ಕಳವಾಗಿದ್ದ ಟ್ರ್ಯಾಕ್ಟರ್, ಟ್ರೇಲರ್ ಪತ್ತೆ

ARREST
Published on

ಮುಂಡರಗಿ: ತಾಲೂಕಿನ ಕಲಕೇರಿ ಮತ್ತು ಬಸಾಪೂರ ಗ್ರಾಮಗಳಲ್ಲಿ ಕಳವಾಗಿದ್ದ 9 ಲಕ್ಷ ರೂ. ಮೌಲ್ಯದ ಎರಡು ಟ್ರ್ಯಾಕ್ಟರ್ ಮತ್ತು ಒಂದು ಟ್ರೇಲರ್ ಅನ್ನು ಪಟ್ಟಣದ ಪೊಲೀಸರು ಗುರುವಾರ ಪತ್ತೆ ಹಚ್ಚಿ ಇಬ್ಬರನ್ನು ಬಂಧಿಸಿದ್ದಾರೆ.

ವಿಶ್ವನಾಥ ವಿರೂಪಾಕ್ಷಪ್ಪ ತಾಮ್ರಗುಂಡಿ ಹಾಗೂ ಗಣೇಶ ಪಾಂಡಪ್ಪ ಕಂಚಗಾರ ಬಂಧಿತರು. ಪೊಲೀಸ್ ಠಾಣೆಯಲ್ಲಿ ಈ ಕುರಿತು ಮಾಹಿತಿ ನೀಡಿದ ಎಸ್‌ಪಿ ಬಿ.ಎಸ್.ನೇಮಗೌಡ ಮಾತನಾಡಿ, ಘಟನೆಗೆ ಸಂಬಂಧಿಸಿದಂತೆ ಎರಡು ಪ್ರತೇಕ ಪ್ರಕರಣಗಳು ದಾಖಲಾಗಿದ್ದವು. ಆರೋಪಿಗಳನ್ನು ವಶಕ್ಕೆ ಪಡೆದಿದ್ದು ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ರೈತರು ತಮ್ಮ ಟ್ರ್ಯಾಕ್ಟರ್, ಬೈಕ್ ಮೊದಲಾದ ವಾಹನಗಳ ಬಗ್ಗೆ ಹೆಚ್ಚಿನ ನಿಗಾವಹಿಸಬೇಕು ಎಂದರು.

ಜಿಲ್ಲೆಯಲ್ಲಿ ಶೇ.70ರಿಂದ 80ರಷ್ಟು ಬೈಕ್ ಅಪಘಾತಗಳು ನಡೆಯುತ್ತಿವೆ. ಅಕ್ರಮ ಹಾಗೂ ಅಹಿತಕರ ಘಟನೆಗಳನ್ನು ತಡೆಯಲು ಪ್ರಮುಖ ಸರ್ಕಲ್‌ನಲ್ಲಿ ಥರ್ಡ್ ಐ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಸಂಚಾರ ನಿಯಮ ಪಾಲಿಸಬೇಕು ಎಂದರು.

ಎಸ್‌ಪಿ ಬಿ.ಎಸ್.ನೇಮಗೌಡ, ಎಎಸ್‌ಪಿ ಎಂ.ಬಿ. ಸುಂಕದ, ಡಿವೈಎಸ್‌ಪಿ ಪ್ರಭುಗೌಡ ಕಿರೇದಳ್ಳಿ ಅವರ ಮಾರ್ಗದರ್ಶನದಲ್ಲಿ ಸಿಪಿಐ ಮಂಜುನಾಥ ಕುಸಗಲ್ಲ, ಪಿಎಸ್‌ಐ ಸುಮಾ ಗೊರಬಾಳ, ಯೊಸುಫ್ ಜಮುಲಾ ಹಾಗೂ ಪೊಲೀಸ್ ಸಿಬ್ಬಂದಿಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಪ್ರಕರಣ ಬೇಧಿಸಲು ಶ್ರಮಿಸಿದ ಪೊಲೀಸರಿಗೆ ಎಸ್‌ಪಿ ಹಾಗೂ ಹೆಚ್ಚುವರಿ ಎಸ್‌ಪಿ ಪ್ರಶಂಸೆ ವ್ಯಕ್ತಪಡಿಸಿ ಸೂಕ್ತ ಬಹುಮಾನ ಘೋಷಿಸಿದ್ದಾರೆ.

ಟ್ರ್ಯಾಕ್ಟರ್ ಮತ್ತು ಟ್ರೇಲರ್ ಪತ್ತೆ ಮಾಡಲು ಶ್ರಮಿಸಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ರೈತ ಮುಖಂಡರು ಸನ್ಮಾನಿಸಿದರು. ಡಿವೈಎಸ್‌ಪಿ ಪ್ರಭುಗೌಡ ಕಿರೇದಳ್ಳಿ, ಸಿಪಿಐ ಮಂಜುನಾಥ ಕುಸಗಲ್ಲ, ಪಿಎಸ್‌ಐ ಸುಮಾ ಗೊರಬಾಳ ಪೊಲೀಸ್ ಸಿಬ್ಬಂದಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net