

ಶಿವಮೊಗ್ಗ: ರಾಜ್ಯದಲ್ಲಿ ಆಡಳಿತ ಸಂಪೂರ್ಣವಾಗಿ ಕುಸಿದಿದೆ. ಆರ್ಥಿಕ ಪರಿಸ್ಥಿತಿಯೂ ಹದಗೆಟ್ಟಿದೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದರು.
ಹಾಸನದಲ್ಲಿ ಸರಣಿ ಸಾವು ನಡೆಯುತ್ತಿದೆ. ಯುವಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಉಸ್ತುವಾರಿ ಸಚಿವರು ಅಲ್ಲಿಗೆ ಭೇಟಿ ನೀಡಿ ಮೂರು ತಿಂಗಳಾಗಿದೆ. ಸಚಿವರು ನಿರ್ಲಕ್ಷೃವಹಿಸುತ್ತಿದ್ದು, ಸರ್ಕಾರ ಬೇಜವಾಬ್ದಾರಿತನ ಪ್ರದರ್ಶನ ಮಾಡುತ್ತಿದೆ ಎನ್ನುವುದಕ್ಕೆ ಮತ್ತೊಂದು ಪುರಾವೆ ಬೇಡ ಎಂದು ಲೇವಡಿ ಮಾಡಿದರು.
ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಗ್ಯಾರಂಟಿ ನಿಲ್ಲಿಸುತ್ತೇವೆ ಎನ್ನುತ್ತಿದ್ದಾರೆ. ರಸ್ತೆಗಳು, ಅಭಿವೃದ್ಧಿ ಮಾಡಬೇಕು ಎಂದರೆ ಹಣ ಇಲ್ಲ, ಗ್ಯಾರಂಟಿ ಯೋಜನೆ ನಿಲ್ಲಿಸಬೇಕು ಎನ್ನುತ್ತಿದ್ದಾರೆ. ಬಿಜೆಪಿ ಸಲಹೆ ನೀಡಿದರೆ ತೆಗೆದುಕೊಳ್ಳುತ್ತಿಲ್ಲ. ಸರ್ಕಾರಿ ನೌಕರರಿಗೂ ಸಂಬಳವಾಗುತ್ತಿಲ್ಲ ಎಂದರೆ ಸರ್ಕಾರದ ಆರ್ಥಿಕ ಪರಿಸ್ಥಿತಿ ತಿಳಿಯುತ್ತಿದೆ ಎಂದು ಕಿಡಿಕಾರಿದರು.
ಅನ್ನಭಾಗ್ಯ ಅಕ್ಕಿಗೆ ಸರ್ಕಾರವೇ ಕನ್ನ
ಅನ್ನಭಾಗ್ಯ ಅಕ್ಕಿಗೆ ಸರ್ಕಾರವೇ ಕನ್ನ ಹಾಕುತ್ತಿದೆ. ವಿಧಾನಸಭಾ ಚುನಾವಣೆ ವೇಳೆ 10 ಕೆಜಿ ಅಕ್ಕಿ ನೀಡುತ್ತೇವೆ ಎಂದು ಹೇಳಿದ್ದರು. ಚುನಾವಣೆ ಮುಗಿದ ಮೇಲೆ ಕೇಂದ್ರ ಸರ್ಕಾರ ನೀಡುತ್ತಿದ್ದ 5 ಕೆಜಿ ಅಕ್ಕಿಗೆ ಸೇರಿಸಿ 10 ಕೆಜಿ ಕೊಡುತ್ತಿದ್ದೇವೆ ಎಂದು ಬಿಂಬಿಸಿದ್ದರು. ಈಗ ಅಕ್ಕಿ ಕೊಡಲ್ಲ. ಬದಲಾಗಿ ಇಂದಿರಾ ಕಿಟ್ ಅಲ್ಲಿ ಕೊಡುತ್ತೇವೆಂದು ಹೇಳುತ್ತಿದ್ದಾರೆ. 700 ಕೋಟಿ ರೂ. ಉಳಿತಾಯ ಆಗಲಿದ್ದು ದುಡ್ಡು ಉಳಿಸಲು ಇಂದಿರಾ ಕಿಟ್ ಕೊಡುತ್ತೇವೆ ಎಂದು ಹೇಳುತ್ತಿದ್ದಾರೆ ಎಂದು ಎಂದು ಕಿಡಿಕಾರಿದರು.