ಮೊಬೈಲ್ ಫೋನ್ ಕಳ್ಳರ ಹೆಡೆಮುರಿ ಕಟ್ಟಲು ರಾಜ್ಯ ಪೊಲೀಸ್ ಇಲಾಖೆ ಮಾಸ್ಟರ್​ ಪ್ಲ್ಯಾನ್:​ ಕಳವಾದ ಮೊಬೈಲ್​​ಗೆ ಖಾಕಿ ಲಾಕ್!

Mobile
Published on

| ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು

ಮೊಬೈಲ್ ಫೋನ್ ಕಳ್ಳರ ಹೆಡೆಮುರಿ ಕಟ್ಟಲು ರಾಜ್ಯ ಪೊಲೀಸ್ ಇಲಾಖೆ ಮಾಸ್ಟರ್​ಪ್ಲ್ಯಾನ್​ ಮಾಡಿದೆ. ಇನ್ನುಮುಂದೆ ಕಳುವಾದ ಮೊಬೈಲ್ ಫೋನನ್ನು ಕೂತಲ್ಲಿಯೇ ಪೊಲೀಸ್ ಅಥವಾ ವಾರಸುದಾರ ಬಳಕೆ ಆಗದಂತೆ ಲಾಕ್ ಮಾಡಬಹುದು. ಈಗಾಗಲೆ ಬೆಂಗಳೂರು ನಗರದಲ್ಲಿ ಪ್ರಯೋಗಿಕವಾಗಿ ಜಾರಿಗೆ ತಂದಿದ್ದು, ರಾಜ್ಯವ್ಯಾಪಿ ವಿಸ್ತರಿಸುವಂತೆ ಡಿಜಿ-ಐಜಿಪಿ ಪ್ರವೀಣ್ ಸೂದ್ ಆದೇಶಿಸಿದ್ದಾರೆ.

ಬೆಂಗಳೂರು ನಗರದಲ್ಲಿ ನಿತ್ಯ 25 ರಿಂದ 30 ಮೊಬೈಲ್ ಕಳವಾಗುತ್ತಿವೆ. ಇದಕ್ಕೆ ತಡೆ ಹಾಕಲು ಮುಂದಾಗಿರುವ ಪೊಲೀಸ್ ಇಲಾಖೆ ಇದೀಗ ಕೇಂದ್ರ ಗೃಹ ಸಚಿವಾಲಯ ಸೆಂಟ್ರಲ್ ಇಕ್ವಿಪ್ಮೆಂಟ್ ಐಡೆಂಟಿಟಿ ರಿಜಿಸ್ಟರ್ ಆಪ್(ಸಿಇಐಆರ್) ಪೋರ್ಟಲ್ ತೆರೆದಿದೆ. ಎಲ್ಲ ಮೊಬೈಲ್ ಕಂಪನಿ ಮತ್ತು ಟೆಲಿಕಾಂ ಕಂಪನಿಗಳೊಂದಿಗೆ ಮೊಬೈಲ್ ಬ್ಲಾಕಿಂಗ್ ಕುರಿತು ಒಪ್ಪಂದ ಮಾಡಿಕೊಳ್ಳಲಾಗಿದೆ.

