

ಲಕ್ಷ್ಮೇಶ್ವರ: ಪಂಚ ಗ್ಯಾರಂಟಿ ಯೋಜನೆಯಿಂದ ರಾಜ್ಯದ ಖಜಾನೆ ಮತ್ತಷ್ಟು ಸಮೃದ್ಧವಾಗಿದೆ. ಅಂತೆಯೇ ರಾಜ್ಯದ ಪ್ರತಿ ಕ್ಷೇತ್ರದ ಅಭಿವೃದ್ಧಿಗೆ ಮುಖ್ಯಮಂತ್ರಿಗಳು 50 ಕೋಟಿ ರೂಪಾಯಿ ಅನುದಾನ ನೀಡಿರುವುದೇ ಸಾಕ್ಷಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಪಟ್ಟಣದಲ್ಲಿ ಶನಿವಾರ ಇಂದಿರಾ ಕ್ಯಾಂಟೀನ್ ಉದ್ಘಾಟಿಸಿ ಅವರು ಮಾತನಾಡಿದರು. ಪಂಚ ಗ್ಯಾರಂಟಿ ಯೋಜನೆಗಳಿಂದ ಜನರ ಜೀವನಮಟ್ಟ ಎತ್ತರಕ್ಕೇರಿದೆ. ಪ್ರತಿ ತಿಂಗಳು ಪ್ರತಿ ಕುಟುಂಬಕ್ಕೆ 5 ಸಾವಿರ ರೂ.ನಷ್ಟು ಸಹಾಯವಾಗುತ್ತಿದೆ. ಇದು ಬಡತನ-ಹಸಿವುಮುಕ್ತ ಕರ್ನಾಟಕಕ್ಕೆ ನಾಂದಿಯಾಗಿದೆ. ರಾಜ್ಯದಲ್ಲಿನ ಕಟ್ಟಕಡೆಯ ವ್ಯಕ್ತಿಯೂ ಸೇರಿ ಯಾರೊಬ್ಬರೂ ಹಸಿವಿನಿಂದ ಬಳಲಬಾರದು ಎಂಬ ಉದ್ದೇಶದಿಂದ ಕಾಂಗ್ರೆಸ್ ಸರ್ಕಾರದ ಇಂದಿರಾ ಕ್ಯಾಂಟೀನ್ ಯೋಜನೆ ಅತ್ಯಂತ ಮಹತ್ವದ್ದಾಗಿದೆ. ಗದಗ ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಯ ಸದುಪಯೋಗವನ್ನು ಶೇ. 99ರಷ್ಟು ಫಲಾನುಭವಿಗಳು ಪಡೆದಿದ್ದಾರೆ. ಈ ಪಂಚ ಗ್ಯಾರಂಟಿ ಯೋಜನೆಗಳು ರಾಷ್ಟ್ರ ಮಟ್ಟದಲ್ಲಿ ಪ್ರಶಂಸೆಗೊಳಗಾಗಿವೆ ಎಂದರು.
ಇಂದಿರಾ ಕ್ಯಾಂಟೀನ್‌ನಲ್ಲಿ ಮೆನುವಿನಂತೆ ಉಪಾಹಾರ,ಊಟ ಸಿಗಬೇಕು. ಸ್ವಚ್ಛತೆ, ಶುಚಿತ್ವ ಕಡ್ಡಾಯವಾಗಿ ಪಾಲನೆಯಾಗಬೇಕು. ಈ ನಿಟ್ಟಿನಲ್ಲಿ ಸ್ಥಳೀಯ ಪುರಸಭೆ ಸದಸ್ಯರು ನಿಗಾವಹಿಸಬೇಕು ಎಂದರು.
ಗದಗ-ಲಕ್ಷ್ಮೇಶ್ವರ ರಸ್ತೆ ನಿರ್ಮಾಣ, ತುಂಗಭದ್ರಾ ನದಿಯಿಂದ ಕುಡಿಯುವ ನೀರು ಪೂರೈಕೆ ಯೋಜನೆ ಮೇಲ್ದರ್ಜೆಗೇರಿಸುವುದು ಸೇರಿ ಈ ಭಾಗದ ಜನರ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.
ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ಇಂದಿರಾ ಕ್ಯಾಂಟೀನ ಯೋಜನೆ ಉದ್ದೇಶಗಳನ್ವಯ ನಿರಂತರ ಸೇವೆ, ಸಮರ್ಪಕ ನಿರ್ವಹಣೆಯಾಗಬೇಕು. ಶಿರಹಟ್ಟಿ ಪಟ್ಟಣದಲ್ಲಿನ ಇಂದಿರಾ ಕ್ಯಾಂಟೀನ್ ಹೆಸರಿಗೆ ಮಾತ್ರ ಎನ್ನುವಂತಾಗಿದೆ. ಈ ಬಗ್ಗೆ ಅನೇಕ ಬಾರಿ ಹೇಳಿದರೂ ಪ್ರಯೋಜನವಾಗಿಲ್ಲ. ಲಕ್ಷ್ಮೇಶ್ವರದಲ್ಲಿ ಕ್ಯಾಂಟೀನ್‌ನಿಂದಲೇ ಪುರಸಭೆ ಪೌರ ಕಾರ್ಮಿಕರಿಗೆ ಉಪಾಹಾರದ ವ್ಯವಸ್ಥೆ ಕಲ್ಪಿಸಬೇಕು. ಪಟ್ಟಣದಲ್ಲಿ ನಗರೋತ್ಥಾನ ಯೋಜನೆಯ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ. ಬೆಳೆಯುತ್ತಿರುವ ಲಕ್ಷ್ಮೇಶ್ವರ, ಮುಂಡರಗಿ, ಶಿರಹಟ್ಟಿ ಪಟ್ಟಣಗಳ ಅಭಿವೃದ್ಧಿಗೆ ವಿಶೇಷ ಅನುದಾನ ಕಲ್ಪಿಸಬೇಕು ಎಂದು ಸಚಿವರಿಗೆ ಮನವಿ ಮಾಡಿದರು.
ಪುರಸಭೆ ಅಧ್ಯಕ್ಷೆ ಯಲ್ಲಮ್ಮ ದುರಗಣ್ಣವರ, ಮಾಜಿ ಶಾಸಕರಾದ ಜಿ.ಎಸ್. ಗಡ್ಡದೇವರಮಠ, ರಾಮಣ್ಣ ಲಮಾಣಿ, ಕೆಪಿಸಿಸಿ ಸದಸ್ಯರಾದ ಆನಂದ ಗಡ್ಡದೇವಮಠ, ಸುಜಾತಾ ದೊಡ್ಡಮನಿ, ಗುರುನಾಥ ದಾನಪ್ಪನವರ, ಚನ್ನಪ್ಪ ಜಗಲಿ, ನಾಗರಾಜ ಮಡಿವಾಳರ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ, ಎಸ್‌ಪಿ ರೋಹನ್ ಜಗದೀಶ, ಪುರಸಭೆ ಉಪಾಧ್ಯಕ್ಷ ಫಿರ್ದೋಸ್ ಆಡೂರ, ಸ್ಥಾಯಿ ಸಮಿತಿ ಅಧ್ಯಕ್ಷ ವಿಜಯ ಕರಡಿ, ಜಿಪಂ ಮಾಜಿ ಅಧ್ಯಕ್ಷ ಎಸ್.ಪಿ. ಬಳಿಗಾರ ಇತರರು ಇದ್ದರು.
ಜಿಲ್ಲಾ ಯೋಜನಾ ನಿರ್ದೇಶಕ ಬಸನಗೌಡ ಕೋಟೂರ ಸ್ವಾಗತಿಸಿದರು. ಮುಖ್ಯಾಧಿಕಾರಿ ಮಾಂತೇಶ ಬೀಳಗಿ, ಇಂಜಿನಿಯರ್ ವಿ.ಪಿ ಕಾಟೇವಾಲೆ, ಮಂಜುನಾಥ ಮುದಗಲ್, ಈಶ್ವರ ಮೆಡ್ಲೇರಿ ನಿರೂಪಿಸಿದರು. ಒಳಚರಂಡಿ ಸ್ವಚ್ಛತೆಗಾಗಿ 50 ಲಕ್ಷ ರೂ. ವೆಚ್ಚದಲ್ಲಿ ಖರೀದಿಸಿದ ಸಕ್ಕಿಂಗ್ ಮಷಿನ್ ವಾಹನಕ್ಕೆ ಸಚಿವರು ಚಾಲನೆ ನೀಡಿದರು.