ಕೋಲು ಕೀಳುವಾಗ ಉರುಳಿತು ಪ್ರತಿಮೆ

24 hhr 01
ಗಾಂಧಿಪ್ರತಿಮೆ ಧ್ವಂಸ ಮಾಡಿದ ಆರೋಪಿಗಳನ್ನು ಬಂಧಿಸಿದ ಹೊಳೆಹೊನ್ನೂರು ಪೊಲೀಸರ ತಂಡದ ಜತೆ ಎಸ್ಪಿ ಜಿ.ಕೆ.ಮಿಥುನ್‌ಕುಮಾರ್, ಅನಿಲ್‌ಕುಮಾರ್ ಭೂಮರಡ್ಡಿ, ನಾಗರಾಜ್ ನಾಯ್ಕ, ಲಕ್ಷ್ಮೀಪತಿ.
Published on

ಹೊಳೆಹೊನ್ನೂರು: ಭದ್ರಾವತಿ ತಾಲೂಕಿನ ಹೊಳೆಹೊನ್ನೂರಿನಲ್ಲಿ ಮೂರು ದಿನಗಳ ಹಿಂದೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಪ್ರತಿಮೆ ಧ್ವಂಸ ಮಾಡಿದ್ದ ಇಬ್ಬರು ಆರೋಪಿಗಳನ್ನು ಶಿವಮೊಗ್ಗ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.ಚಿತ್ರದುರ್ಗ ಜಿಲ್ಲೆಯ ಪಂಡರಹಳ್ಳಿಯ ವಿನಯ್ (24) ಹಾಗೂ ಗಣೇಶ್ (23) ಬಂಧ ಆರೋಪಿಗಳು. ಸ್ನೇಹಿತರಾದ ಇಬ್ಬರು ಯುವಕರು ಮದ್ಯದ ಅಮಲಿನಲ್ಲಿ ಗಾಂಧಿ ಪ್ರತಿಮೆ ಕೈಯಲ್ಲಿದ್ದ ಕೋಲು ಮತ್ತು ಪುಸ್ತಕವನ್ನು ಕಿತ್ತುಕೊಳ್ಳುವ ಭರದಲ್ಲಿ ಪ್ರತಿಮೆಯನ್ನು ಬೀಳಿಸಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಸಿಮೆಂಟ್‌ನಿಂದ ಮಾಡಿದ್ದ ಗಾಂಧಿ ಪ್ರತಿಮೆಯಲ್ಲಿದ್ದ ಪುಸ್ತಕ ಕಿತ್ತುಕೊಳ್ಳಲು ಬಾರದ ಕಾರಣ ಪ್ರತಿಮೆಗೆ ಗುದ್ದಿ ಜೋರಾಗಿ ಅಲುಗಾಡಿಸಿ ಪ್ರತಿಮೆಯನ್ನು ಬೀಳಿದ್ದಾರೆ. ಕೃತ್ಯದ ನಂತರ ಶಿವಮೊಗ್ಗ ತಲುಪಿದ ಯುವಕರ ಚಲನವಲನಗಳು ಶಿವಮೊಗ್ಗದ ಸ್ಮಾರ್ಟ್‌ಸಿಟಿ ಸಿಸಿಟಿವಿಯಲ್ಲಿ ಸೆರೆಯಾಗಿದವು. ಹೀರೋ ಎಕ್ಸ್ ಪ್ಲಸ್ ಬೈಕ್ ನಂಬರ್ ಆಧರಿಸಿ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ. ಈ ಇಬ್ಬರು ಆರೋಪಿಗಳು ಭಾನುವಾರ ತಡರಾತ್ರಿ ಹೊಳೆಹೊನ್ನೂರಿನ ಗಾಂಧಿ ವೃತ್ತದಲ್ಲಿನ ಗಾಂಧಿ ಪ್ರತಿಮೆಯನ್ನು ಧ್ವಂಸಗೊಳಿಸಿ ಹೋಗಿದ್ದರು. ಪ್ರಕರಣ ಬೇಧಿಸಲು ಹೊಳೆಹೊನ್ನೂರು ಸಿಪಿಐ ಲಕ್ಷ್ಮೀಪತಿ, ಮರ್ದನ್, ಗುರುಮೂರ್ತಿ ಸೇರಿ 50 ಜನರ ಮೂರು ತಂಡ ರಚನೆ ಮಾಡಲಾಗಿತ್ತು.