

ಶಿವಮೊಗ್ಗ: ಚಿನ್ನ ಕಳ್ಳ ಸಾಗಣೆ ವಿಚಾರದಲ್ಲಿ ರಾಜ್ಯ ಗೃಹ ಇಲಾಖೆ ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲುವಂತಾಗಿದೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ದೂರಿದರು.
ಚಿನ್ನ ಕಳ್ಳ ಸಾಗಣೆ ರಾಜ್ಯದಲ್ಲಿ ಹೊಸದೇನಲ್ಲ. ನಿರಂತರವಾಗಿ ಮುಂದುವರಿದುಕೊಂಡು ಬಂದಿದೆ. ಆದರೆ ಇದೀಗ ಚಿನ್ನ ಕಳ್ಳ ಸಾಗಣೆ ಮಾಡಿರುವ ನಟಿ ರನ್ಯಾ ರಾವ್ ಜತೆ ಕಾಂಗ್ರೆಸ್‌ನ ಕೆಲ ಸಚಿವರು ಭಾಗಿಯಾಗಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿ ಹಲವರು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರ ಮನೆಗೆ ಹೋಗಿ ಬರುತ್ತಿದ್ದಾರೆ. ಅದನ್ನು ತಪ್ಪು ಎಂದು ನಾನು ಹೇಳುವುದಿಲ್ಲ. ಆದರೆ ರನ್ಯಾ ರಾವ್‌ಗೆ 40 ಲಕ್ಷ ರೂ. ಗೃಹ ಸಚಿವರಿಗೆ ಸೇರಿದ ಟ್ರಸ್ಟ್‌ನಿಂದ ಹೋಗಿದೆ. ಅದನ್ನು ಸ್ವತಃ ಡಿಸಿಎಂ ಡಿ.ಕೆ.ಶಿವಕುಮಾರ್ ಅವರೇ ಬಹಿರಂಗ ಪಡಿಸಿದ್ದು, ಈ ಬಗ್ಗೆ ಪ್ರತಿಕ್ರಿಯಿಸುವ ಬದಲು ಡಿಸಿಎಂಗೇ ಕೇಳುವಂತೆ ಗೃಹ ಸಚಿವ ಜಿ.ಪರಮೇಶ್ವರ್ ಹೇಳಿರುವುದು ಗೊಂದಲ ಸೃಷ್ಟಿಸುತ್ತಿದೆ. ಇದು ಡಿಸಿಎಂ ಅಥವಾ ಗೃಹ ಸಚಿವರ ವೈಯಕ್ತಿಕ ವಿಚಾರದ ಪ್ರಶ್ನೆಯಲ್ಲ. ಗೃಹ ಸಚಿವರ ಮೇಲೆ ಬಂದಿರುವ ಆಪಾದನೆಗೆ ಅವರೇ ಉತ್ತರ ಕೊಡಬೇಕಾಗುತ್ತದೆ ಎಂದರು.
ಪರಮೇಶ್ವರ್ ಅವರ ಶಿಕ್ಷಣ ಸಂಸ್ಥೆ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ರನ್ಯಾ ರಾವ್‌ಗೆ ಬೇರೆ ಬೇರೆ ದೇಶಗಳ ಸಂಪರ್ಕವಿದ್ದು, 40 ಲಕ್ಷ ರೂ. ಅನ್ನು ಪರಮೇಶ್ವರ್ ಅವರು ಕೊಟ್ಟಿದ್ದಾರೋ ಇಲ್ಲವೋ ಎಂಬುದನ್ನು ಅವರೇ ಬಹಿರಂಗಪಡಿಸಬೇಕು. ಇಲ್ಲವಾದರೆ ಗೃಹ ಇಲಾಖೆ ಮೇಲೆಯೇ ಅನುಮಾನ ಮೂಡುತ್ತದೆ ಎಂದು ಹೇಳಿದರು.
ಸಚಿವ ಪರಮೇಶ್ವರ ವಿರುದ್ಧ ನಾನು ಯಾವುದೇ ಆಪಾದನೆ ಮಾಡುತ್ತಿಲ್ಲ. ಪರಮೇಶ್ವರ್ ಅವರು ಸಜ್ಜನ ರಾಜಕಾರಣಿ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ 40 ಲಕ್ಷ ರೂ. ಕೊಟ್ಟಿದ್ದು ಗೃಹ ಮಂತ್ರಿ ಸ್ಥಾನವನ್ನು ಅತಂತ್ರಸ್ಥಿತಿಯಲ್ಲಿ ಇಡಬಾರದು. ಹಾಗಾಗಿ ಡಿಸಿಎಂ ಮತ್ತು ಗೃಹ ಸಚಿವರು ಜಂಟಿ ಹೇಳಿಕೆ ನೀಡುವ ಮೂಲಕ ಗೊಂದಲಕ್ಕೆ ತೆರೆ ಎಳೆಯಬೇಕು ಎಂದು ಮನವಿ ಮಾಡಿದರು.