ಕೆಂಪಾದವೋ ಚಾಮುಂಡಿ ಬೆಟ್ಟದ ಮೆಟ್ಟಿಲುಗಳು!

8
Published on

ಮೈಸೂರು: ಕೆಂಪಾದವೋ ಎಲ್ಲ ಕೆಂಪಾದವೋ ಹಸುರಿದ್ದ ಗಿಡಮರ ಬೆಳ್ಳಗಿದ್ದ ಹೂವೆಲ್ಲ ನೆತ್ತರ ಕುಡೀದ್ಹಾಂಗೆ ಕೆಂಪಾದವೋ..!

ಪಿ.ಲಂಕೇಶ್ ರಚನೆಯ ‘ಎಲ್ಲಿಂದಲೋ ಬಂದವರು’ ಸಿನಿಮಾದ ಈ ಗೀತೆ, ಸದ್ಯ ಮೈಸೂರಿನ ಕಿರೀಟದಂತಿರುವ ಚಾಮುಂಡಿ ಬೆಟ್ಟದ ಮೆಟ್ಟಿಲುಗಳಿಗೆ ಅನ್ವಯಿಸುತ್ತಿದೆ. ಈ ಹಾಡಿನಲ್ಲಿ ಹುಲ್ಲು, ಬಳ್ಳಿ, ಊರು, ಕಂದಮ್ಮಗಳು ಕೆಂಪಾದರೆ, ಚಾಮುಂಡಿಬೆಟ್ಟದಲ್ಲಿ ಪ್ರತಿ ಮೆಟ್ಟಿಲುಗಳು ಕೆಂಪಾಗಿವೆ.

ಪ್ರತಿ ಶುಕ್ರವಾರ ಮತ್ತು ಮಂಗಳವಾರ ಭಕ್ತರು ಚಾಮುಂಡಿ ಬೆಟ್ಟದ ಮೆಟ್ಟಿಲು ಹತ್ತುವ ಮೂಲಕ ತಾಯಿ ದರ್ಶನ ಪಡೆಯುವುದು ವಿಶೇಷ. ಇದೀಗ ಆಷಾಢ ಶುಕ್ರವಾರಗಳಂದು ಮೆಟ್ಟಿಲು ಹತ್ತುವ ಭಕ್ತರ ಸಂಖ್ಯೆ ದ್ವಿಗುಣಗೊಳ್ಳುತ್ತದೆ. ಈ ವೇಳೆ ಬಹುತೇಕ ಭಕ್ತರು ಹರಕೆ ನೆಪದಲ್ಲಿ ಮೆಟ್ಟಿಲುಗಳಿಗೆ ಅರಿಶಿಣ- ಕುಂಕುಮ ಹಚ್ಚುತ್ತಿದ್ದು, ಚಾಮುಂಡಿಬೆಟ್ಟದ ಪ್ರತಿ ಮೆಟ್ಟಿಲು ಕೆಂಪು ಬಣ್ಣಕ್ಕೆ ತಿರುಗಿವೆ.

ಅಪಾಯ ಕೂಡ: ಚಾಮುಂಡಿಬೆಟ್ಟದಲ್ಲಿ ನಡೆಯುತ್ತಿರುವ ಭಕ್ತಿಯ ಪರಾಕಾಷ್ಠೆ ವನ್ಯಜೀವಿಗಳಿಗೆ ಅಪಾಯವಾಗಿಯೂ ಪರಿಣಮಿಸಿದೆ. ಬೆಟ್ಟದಲ್ಲಿ ಚಿರತೆ, ಕಾಡುಹಂದಿ, ನವೀಲು, ಮುಳ್ಳು ಹಂದಿ ಸೇರಿದಂತೆ ಹತ್ತಾರು ಬಗೆಯ ವನ್ಯಜೀವಿಗಳು, ಪಕ್ಷಿ ಸಂಕುಲಗಳಿವೆ. ಕುಂಕುಮ ತಯಾರಿಕೆಯಲ್ಲಿ ಅನೇಕ ರೀತಿಯ ಕೆಮಿಕಲ್ಸ್ ಬಳಸಲಾಗುತ್ತಿದೆ. ಬೆಟ್ಟದಲ್ಲಿ ಓಡಾಡುವಾಗ ಪ್ರಾಣಿಗಳು ಮೆಟ್ಟಿಲಿಗೆ ಬಳಿದಿರುವ ಕುಂಕುಮವನ್ನು ನೆಕ್ಕಿದರೆ ಅಥವಾ ತಿಂದರೆ ಅವುಗಳ ಪ್ರಾಣಕ್ಕೆ ಸಂಚಕಾರ.

ಇನ್ನು ವಾಯುವಿಹಾರಕ್ಕಾಗಿ ನಿತ್ಯ ನೂರಾರು ಜನ ಬೆಟ್ಟದ ಮೆಟ್ಟಿಲುಗಳನ್ನು ಹತ್ತುತ್ತಾರೆ. ಈಗ ಮಳೆ ಬಿದ್ದಿರುವ ಪರಿಣಾಮ ಮೆಟ್ಟಿಲುಗಳಿಗೆ ಬಳಿದಿರುವ ಕುಂಕುಮ ಪಾಚಿಕಟ್ಟಿದ್ದು, ಬೆಟ್ಟ ಹತ್ತುವವರು ಜಾರುವ ಅಪಾಯ ಎದುರಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net