ಪ್ರತಿಮೆ ಬಂತು ತಂಗುದಾಣ ಹೋಯ್ತ: ಸೆಂಟ್ರಲ್ ವೃತ್ತದ ಬಳಿ ಪ್ರಯಾಣಿಕರಿಗೆ ತೊಂದರೆ

bus stand
Published on

ಬೆಂಗಳೂರು: ಮಹಾನಗರದ ಜನನಿಬಿಡ ಸ್ಥಳಗಳಲ್ಲಿ ಒಂದೆನಿಸಿರುವ ಶೇಷಾದ್ರಿಪುರದ ಸೆಂಟ್ರಲ್ ವೃತ್ತದಲ್ಲಿ ನಾಯಕರೊಬ್ಬರ ಪ್ರತಿಮೆ ಸ್ಥಾಪನೆಯಿಂದಾಗಿ ತಂಗುದಾಣ ಎತ್ತಂಗಡಿಯಾಗಿದ್ದು, ಪ್ರಯಾಣಿಕರು ಬಿಸಿಲಿನಲ್ಲೇ ಬಸ್‌ಗಾಗಿ ಕಾಯುವ ಶಿಕ್ಷೆಗೆ ಒಳಗಾಗಿದ್ದಾರೆ.

ಸದ್ಯ ನಗರದಲ್ಲಿ ಬಿಸಿಲಿನ ಝಳ ಹೆಚ್ಚಾಗುತ್ತಿದೆ. ಬಿರುಬೇಸಿಗೆಯಲ್ಲಿ ಒಂದು ಸ್ಥಳದಿಂದ ಇನ್ನೊಂದು ಪ್ರದೇಶಕ್ಕೆ ತೆರಳುವುದು ಕಷ್ಟವಾಗುತ್ತಿದೆ. ಇಂತಹ ಸನ್ನಿವೇಶದಲ್ಲಿ ಪ್ರಯಾಣಿಕರು ಬಿಸಿಲಿನಿಂದ ಆಶ್ರಯ ಇಲ್ಲದೆ ಬಸ್‌ಗಾಗಿ ಕಾದು ನಿಲ್ಲಬೇಕಿದೆ. ಮಧ್ಯಾಹ್ನದ ಸುಡು ಬಿಸಿಲಿನಲ್ಲಿ ನಿಲ್ಲಲಾಗದವರು ದೂರದ ಮಳಿಗೆ ಬಳಿ ನಿಂತು, ಬಸ್ ಬಂದಾಗ ಓಡೋಡಿ ಬರುವ ವೇಳೆಗೆ ವಾಹನವು ತೆರಳಿರುತ್ತದೆ. ಮತ್ತೆ ಇನ್ನೊಂದು ಬಸ್‌ಗಾಗಿ ಬಿಸಿಲಲ್ಲಿ ನಿಲ್ಲುವುದು ಅನಿವಾರ್ಯವಾಗಿದೆ.

ದಶಕಗಳಿಂದ ಕಾರ್ಯಾಚರಿಸುತ್ತಿರುವ ಸೆಂಟ್ರಲ್ ವೃತ್ತದ ಬಸ್ ನಿಲ್ದಾಣ ಈ ಭಾಗದ ಪ್ರಮುಖ ತಾಣವಾಗಿದೆ. ಟ್ರೈ ಜಂಕ್ಷನ್ ಎನಿಸಿರುವ ಈ ಸ್ಥಳದಿಂದ ಶೇಷಾದ್ರಿಪುರ, ಮಲ್ಲೇಶ್ವರ ಹಾಗೂ ಮೆಜೆಸ್ಟಿಕ್ ಪ್ರದೇಶದತ್ತ ತೆರಳುವ ಸಂರ್ಪಕ ಸ್ಥಳವಾಗಿದೆ. ಇಲ್ಲಿಂದ ಹೆಚ್ಚಿನ ಸಂಖ್ಯೆಯಲ್ಲಿ ವೃದ್ಧರು, ಮಹಿಳೆಯರು ಸೇರಿ ಶಾಲಾ - ಕಾಲೇಜು ವಿದ್ಯಾರ್ಥಿ ಸಮೂಹವು ಬಿಎಂಟಿಸಿ ವಾಹನ ಬಳಸುತ್ತಿದ್ದಾರೆ. ಇತ್ತೀಚಿಗೆ ಸರ್ಕಾರ ಘೋಷಿಸಿದ್ದ ಶಕ್ತಿ ಯೋಜನೆ ಬಳಿ ಈ ಮಾರ್ಗದಲ್ಲಿ ಪ್ರಯಾಣಿಕರ ಸಂಖ್ಯೆ ಏರಿದೆ. ಹೀಗಾಗಿ ಸೆಂಟ್ರಲ್ ಬಸ್ ನಿಲ್ದಾಣದಲ್ಲಿ ಜನರ ದಟ್ಟಣೆ ಹೆಚ್ಚಿರುತ್ತದೆ. ಹಾಗಾಗಿ ಇಲ್ಲಿ ಬಸ್ ನಿಲುಗಡೆ ತಾಣ ಅನಿವಾರ್ಯ ಬೇಕಿದೆ ಎನ್ನುತ್ತಾರೆ ಸಾರ್ವಜನಿಕರು.

