ರಾಜ್ಯದ ಕರೊನಾ ವಾರ್​ರೂಂ ದೇಶಕ್ಕೇ ಮಾದರಿ: ದೇಶದ 100 ನಗರಗಳಲ್ಲಿ ಅಳವಡಿಸಿಕೊಳ್ಳಲು ರಾಜ್ಯ ಸರ್ಕಾರಗಳಿಗೆ ಕೇಂದ್ರ ಸೂಚನೆ

Corona War Room
Published on

ಬೆಂಗಳೂರು: ಕರೊನಾ ಸೋಂಕು ನಿಯಂತ್ರಣಕ್ಕಾಗಿ ದೇಶದಲ್ಲೇ ಮೊದಲ ಬಾರಿ ಬೆಂಗಳೂರಿನಲ್ಲಿ ಸ್ಥಾಪಿಸಲಾಗಿರುವ ‘ಕರೊನಾ ವಾರ್ ರೂಂ’ ಮಾದರಿಯನ್ನು 100 ನಗರಗಳಲ್ಲಿ ಅಳವಡಿಸಿಕೊಳ್ಳುವಂತೆ ಕೇಂದ್ರ ಸರ್ಕಾರ ಇತರ ರಾಜ್ಯಗಳಿಗೆ ಸೂಚನೆ ನೀಡಿದೆ.

ಕರೊನಾ ಸೋಂಕು ಹರಡುವಿಕೆ ತಡೆಯಲು ಬೆಂಗಳೂರಿನಲ್ಲಿ ಮಾ.23 ರಂದು ‘ಕರೊನಾ ವಾರ್ ರೂಂ’ ಸ್ಥಾಪಿಸಲಾಯಿತು. ಈ ವಾರ್ ರೂಂ ಮೂಲಕ ಕರೊನಾ ಸೋಂಕಿತರು, ಶಂಕಿತರು, ಕ್ವಾರಂಟೈನ್ ಪ್ರದೇಶಗಳನ್ನು ವಿವಿಧ ಬಣ್ಣಗಳಲ್ಲಿ ಗುರುತಿಸಿ ಚಿಕಿತ್ಸೆ ಹಾಗೂ ತಪಾಸಣೆ ಮಾಡುವ ಸಿಬ್ಬಂದಿಗೆ ನೆರವು ನೀಡಿತು. ಹೀಗಾಗಿ ದೇಶದಲ್ಲಿ ಕರೊನಾ ಸೋಂಕಿತರು ಪತ್ತೆಯಾದ ಆರಂಭದ ದಿನಗಳಲ್ಲಿ 3 ನೇ ಸ್ಥಾನದಲ್ಲಿದ್ದ ಕರ್ನಾಟಕ, ಈಗ ಸೋಂಕಿತರ ಪಟ್ಟಿಯಲ್ಲಿ 19ನೇ ಸ್ಥಾನಕ್ಕಿಳಿದಿದೆ. ಈ ಗಮನಾರ್ಹ ಸೇವೆ ಕಂಡು ದೇಶದ 100 ನಗರಗಳಲ್ಲಿ ‘ವಾರ್ ರೂಂ’ ಸ್ಥಾಪಿಸುವಂತೆ ಕೇಂದ್ರ ತಿಳಿಸಿದೆ.

ನೀಲಿನಕ್ಷೆ ಎರವಲು: ಬೆಂಗಳೂರಿನ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸ್ಥಾಪಿಸಿದ ‘ವಾರ್ ರೂಂ’ನ್ನು ಐಎಎಸ್ ಅಧಿಕಾರಿ ಹಾಗೂ ಬೆಂಗಳೂರು ಸ್ಮಾರ್ಟ್ ಸಿಟಿ ಲಿ. ವ್ಯವಸ್ಥಾಪಕ ನಿರ್ದೇಶಕಿ ಹೆಪ್ಸಿಬಾರಾಣಿ ಕೊರ್ಲಾಪಾಟಿ ನಿರ್ವಹಿಸುತ್ತಿದ್ದಾರೆ. ರಾಜ್ಯ ಸರ್ಕಾರದ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ (ಡಿಐಪಿಆರ್)ಯಿಂದ ರಾಜ್ಯ ವ್ಯಾಪ್ತಿಗೆ ಸ್ಥಾಪಿಸಲಾದ ಕರೊನಾ ವಾರ್ ರೂಂನ್ನು ಐಎಎಸ್ ಅಧಿಕಾರಿ ಮನೀಷ್ ಮೌದ್ಗಿಲ್ ಮೇಲ್ವಿಚಾರಣೆ ಮಾಡುತ್ತಿದ್ದಾರೆ.

ವಾಚ್ ಆಪ್ ಅಭಿವೃದ್ಧಿ: ರಾಜ್ಯ ಸರ್ಕಾರ ಕರೊನಾ ಸೋಂಕಿನ ಬಗ್ಗೆ ಸರ್ಕಾರದ ಅಧಿಕಾರಿಗಳು ಹಾಗೂ ಸಾರ್ವಜನಿಕರು ಮಾಹಿತಿ ತಿಳಿದುಕೊಳ್ಳಲು ಅನುಕೂಲವಾಗುವಂತೆ ಕರೊನಾ ವಾಚ್ ಅಪ್ಲಿಕೇಶನ್ ಅಭಿವೃದ್ಧಿಪಡಿಸಿದೆ. ಸರ್ಕಾರದ ಹಲವು ಸಹಾಯವಾಣಿಗಳು, ಆರೋಗ್ಯ ಮತ್ತು ಸ್ವಚ್ಛತಾ ಆಪ್​ಗಳು ಇದಕ್ಕೆ ಸಂಪರ್ಕ ಹೊಂದಿವೆ.

