ರಾಜ್ಯ ಸರ್ಕಾರದ ಹೇಳಿಕೆ ಖೇದಕರ

New Jagadish Shettar New
Published on

ಸವದತ್ತಿ: ತಾಯಿ ರೇಣುಕಾ ಯಲ್ಲಮ್ಮದೇವಿ ದೇವಸ್ಥಾನದ ಅಭಿವೃದ್ಧಿಗೆ ಕೇಂದ್ರ ಸರ್ಕಾರ 118 ಕೋಟಿ ರೂ. ಅನುದಾನ ನೀಡುತ್ತಿದೆ. ಹೀಗಿರುವಾಗ ರಾಜ್ಯ ಸರ್ಕಾರ ಅನುದಾನ ನೀಡಿದೆ ಎಂದು ಹೇಳುತ್ತಿರುವುದು ಖೇದಕರ ಸಂಗತಿ ಎಂದು ಜಗದೀಶ ಶೆಟ್ಟರ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, 215 ಕೋಟಿ ರೂ. ಅನುದಾನದಲ್ಲಿ ಕೇಂದ್ರ ಸರ್ಕಾರ 118 ಕೋಟಿ ರೂ. ನೀಡಿದೆ. ಭಕ್ತರಿಂದ ಬಂದ ಕಾಣಿಕೆ ಹಣ 97 ಕೋಟಿ ರೂ.ಗಳನ್ನು ನಾವು ಕೊಟ್ಟಿದ್ದೇವೆ ಎಂದು ರಾಜ್ಯ ಸರ್ಕಾರ ಹೇಳುತ್ತಿದೆ ಎಂದು ದೂರಿದರು. ಭಕ್ತರು ಹುಂಡಿಗೆ ಹಾಕಿದ ಹಣವನ್ನು ನಾವು ಕೊಟ್ಟಿದ್ದೇವೆ ಎನ್ನುವುದು ಸರಿಯಲ್ಲ. ಆತ್ಮಾವಲೋಕನ ಮಾಡಿಕೊಂಡು ಜನರಿಗೆ ಸರಿಯಾದ ಮಾಹಿತಿ ನೀಡಬೇಕು. ತಪ್ಪು ಸಂದೇಶ ನೀಡಬಾರದು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಚುನಾವಣೆ ಪೂರ್ವದಲ್ಲಿ ಕೊಟ್ಟ ಮಾತಿನಂತೆ ಅಭಿವೃದ್ಧಿ ಕೈಗೊಳ್ಳಲಾಗಿದೆ. ಒಂದೇ ಭಾರತ ರೈಲು ಆರಂಭ, ಜಿಲ್ಲೆಯ ಮೂರು ಪ್ರಮುಖ ರಾಜ್ಯ ರಸ್ತೆಗಳನ್ನು ರಾಷ್ಟ್ರೀಯ ಹೆದ್ದಾರಿಗಳನ್ನಾಗಿ ಮಾಡಲು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಮಾಡಲಾಗಿದೆ. ಯಲ್ಲಮ್ಮ ದೇವಸ್ಥಾನಕ್ಕೆ ಭಕ್ತರ ಅನುಕೂಲತೆಗಾಗಿ ರೈಲ್ವೆ ಮಾರ್ಗ ನಿರ್ಮಾಣಕ್ಕಾಗಿ ನೀಲ ನಕ್ಷೆಯನ್ನು ತಯಾರಿಸಿ ರೈಲ್ವೆ ಸಚಿವರಿಗೆ ನೀಡಲಾಗಿದೆ. ಕೆಲವೇ ದಿನಗಳಲ್ಲಿ ಸಮೀಕ್ಷೆ ನಡೆಯಲಿದೆ ಎಂದರು. ಬಿಜೆಪಿ ತಾಲೂಕಾಧ್ಯಕ್ಷ ವಿರೂಪಾಕ್ಷ ಮಾಮನಿ, ಸೌರಭ ಚೋಪ್ರಾ, ಈಶ್ವರ ಮೇಲಗಿರಿ, ಡಾ.ನಯನಾ ಬಸ್ಮೆ, ನಾಗವೇಣಿ ಕುಲಕರ್ಣಿ, ಮಡಿವಾಳಪ್ಪ ಬಿದರಗಡ್ಡಿ, ಬಾಳಪ್ಪ ಮಡಿವಾಳರ, ಅರ್ಜುನ ಅಮೋಜಿ. ಮಲ್ಲಿಕಾರ್ಜುನ ಬೀಳಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net