

ಅಕ್ಕಿಆಲೂರ: ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಜನೌಷಧ ಕೇಂದ್ರ ಬಡವರ ಸಂಜೀವಿನಿಯಾಗಿದೆ. ಇಂತಹ ಕೇಂದ್ರ ಮುಚ್ಚಲು ಮುಂದಾಗುತ್ತಿರುವ ರಾಜ್ಯ ಸರ್ಕಾರದ ಕ್ರಮ ಖಂಡನೀಯ ಎಂದು ಆಯುಷ್ ಫೆಡರೇಷನ್ ಆಫ್ ಇಂಡಿಯಾ ಜಿಲ್ಲಾಧ್ಯಕ್ಷ ಡಾ.ಸುನೀಲ ಹಿರೇಮಠ ತಿಳಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಔಷಧ ಕೇಂದ್ರಗಳಿದ್ದು, ಶೇ.70ರಷ್ಟು ರಿಯಾಯಿತಿ ದರದಲ್ಲಿ ಔಷಧ ದೊರೆಯುತ್ತದೆ. ರಾಜ್ಯದಲ್ಲಿ 1200ಕ್ಕೂ ಅಧಿಕ ಜನೌಷಧ ಕೇಂದ್ರಗಳಿದ್ದು, ಬಡವರು ಮತ್ತು ಜನಸಾಮಾನ್ಯರು ಪ್ರಯೋಜನ ಪಡೆಯುತ್ತಿದ್ದಾರೆ. ಜತೆಗೆ ಸಾವಿರಾರು ಯುವಕರು ಉದ್ಯೋಗ ಕಂಡುಕೊಂಡಿದ್ದಾರೆ. ಪ್ರಧಾನ ಮಂತ್ರಿ ಜನೌಷಧ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವಿದ್ದು, ಜನ ಬೆಂಬಲ ವ್ಯಕ್ತವಾಗುತ್ತಿರುವುದರಿಂದ ಕೇಂದ್ರ ಬಂದ್ ಮಾಡಲು ರಾಜ್ಯ ಸರ್ಕಾರ ಮುಂದಾಗುತ್ತಿದೆ. ಬ್ರ್ಯಾಂಡ್ ಇಂಜೆಕ್ಷನ್, ಮಾತ್ರೆಗಳು ಹಳ್ಳಿಹಳ್ಳಿಗಳಲ್ಲಿ ಕಡಿಮೆ ಬೆಲೆಯಲ್ಲಿ ಸಿಗಬೇಕು ಎಂಬ ಉದ್ದೇಶದಿಂದ 2015ರಲ್ಲಿ ಭಾರತೀಯ ಜನ ಔಷಧ ಪರಿಯೋಜನಾ ಎಂದು ಪರಿಷ್ಕರಿಸಿ ಕೇಂದ್ರ ಆರಂಭಿಸಲಾಗಿತ್ತು. ಇದುವರೆಗೆ ಕೋಟ್ಯಂತರ ಜನ ಉಪಯೋಗ ತೆಗೆದುಕೊಂಡಿದ್ದಾರೆ. ಕೇಂದ್ರ ಸರ್ಕಾರ ಆರ್ಥಿಕ ಉತ್ತೇಜನ ನೀಡಿ ಆರಂಭಿಸಿರುವ ಔಷಧ ಕೇಂದ್ರ ಬಂದ್ ಮಾಡಿದರೆ ಬಡವರಿಗೆ ರಾಜ್ಯ ಸರ್ಕಾರ ಮಾಡುವ ಅನ್ಯಾಯ ಎಂದು ಡಾ. ಸುನೀಲ ಹಿರೇಮಠ ತಿಳಿಸಿದ್ದಾರೆ.