ವಿನಯ್ ಮತ್ತು ಗಣೇಶ್ ಭಾನುವಾರ ಚಿತ್ರದುರ್ಗಕ್ಕೆ ಹೋಗಿ ಗಣಪತಿ ಹಬ್ಬದ ಮೆರವಣಿಗೆಗೆ ಡಿಜೆ ಬುಕ್ ಮಾಡಿ ವಾಪಸ್ ಊರಿಗೆ ಹೋಗುವಾಗ ಸ್ನೇಹಿತರ ಗುಂಪಿನಿಂದ ಬೇರ್ಪಟ್ಟು ತಮ್ಮ ಬಳಿ ಇದ್ದ 3 ಸಾವಿರ ರೂಪಾಯಿಯಲ್ಲಿ ಲಾಂಗ್ ಡ್ರೈವ್ ಹೋಗೋಣವೆಂದು ತೀರ್ಮಾನಿಸಿದ್ದಾರೆ. ಚಿತ್ರದುರ್ಗದಲ್ಲಿ ಗಣೇಶನ ಹೀರೋ ಎಕ್ಸ್‌ಪ್ಲಸ್ ಬೈಕ್‌ಗೆ ಪೆಟ್ರೋಲ್ ತುಂಬಿಸಿಕೊಂಡು ಶಿವಮೊಗ್ಗದತ್ತ ಹೊರಟಿದ್ದಾರೆ. ಶಿವಮೊಗ್ಗ-ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿ ರಸ್ತೆ ಬಳಸಿ ಬಂದ ಆರೋಪಿಗಳು ರಸ್ತೆ ಬದಿ ಅಂಗಡಿಯೊಂದರಲ್ಲಿ ಮದ್ಯ ಸೇವಿಸಿ ಎಗ್‌ರೈಸ್ ತಿಂದಿದ್ದಾರೆ. ಹೊಳೆಹೊನ್ನೂರು ಪ್ರವೇಶಿಸುತ್ತಿದಂತೆ ಮತ್ತೊಮ್ಮೆ ಮದ್ಯ ಸೇವಿಸಿದ ಯುವಕರು ಗಾಂಧಿ ಪ್ರತಿಮೆ ಬಳಿ ಹೋಗಿದ್ದಾರೆ. ವಾರದ ಹಿಂದಷ್ಟೇ ಸ್ವಾತಂತ್ರೊೃೀತ್ಸವ ಆಚರಣೆಗೆಂದು ವಿದ್ಯುತ್ ದೀಪಗಳಿಂದ ಅಲಂಕಾರಗೊಂಡಿದ ಗಾಂಧಿ ಪ್ರತಿಮೆ ಬಳಿ ಹೋದ ವಿನಯ್ ಗಾಂಧಿ ಪ್ರತಿಮೆ ಕೈಯಲ್ಲಿದ ಪುಸ್ತಕ ಮತ್ತು ಕೋಲು ಕಿತ್ತುಕೊಳ್ಳಲು ಪ್ರಯತ್ನಿಸಿದ್ದಾನೆ. ಸಿಮೆಂಟ್‌ನಿಂದ ಮಾಡಲಾಗಿದ್ದ ಪುಸ್ತಕ ಬಾರದ ಕಾರಣ ಒಂದೆರಡು ಬಾರಿ ಪ್ರತಿಮೆಗೆ ಗುದ್ದಿ ಅಲುಗಾಡಿಸಿದ್ದಾನೆ. ಕುಡಿದ ಮತ್ತಿನಲ್ಲಿ ಪ್ರತಿಮೆಗೆ ಗುದ್ದಿ ತಳ್ಳಾಡಿದ ಕಾರಣ ಗಾಂಧಿ ಪ್ರತಿಮೆ ಕೆಳಗೆ ಬಿದ್ದಿದೆ. ಕೂಡಲೆ ಅಲ್ಲಿಂದ ಕಾಲ್ಕಿತ ಯುವಕರು ದಾರಿತಪ್ಪಿ ಹೊಳೆಹೊನ್ನೂರು ಸಿದ್ಲಿಪುರ ರಸ್ತೆಯಲ್ಲಿ ಹೊಸ ಸೇತುವೆ ಮಾರ್ಗವಾಗಿ ಹೊನ್ನಾಳಿ ಕಡೆ ಹೋಗಿದ್ದಾರೆ. ದಾರಿ ತಪ್ಪಿರುವುದು ಅರಿವಾಗುತ್ತಿದ್ದಂತೆ ಹೊನ್ನಾಳಿ ಕಡೆಯಿಂದ ಹೊಳಲೂರು ಮಾರ್ಗವಾಗಿ ಶಿವಮೊಗ್ಗ ತಲುಪಿ ಸ್ನೇಹಿತನ ಮನೆಯಲ್ಲಿ ಮಲಗಿದ್ದಾರೆ.