ಜಂಕ್ಷನ್ ಅಭಿವೃದ್ಧಿ ತಂದಿಟ್ಟ ಪತೀಜಿ:

ಇತ್ತೀಚಿಗೆ ಈ ಜಂಕ್ಷನ್‌ನಲ್ಲಿದ್ದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಪ್ರತಿಮೆಯನ್ನು ಹೊಸದಾಗಿ ರೂಪಿಸಿ ಪ್ರತಿಷ್ಠಾಪಿಸಲಾಗಿದೆ. ಈ ವೇಳೆ ಜಂಕ್ಷನ್‌ಗೆ ಹೊಸ ಲುಕ್ ನೀಡಲಾಗಿದೆ. ತ್ರಿಕೋನಾಕಾರದಲ್ಲಿರುವ ಜಂಕ್ಷನ್‌ಅನ್ನು ಅಭಿವೃದ್ಧಿಪಡಿಸುವ ವೇಳೆ ಇಲ್ಲಿದ್ದ ತಂಗುದಾನವನ್ನು ತೆರವು ಮಾಡಲಾಗಿದೆ. ಇದರ ಬದಲಿಗೆ ಕಲ್ಲು, ಸಿಮೆಂಟ್ ಆಸನವನ್ನು ನಿರ್ಮಿಸಲಾಗಿದೆ. ಆದರೆ, ಬಿಸಿಲು, ಮಳೆಯಿಂದ ಆಶ್ರಯ ಪಡೆಯಲು ಯಾವುದೇ ವ್ಯವಸ್ಥೆ ಮಾಡಿಲ್ಲ. ಬಸ್ ನಿಲ್ದಾಣ ನಿರ್ಮಿಸಿದರೆ ಜನರಿಗೆ ಪ್ರತಿಮೆ ಕಾಣದು ಎಂಬ ಕಾರಣಕ್ಕಾಗಿ ಪಾಲಿಕೆ ಅಧಿಕಾರಿ ವರ್ಗ ಪ್ರಯಾಣಿಕರಿಗೆ ರಸ್ತೆಬದಿ ನಿಲ್ಲುವಂತೆ ಮಾಡಿದ್ದಾರೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹುಸಿಯಾದ ಭರವಸೆ:

ಸೆಂಟ್ರಲ್ ಜಂಕ್ಷನ್‌ನಲ್ಲಿ ರಾಜೀವ್ ಗಾಂಧಿ ಪ್ರತಿಮೆ ಒಳಗೊಂಡ ಸ್ಥಳವನ್ನು ಎರಡು ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಗೊಳಿಸಿದೆ. ಇದನ್ನು ಇತ್ತೀಚಿಗಷ್ಟೇ ಸಿಎಂ ಹಾಗೂ ಡಿಸಿಎಂ ಲೋಕಾರ್ಪಣೆ ಮಾಡಿದ್ದರು. ಈ ವೇಳೆ ಹಳೆಯ ತಂಗುದಾಣವನ್ನು ತೆರವು ಮಾಡಿದ ಬಳಿಕ ಹೊಸದಾಗಿ ನಿರ್ಮಿಸಬೇಕೆಂಬ ನಾಗರಿಕರ ಮನವಿಗೆ ಪಾಲಿಕೆ ಸ್ಪಂದಿಸಿತ್ತು. ಆದರೀಗ ಬಿಬಿಎಂಪಿ ಅಧಿಕಾರಿಗಳು ಬಸ್ ಶೆಲ್ಟರ್ ನಿರ್ಮಿಸುವ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೆ ಮೌನಕ್ಕೆ ಶರಣರಾಗಿದ್ದಾರೆ. ಸಾರ್ವಜನಿಕರ ಹಣದಲ್ಲಿ ಸಾರ್ವಜನಿಕ ಸ್ಥಳವನ್ನು ಅಭಿವೃದ್ಧಿಪಡಿಸುವ ವೇಳೆ ನಾಗರಿಕ ಸೌಲಭ್ಯ ಒದಗಿಸಲು ಸಾಧ್ಯವಿಲ್ಲ ಎಂದರೆ ಹೇಗೆ ಎಂಬ ಆಕ್ಷೇಪ ಸ್ಥಳೀಯರಿಂದ ಕೇಳಿಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net