ಕಳ್ಳತನ, ಕಳೆದು ಹೋದ, ದರೋಡೆ, ಸುಲಿಗೆಗೆ ಒಳಗಾದ ಮೊಬೈಲ್​ಗಳನ್ನು ಲಾಕ್ ಮಾಡುವ ತಂತ್ರಜ್ಞಾನ ಪೊಲೀಸ್ ಇಲಾಖೆಗೆ ಒದಗಿಸಲಾಗಿದೆ. ಈಗಾಗಲೆ ದೆಹಲಿ ಮತ್ತು ಮುಂಬೈನಲ್ಲಿ ಜಾರಿಗೆ ತಂದಿದ್ದು, ಬೆಂಗಳೂರು ನಗರದಲ್ಲಿ ಪ್ರಯೋಗಿಕವಾಗಿ ಜಾರಿಗೆ ತಂದು ಇದೀಗ ರಾಜ್ಯ ವ್ಯಾಪಿ ವಿಸ್ತರಿಸಲಾಗಿದೆ. ಅಲ್ಲದೆ, ಮೊಬೈಲ್ ಬ್ಲಾಕ್ ಮಾಡುವ ಬಗ್ಗೆ ಮಾರ್ಗಸೂಚಿ ರಚಿಸಿದ್ದಾರೆ. ಸೈಬರ್, ಆರ್ಥಿಕ ಮತ್ತು ನಾಕೋಟಿಕ್ (ಸಿಇಎನ್) ಠಾಣೆ ಇನ್​ಸ್ಪೆಕ್ಟರ್​ನ್ನು ನೋಡಲ್ ಅಧಿಕಾರಿ ನೇಮಿಸಲಾಗಿದೆ. ಮೊಬೈಲ್ ಕಳ್ಳವಾದ ಬಗ್ಗೆ ಪೊಲೀಸ್ ಇಲಾಖೆಯ ಇ-ಲಾಸ್ಟ್​ನಲ್ಲಿ ದೂರು ದಾಖಲಿಸಬೇಕು. ಇ-ಲಾಸ್ಟ್ ನಲ್ಲಿ ದೂರು ದಾಖಲಾಗುತ್ತಿದ್ದಂತೆ, ನೋಡಲ್ ಅಧಿಕಾರಿ ಸಿಇಐಆರ್​ಗೆ ಮಾಹಿತಿ ರವಾನೆ ಮಾಡಿ ಮೊಬೈಲ್ ಆಕ್ಟಿವೇಷನ್ ಸಂಪೂರ್ಣ ಬ್ಲಾಕ್ ಮಾಡಿಸುತ್ತಾರೆ.

ನೊಂದಾಯಿತ ಐಎಂಇ ಸಂಖ್ಯೆಯ ಮೊಬೈಲನ್ನ ಸಿಇಐಆರ್ ಆಪ್ ಸಂಪೂರ್ಣ ಬ್ಲಾಕ್ ಮಾಡುತ್ತೆ. ಕದ್ದ ಮೊಬೈಲ್ ಬಳಕೆ ಮಾಡಲು ಸಾಧ್ಯವೇ ಆಗುವುದಿಲ್ಲ. ಕದ್ದ ಮೊಬೈಲ್ ಖರೀದಿ ಮಾಡುವವರೇ ಇಲ್ಲದೆ ಇದ್ದಾಗ ಕಳ್ಳತನ ಮಾಡುವವರ ಸಂಖ್ಯೆಯೂ ಇಳಿಮುಖವಾಗಲಿದೆ. ಪರಿಣಾಮ ಮೊಬೈಲ್ ಕಳ್ಳತನಕ್ಕೆ ಸ್ಥಗಿತವಾಗುವ ಸಾಧ್ಯತೆ ಇರುವುದಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮೊಬೈಲ್ ಪತ್ತೆ ಆದರೆ: ಮೊಬೈಲ್ ಪತ್ತೆಯಾದರೇ ಮತ್ತೆ ಸಿಇಐಆರ್​ನಲ್ಲಿ ಮಾಹಿತಿ ಅಪ್​ಡೇಟ್ ಆಗಲಿದೆ. ಆಗ ನೋಡಲ್ ಅಧಿಕಾರಿಗಳು, ಸಂಬಂಧಪಟ್ಟ ಪೊಲೀಸ್ ಠಾಣೆಗೆ ಮಾಹಿತಿ ರವಾನೆ ಮಾಡಿ ವಾರಸುದಾರರಿಗೆ ತಲುಪಿಸುವ ಕ್ರಮ ತೆಗೆದುಕೊಳ್ಳಲಿದ್ದಾರೆ. ಅಲ್ಲದೇ, ವಾರಸುದಾರರು ಲಾಕ್ ಆಗಿರುವ ಮೊಬೈಲ್​ನ್ನು ಮತ್ತೆ ಬಳಕೆಗೆ ಲಾಕ್ ಓಪನ್ ಮಾಡುವಂತೆ ಮನವಿ ಪತ್ರ ನೀಡಬೇಕು. ನೋಡಲ್ ಅಧಿಕಾರಿ, ಸಿಇಐಆರ್ ಪೋರ್ಟ್​ನಲ್ಲಿ ಮನವಿ ಸಲ್ಲಿಸಿ ಬ್ಲಾಕ್ ತೆರವು ಮಾಡಿ ಬಳಕೆಗೆ ಯೋಗ್ಯವಾಗುವಂತೆ ಅನುಕೂಲ ಮಾಡಿಕೊಡಲಿದ್ದಾರೆ.