ಸೋಮವಾರ ಹೊಳೆಹೊನ್ನೂರು ಮಾರ್ಗವಾಗಿ ಚಿತ್ರದುರ್ಗಕ್ಕೆ ವಾಪಸ್ ಹೋಗುವಾಗ ಹೊಳೆಹೊನ್ನೂರಿನಲ್ಲಿ ನಡೆಯುತ್ತಿದ್ದ ಗಲಾಟೆಯ ರಸ್ತೆ ತಡೆಯಲ್ಲಿ ನಿಂತಿದ್ದಾರೆ. ಯುವಕರಿಗೆ ಹೊಳೆಹೊನ್ನೂರಿನಲ್ಲಿ ಯಾವ ವಿಷಯಕ್ಕೆ ಗಲಾಟೆ ನಡೆಯುತ್ತಿದೆ ಎಂದು ಅರಿವಿಗೆ ಬಾರದೆ ಚಿತ್ರದುರ್ಗ ತಲುಪಿದ್ದಾರೆ. ವಾಟ್ಸಾಪ್ ಹಾಗೂ ಮಾಧ್ಯಮಗಳಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು ನೋಡಿದ ನಂತರ ಆರೋಪಿಗಳಿಗೆ ತಾವು ಮಾಡಿರುವ ಕೃತ್ಯದ ಬಗ್ಗೆ ಅರಿವಾಗಿದೆ. ಅಷ್ಟರಲ್ಲೇ ಹೊಳೆಹೊನ್ನೂರು ಪೊಲೀಸರು ಆರೋಪಿಗಳು ಮನೆಯ ಕದತಟ್ಟಿದ್ದಾರೆ. ಪಂಡರಹಳ್ಳಿಯಲ್ಲಿ ವಿನಯ್‌ನನ್ನು ವಶಕ್ಕೆ ಪಡೆದ ಪೊಲೀಸರು, ಸೊಂಡೆಕೊಳದ ಅಕ್ಕನ ಮನೆಯ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಗಣೇಶನನ್ನು ಬಂಧಿಸಿ ಹೊಳೆಹೊನ್ನೂರಿಗೆ ಕರೆತಂದಿದ್ದಾರೆ. ಗುರುವಾರ ಹೊಳೆಹೊನ್ನೂರು ಠಾಣೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್‌ಕುಮಾರ್ ಪ್ರತಿಮೆ ಧ್ವಂಸ ಪ್ರಕರಣ ಇಲಾಖೆಗೆ ಸವಾಲಾಗಿತ್ತು. ಗ್ರೌಂಡ್ ಇಂಟಲಿಜೆನ್ಸಿ ತಂತ್ರಜ್ಞಾನ ಬಳಸಿ ಪ್ರಕರಣ ಬೇಧಿಸಲಾಗಿದೆ ಎಂದು ಹೇಳಿದರು. ಇಬ್ಬರು ಯುವಕರಿಗೆ ಯಾವುದೇ ಸಂಘ-ಸಂಸ್ಥೆಗಳೊಂದಿಗೆ ಸಂಬಂಧವಿಲ್ಲ. ಹಿಂದೆ ಆರೋಪಿಗಳಿಬ್ಬರ ಮೇಲೆ ಯಾವುದೇ ಪ್ರಕರಣಗಳೂ ದಾಖಲಾಗಿಲ್ಲ. ಹೊಳೆಹೊನ್ನೂರಿನಲ್ಲಿ ಹೊಸದಾಗಿ ಪ್ರತಿಮೆ ಸ್ಥಾಪಿಸುವ ಕುರಿತು ಜಿಲ್ಲಾಡಳಿತದೊಂದಿಗೆ ಮಾತುಕತೆ ನಡೆಸಲಾಗಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net