ರಾಜ್ಯದ ಸಾಲ ಸಾಮರ್ಥ್ಯ 2.44 ಲಕ್ಷ ಕೋಟಿ ರೂ.

Cm Yediyurappa 30 Dec 19
Published on

ಬೆಂಗಳೂರು: ಕೃಷಿ ವಲಯ ಸೇರಿ ಆದ್ಯತಾ ವಲಯಗಳಿಗೆ ರಾಜ್ಯದ ಸಾಲದ ಸಾಮರ್ಥ್ಯ 2,44,564.28 ಕೋಟಿ ರೂ.ಗಳೆಂದು ನಬಾರ್ಡ್ ಗುರುತಿಸಿದೆ.

ರಾಜ್ಯದ ಸಾಲದ ಸಾಮರ್ಥ್ಯ ಕುರಿತಂತೆ ಪೋಕಸ್ ಪೇಪರನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ನಬಾರ್ಡ್ ಬುಧವಾರ ಸಲ್ಲಿಸಿತು. ಫೋಕಸ್ ಪೇಪರ್ ಪ್ರಕಾರ 2020-21ನೇ ಸಾಲಿಗೆ ಅಂದಾಜಿಸಲಾದ ಸಾಲ ಸಾಮರ್ಥ್ಯವು 2019-20 ಸಾಲಿನ ಅಂದಾಜಿಗಿಂತ ಶೇ.4.30 ಹೆಚ್ಚುವರಿಯಾಗಿದೆ. ಕೃಷಿ ವಲಯಕ್ಕೆ 1,45,798 ಕೋಟಿ ರೂ. ಎಂದು ಅಂದಾಜಿಸಲಾಗಿದೆ ಕೃಷಿ ವಲಯ ಸಮಸ್ಯೆಗಳಿಂದ ಹೊರಬರಲು ಕ್ರಿಯಾಯೋಜನೆ ರೂಪಿಸಬೇಕಿದೆ.

ಸರ್ಕಾರ ಹಾಗೂ ಬ್ಯಾಂಕುಗಳು ಒಟ್ಟಿಗೆ ಕೆಲಸ ಮಾಡಲು ಹಾಗೂ ಗ್ರಾಮೀಣ ಆರ್ಥಿಕತೆ ಮತ್ತು ಕೃಷಿಗೆ ಅವಶ್ಯಕವಾದ ಸಾಲದ ಹರಿವು ಲಭ್ಯವಾಗುವಂತೆ ವಿಸõತವಾಗಿ ರ್ಚಚಿಸಿ ನಿರ್ಧಾರಗಳನ್ನು ಕೈಗೊಳ್ಳಬೇಕಿದೆ. ಕೃಷಿ ಕಾರ್ಯಗಳಿಗೆ ಹೆಚ್ಚಿನ ಬಂಡವಾಳ ಹೂಡಿಕೆ ಅಗತ್ಯ. ಸಕಾಲದಲ್ಲಿ ಸಾಲ ಸೌಲಭ್ಯ ಸಿಗದಿದ್ದರೆ ಅಸಾಧ್ಯ ಎಂದು ಯಡಿಯೂರಪ್ಪ ಅಭಿಪ್ರಾಯಪಟ್ಟರು.

ನಬಾರ್ಡ್ ಮುಖ್ಯ ಮಹಾ ಪ್ರಬಂಧಕರಾದ ಪಿ.ವಿ.ಎಸ್.ಸೂರ್ಯಕುಮಾರ್ 2020-21 ನೇ ಸಾಲಿನ ಸಾಲ ಅಂದಾಜು ವೆಚ್ಚದ ವಿವರಗಳನ್ನು ನೀಡಿದರು.

ಕೃಷಿ ಸಾಲ: ಬೆಳೆ ಉತ್ಪಾದನೆ ನಿರ್ವಹಣೆ ಹಾಗೂ ಮಾರ್ಕೆಟಿಂಗ್​ಗೆ 8521102.90 ಲಕ್ಷ ರೂ., ಕೃಷಿ ಮತ್ತು ಕೃಷಿ ಪೂರಕ ಚಟುವಟಿಕೆಗಳಿಗೆ ಒಟ್ಟು ಸಾಲ 3100503.84 ಲಕ್ಷ ರೂ., ಕೃಷಿ ಮೂಲಸೌಕರ್ಯಕ್ಕೆ 709171.07 ಲಕ್ಷ ರೂ. ಪೂರಕ ಚಟುವಟಿಕೆಗಳು-2248972.24 ಲಕ್ಷ ರೂ.ಗಳಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಡೇರಿ ವಲಯವನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಕುರಿ ಮತ್ತು ಆಡು ಸಾಕಾಣಿಕೆಯನ್ನು ಬಾಗಲಕೋಟೆ, ಬಳ್ಳಾರಿ, ಬೀದರ್, ಚಾಮರಾಜನಗರ, ಚಿಕ್ಕಮಗಳೂರು, ದಾವಣಗೆರೆ, ಗದಗ, ಕಲಬುರಗಿ, ಕೋಲಾರ, ಕೊಪ್ಪಳ , ಮಂಡ್ಯ, ಮೈಸೂರು, ರಾಯಚೂರು, ರಾಮನಗರ, ತುಮಕೂರು, ವಿಜಯಪುರ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.

ಕೋಳಿಸಾಕಾಣಿಕೆಯನ್ನು ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ, ಸಮಗ್ರ ಕೃಷಿ ಪದ್ಧತಿಯನ್ನು ಧಾರವಾಡ ಮತ್ತು ಬೆಂಗಳೂರು ನಗರ ಜಿಲ್ಲೆಗಳಲ್ಲಿ, ಬೃಹತ್ ಶೀತಲ ಕೇಂದ್ರಗಳನ್ನು ಬೆಳಗಾವಿ ಜಿಲ್ಲೆಯಲ್ಲಿ, ರೇಷ್ಮೆಯನ್ನು ಹಾಸನ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ, ತರಕಾರಿ ಬೆಳೆಗಳನ್ನು ಕೊಡಗು, ಬೆಂಗಳೂರು ಗ್ರಾಮಾಂತರ, ಹಾಸನ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ, ಉಪಮೇಲ್ಮೈ ಚರಂಡಿ ವ್ಯವಸ್ಥೆಯನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ ಹಾಗೂ ಮಾವು ಬೆಳೆಯನ್ನು ಹಾವೇರಿ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.

ರಾಜ್ಯದಲ್ಲಿ ರೇಷ್ಮೆ ವಲಯದ ಅಭಿವೃದ್ಧಿಗೂ ಸಾಕಷ್ಟು ಅವಕಾಶವಿದ್ದು, ಇದಕ್ಕೆ ಪೂರಕವಾದ ಕ್ರಮ ಕೈಗೊಳ್ಳಬಹುದಾಗಿದೆ ಎಂದು ಸೂರ್ಯಕುಮಾರ್ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳು ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಿಗೆ ಈ ಕುರಿತು ಪರಿಶೀಲಿಸುವಂತೆ ಸೂಚನೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net