ಖಾಕಿ ಕೈಗೆ ಜಾತಕ

ಕದ್ದ ಮೊಬೈಲನ್ನು ಕಡಿಮೆ ಬೆಲೆಗೆ ಸಿಗುತ್ತದೆ ಎಂದು ಖರೀದಿ ಮಾಡಿ ಅಥವಾ ಕದ್ದ ಮೊಬೈಲ್​ಗೆ ಸಿಮ್ ಕಾರ್ಡ್ ಹಾಕಿಕೊಂಡು ಬಳಕೆ ಮಾಡಿದರೆ ಈ ಮಾಹಿತಿಯೂ ಪೊಲೀಸರಿಗೆ ಸಿಗಲಿದೆ. ಮೊಬೈಲ್ ವಾರಸುದಾರ, ಐಎಂಇ ನಂಬರ್ ಸಮೇತ ದೂರು ಕೊಟ್ಟರೆ ಅದನ್ನು ಲಾಕ್ ಮಾಡುವ ಜತೆಗೆ ಫೋನ್​ಗೆ ಯಾವ ಯಾವ ಸಿಮ್ ಅಳವಡಿಕೆ ಮಾಡಲಾಗಿದೆ. ಅದರ ನಂಬರ್ ಮತ್ತು ಯಾವ ಸ್ಥಳದಲ್ಲಿ ಬಳಕೆ ಆಗುತ್ತಿದೆ ಎಂಬ ಸಿಗ್ನಲ್ ಸಮೇತ ಜಾತಕ ಪೊಲೀಸರಿಗೆ ಸಿಗಲಿದೆ. ಕಳವಾದ ಮೊಬೈಲ್​ನ್ನು ಪತ್ತೆ ಮಾಡಲು ಸುಲಭವಾಗಲಿದೆ.

ವಾರಸುದಾರರಿಗೂ ಅವಕಾಶ

ಸಾರ್ವಜನಿಕರು ಸಹ ಡಿಡಿಡಿ.ಛಿಜ್ಟಿ.ಜಟಡ.ಜ್ಞಿ ವೆಬ್​ಸೈಟ್​ಗೆ ಹೋಗಿ ದೂರು ಕೊಟ್ಟು ಮೊಬೈಲ್ ಬ್ಲಾಕ್ ಮಾಡಿಸಬಹುದು. ಕಳವಾದ ಮೊಬೈಲ್​ನಲ್ಲಿದ್ದ ಸಿಮ್ ಕಾರ್ಡ್ ಹೊಸದಾಗಿ ಪಡೆಯಬೇಕು. ಕಳವಾದ ಮೊಬೈಲ್ ಮಾಡೆಲ್, ಐಎಂಇಐ ನಂಬರ್, ಸಿಮ್ ನಂಬರ್ ನೋಂದಣಿ ಮಾಡಬೇಕು. ಅಲ್ಲದೆ, ಮೊಬೈಲ್​ಗೆ ಬರುವ ಒಟಿಪಿ ನಮೂದು ಮಾಡಿದರೇ ಬ್ಲಾಕ್ ಆಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net