ಬೆಂಗಳೂರಿನ ಕರೊನಾ ವಾರ್ ರೂಂ ಅನ್ನು ಕೇವಲ 24 ಗಂಟೆಯಲ್ಲಿ ಸ್ಥಾಪಿಸಲಾಗಿದೆ. ಈಗ ಕೇಂದ್ರ ಸರ್ಕಾರ ದೇಶದ 100 ನಗರಗಳಿಗೆ ವಾರ್ ರೂಂ ನೀಲಿನಕ್ಷೆಯ ಬಗ್ಗೆ ಮಾಹಿತಿ ನೀಡುವಂತೆ ಬೆಂಗಳೂರು ಸ್ಮಾರ್ಟ್ ಸಿಟಿ ಲಿ.ಗೆ ತಿಳಿಸಿದೆ. ಇದಕ್ಕೆ ತಾಂತ್ರಿಕ ಸಿಬ್ಬಂದಿ ನೆರವು ಪಡೆಯಲಾಗುತ್ತಿದೆ. | ಹೆಪ್ಸಿಬಾರಾಣಿ ಕೊರ್ಲಾಪಾಟಿ ಎಂಡಿ, ಬೆಂಗಳೂರು ಸ್ಮಾಟ್ ಸಿಟಿ ಲಿ.

ಕಾರ್ಯಗಳೇನು?

ಕರೊನಾ ವಾರ್ ರೂಂನಲ್ಲಿ ದೊಡ್ಡ ಪರದೆ ರಚಿಸಿದ್ದು, ಈ ಮೂಲಕ ಕರೊನಾ ಸೋಂಕಿತರ ಮಾಹಿತಿ, ಅವರು ನೆಲೆಸಿರುವ ಸ್ಥಳ, ಹಾಟ್​ಸ್ಪಾಟ್ ಸ್ಥಳದ ನಿರ್ಧಾರ ಹಾಗೂ 3 ಕಿ.ಮೀ ಬಫರ್ ವಲಯ ಗುರುತಿಸಲಾಗುತ್ತದೆ. ಈ ಮೂಲಕ ವೈದ್ಯರು, ಅಧಿಕಾರಿಗಳು ಸೋಂಕು ತಡೆಗೆ ಮುಂದಿನ ಕ್ರಮಗಳನ್ನು ಕೈಗೊಳ್ಳಲು ಮಾಹಿತಿ ನೀಡುತ್ತದೆ. ಸೋಂಕಿತರನ್ನು ಕರೆದೊಯ್ಯಲು ಹತ್ತಿರದಲ್ಲಿರುವ ಆಂಬುಲೆನ್ಸ್, ಆಸ್ಪತ್ರೆ, ವೈದ್ಯರು ಹಾಗೂ ಹಾಸಿಗೆ ಸೌಲಭ್ಯಗಳ ಮಾಹಿತಿ ನೀಡುತ್ತದೆ. ಸೋಂಕಿತರ ಪ್ರದೇಶವನ್ನು ಕೆಂಪು, ಶಂಕಿತರಿರುವ ಪ್ರದೇಶವನ್ನು ಹಳದಿ ಬಣ್ಣ, ಆಸ್ಪತ್ರೆಗಳಿರುವ ಸ್ಥಳವನ್ನು ನೀಲಿ ಬಣ್ಣದಲ್ಲಿ ಗುರುತಿಸುವ ಮೂಲಕ ಮಾಹಿತಿ ನೀಡುತ್ತದೆ.

ರಾಜಧಾನಿ ಆಯ್ಕೆ

ಕರೊನಾ ಸೋಂಕು ನಿಯಂತ್ರಣ ಮಾಡುವಲ್ಲಿ ವಾರ್ ರೂಂ ಅಭಿವೃದ್ಧಿಪಡಿಸಿದ ರಾಜ್ಯ ಸರ್ಕಾರವನ್ನು ಸ್ವತಃ ಪ್ರಧಾನ ಮಂತ್ರಿ ನರೇಂದ್ರ ಮೋದಿ ಶ್ಲಾಘಿಸಿದ್ದರು. ಏ.13 ರಂದು ಕೇಂದ್ರ ಸರ್ಕಾರ ನಡೆಸಿದ ಕರೊನಾ ಸೋಂಕು ಕುರಿತ ರಾಷ್ಟ್ರಮಟ್ಟದ ಸಭೆಯಲ್ಲಿ ಕರೊನಾ ವಾರ್ ರೂಂ ಬಗ್ಗೆ ಮುಕ್ತವಾಗಿ ಶ್ಲಾಘಿಸಲಾಗಿದ್ದು, ಅದನ್ನು ಎಲ್ಲ ರಾಜ್ಯಗಳು ಅನ್ವಯಿಸಿಕೊಳ್ಳುವುದು ಮುಖ್ಯವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಲಾಗಿತ್ತು.

| ಸತೀಶ್ ಕೆ.ಬಳ್ಳಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net