈಕಮಾಂಡ್ ಸಹ ಅಳೆದು ತೂಗಿ ಸೂಕ್ತ ಅಭ್ಯರ್ಥಿ ಕಣಕ್ಕಿಳಿಸುವ ಮೂಲಕ ಕ್ಷೇತ್ರವನ್ನು ವಶದಲ್ಲಿಟ್ಟುಕೊಳ್ಳಲು ಗೌಪ್ಯವಾಗಿ ಜನಾಭಿಪ್ರಾಯ ಸಂಗ್ರಹಿಸುತ್ತಿದೆ.

ಹಾವೇರಿ ಜಿಲ್ಲೆಯ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರ ಧಾರವಾಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿದೆ. ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಿಂತ ಕಾಂಗ್ರೆಸ್ ಅಭ್ಯರ್ಥಿ ಅಂದಾಜು 8,500 ಮತಗಳ ಮುನ್ನಡೆ ಸಾಧಿಸಿದ್ದಾರೆ. ಇದೇ ಕಾರಣಕ್ಕೆ ಉಪಚುನಾವಣೆಯಲ್ಲೂ ಕೈ ಅಭ್ಯರ್ಥಿ ಗೆಲುವು ಸಾಧಿಸಬಹುದೆಂಬ ಲೆಕ್ಕಾಚಾರ ಕಾಂಗ್ರೆಸ್ ವಲಯದಲ್ಲಿದೆ. ಹೀಗಾಗಿ, ಕಾಂಗ್ರೆಸ್ ಪಕ್ಷದಲ್ಲೂ ಟಿಕೆಟ್​ಗಾಗಿ ತೀವ್ರ ಪೈಪೋಟಿ ಇದೆ.

ಕ್ಷೇತ್ರ ವಶಪಡಿಸಿಕೊಳ್ಳುವ ಪ್ರಯತ್ನದ ಭಾಗವಾಗಿ ಮಂತ್ರಿಗಳು, ಘಟಾನುಘಟಿ ನಾಯಕರು ಈಗಾಗಲೇ ಹಲವು ಸುತ್ತಿನ ಮೂಲಕ ಕ್ಷೇತ್ರದಲ್ಲಿ ಪ್ರಚಾರ, ಪಕ್ಷದ ಸಂಘಟನೆ, ಕಾರ್ಯಕರ್ತರ ಒಗ್ಗೂಡಿಸುವಿಕೆಯಲ್ಲಿ ತೊಡಗಿದ್ದಾರೆ. ಹತ್ತಾರು ಕಾರ್ಯಕ್ರಮ ನಡೆಸಿ, ಕಾಂಗ್ರೆಸ್​ಗೆ ಪೂರಕ ವಾತಾವರಣ ಸೃಷ್ಟಿಗೆ ಯತ್ನ ನಡೆದಿದೆ.

1999ರಲ್ಲಿ ಜೆಡಿಯುನಿಂದ ಶಾಸಕರಾಗಿ ನಂತರದ ದಿನಗಳಲ್ಲಿ ಕಾಂಗ್ರೆಸ್ ಸೇರಿದ್ದ ಸೈಯ್ಯದ್ ಅಜೀಮಪೀರ್ ಖಾದ್ರಿ, ತನ್ನದೇ ಪಡೆಯೊಂದಿಗೆ ಕ್ಷೇತ್ರದಲ್ಲಿ ಶಕ್ತಿ ಪ್ರದರ್ಶಿಸುತ್ತಿದಾರೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಬಸವರಾಜ ಬೊಮ್ಮಾಯಿ ವಿರುದ್ಧ ಸೋತರೂ ಮೊದಲ ಚುನಾವಣೆಯಲ್ಲಿ 60 ಸಾವಿರಕ್ಕೂ ಹೆಚ್ಚು ಮತ ಪಡೆದಿರುವ ಯಾಸೀರ್​ಅಹಮದ್​ಖಾನ್ ಪಠಾಣ, ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಮಾಜಿ ಸಚಿವ ಆರ್. ಶಂಕರ, ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜು ಕುನ್ನೂರ ಅವರು ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ಸಾಧನೆ, ಗ್ಯಾರಂಟಿ ಯೋಜನೆಗಳ ಗಾಳಿ ಇದೆ. ಟಿಕೆಟ್ ತಮಗೇ ಸಿಗಲಿದೆ ಎಂದುಕೊಂಡು ಪ್ರಚಾರ ನಡೆಸುತ್ತಿದ್ದಾರೆ. ಇವರೊಂದಿಗೆ ಮಹಿಳಾ ಕೋಟಾದಡಿ ರಾಜೇಶ್ವರಿ ಪಾಟೀಲ, ಪ್ರೇಮಾ ಪಾಟೀಲ, ‘ಕಳೆದ 20ರಿಂದ 0 ವರ್ಷಗಳಿಂದಲೂ ಪಕ್ಷಕ್ಕಾಗಿ ದುಡಿಯುತ್ತಿದ್ದೇವೆ. ಉಪ ಚುನಾವಣೆಯಲ್ಲಿ ಮಹಿಳೆಯರಿಗೆ ಅವಕಾಶ ಕೊಡಿ’ ಎನ್ನುತ್ತಿದ್ದಾರೆ.

ಭುಗಿಲೆದ್ದ ಅಸಮಾಧಾನ: ಪಕ್ಷಕ್ಕಾಗಿ ನಿರಂತರವಾಗಿ ದುಡಿಯುತ್ತಿದ್ದು, ಕ್ಷೇತ್ರದ ಅಭಿವೃದ್ಧಿಗಾಗಿ ತಾಲೂಕಿನವರಿಗೆ ಟಿಕೆಟ್ ಕೊಡಬೇಕು. ಬೇರೆಡೆಯಿಂದ ಬಂದವರಿಗೆ, ಪಕ್ಷಾಂತರಿಗಳಿಗೆ ಮಣೆ ಹಾಕಬಾರದು. ಚುನಾವಣೆ ಇದ್ದಾಗ ಮಾತ್ರ ಬರುವವರನ್ನೂ ಜನತೆ ಒಪ್ಪಲ್ಲ. ಇಲ್ಲಿನ ಸಮಸ್ಯೆಗಳು ಅವರಿಗೆ ಗೊತ್ತಾಗವುದಿಲ್ಲ ಎನ್ನುತ್ತಾರೆ ಸ್ಥಳೀಯರು.

ಜನರ ಮನ ಗೆಲ್ಲಲು ಕಸರತ್ತು: ಕಳೆದೆರಡು ತಿಂಗಳಿನಿಂದ ತಾಲೂಕಿನಲ್ಲಿ ರಾಜಕೀಯ ನಾಯಕರು ತಮ್ಮ, ತಮ್ಮ ನಾಯಕರ ಜನ್ಮದಿನದ ನೆಪದಲ್ಲಿ ಜನರಿಗೆ ಹತ್ತಿರವಾಗುತ್ತಿದ್ದಾರೆ. ಉಚಿತ ಆರೋಗ್ಯ ತಪಾಸಣೆ, ರಸಮಂಜರಿ ಕಾರ್ಯಕ್ರಮ ಸೇರಿದಂತೆ ವಿದ್ಯಾರ್ಥಿಗಳಿಗೆ ಸ್ಕೂಲ್ ಬ್ಯಾಗ್ ವಿತರಣೆ, ನೊಂದವರಿಗೆ ಪರಿಹಾರ ಕೊಡುವ ಮೂಲಕ ಜನರ ವಿಶ್ವಾಸ ಗಳಿಸುವ ಕೆಲಸ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net