

ಗೋಣಿಕೊಪ್ಪ: ಭ್ರಷ್ಟಾಚಾರವನ್ನು ಹೆಗಲಿನಲ್ಲಿ ಹೊತ್ತುಕೊಂಡು ರಾಜ್ಯ ಸರ್ಕಾರ ತೆವಳುತ್ತ ಸಾಗುತ್ತಿದ್ದು, ಈ ಭಾರವನ್ನು ಹೊತ್ತುಕೊಳ್ಳಲಾಗದೆ ಕೆಲವೇ ದಿನಗಳಲ್ಲಿ ಉರುಳಿ ಬೀಳುವ ಸಂಭವವಿದೆ ಎಂದು ಮಾಜಿ ಶಾಸಕ ಕೆ.ಜಿ.ಬೋಪಯ್ಯ ಭವಿಷ್ಯ ನುಡಿದರು.
ಇಲ್ಲಿನ ಹರಿಶ್ಚಂದ್ರಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಂಗಣದಲ್ಲಿ ಶನಿವಾರ ಭಾರತೀಯ ಜನತಾ ಪಾರ್ಟಿಯ ವಿರಾಜಪೇಟೆ ಮಂಡಲ ವತಿಯಿಂದ ಆಯೋಜಿಸಿದ್ದ ‘ಸದಸ್ಯತ್ವ ಅಭಿಯಾನ’ ಕಾರ್ಯಾಗಾರದಲ್ಲಿ ಮಾತನಾಡಿದರು.
ಉಚಿತ ಯೋಜನೆಗಳ ಮೂಲಕ ಸರ್ಕಾರ ಶೂನ್ಯ ಪ್ರಗತಿಯನ್ನು ಕಾಣುತ್ತಿದ್ದು, ಜನರ ಸಮಸ್ಯೆಗಳಿಗೆ ಸ್ಪಂದಿಸುವ ಶಕ್ತಿ ಕಳೆದುಕೊಂಡಿದೆ. ಬಿಜೆಪಿ ದೇಶ ಕಟ್ಟಲು ಹೊರಟಿದ್ದು, ದೇಶವನ್ನು ಆರ್ಥಿಕ ಪ್ರಗತಿಯತ್ತ ಕೊಂಡೊಯ್ಯಲು ಕೇಂದ್ರ ಸರ್ಕಾರ ಪಣತೊಟ್ಟಿದೆ. ರಾಜ್ಯ ಸರ್ಕಾರ ಇಂತಹ ಜನಪರ ಚಟುವಟಿಕೆಗಳಿಗೆ ಸ್ಪಂದಿಸುವ ಬದಲಾಗಿ ಈ ಹಿಂದೆ ಬಿಜೆಪಿ ಸರ್ಕಾರ ಅಭಿವೃದ್ಧಿ ಕಾರ್ಯಗಳಿಗಾಗಿ ಮೀಸಲಿಟ್ಟಿದ್ದ ಅನುದಾನವನ್ನು ಬಳಸಿಕೊಳ್ಳುತ್ತಿದೆ ಎಂದು ಟೀಕಿಸಿದರು.
ಜಿಲ್ಲೆಯಲ್ಲಿ ಯಾವುದೇ ಪ್ರಗತಿಪರ ಚಟುವಟಿಕೆ ಕಾಣಿಸುತ್ತಿಲ್ಲ. ಬದಲಾಗಿ ಹಳ್ಳಿಗೊಂದು ಇಸ್ಪೀಟ್ ಕ್ಲಬ್, ಮರಳು ದಂಧೆ, ಮರ ದಂಧೆ, ಅಕ್ರಮ ಜಾನುವಾರು ಸಾಗಣೆ, ಚೆತ್‌ಕಲ್ ದಂಧೆ ಹೆಚ್ಚಾಗಿದೆ. 250 ಕೋಟಿ ರೂ.ಅನುದಾನ ತಂದಿದ್ದೇನೆಂದು ಶಾಸಕರು ಸುಳ್ಳು ಹೇಳುವ ಮೂಲಕ ಜನರ ಹಾದಿ ತಪ್ಪಿಸುತ್ತಿದ್ದಾರೆ ಎಂದು ಕೆ.ಜಿ.ಬೋಪಯ್ಯ ಆರೋಪಿಸಿದರು.
ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಮಾತನಾಡಿ, ರಾಜ್ಯ ಸರ್ಕಾರದ ಆಡಳಿತದಲ್ಲಿ ಜನಪರವಾದ ನಿಲುವುಗಳು ಕಾಣುತ್ತಿಲ್ಲ. ಪ್ರತಿ ವಸ್ತುಗಳ ತೆರಿಗೆ ಹೆಚ್ಚಿಸುವ ಮೂಲಕ ಜನವಿರೋಧಿ ಆಡಳಿತ ನಡೆಸುತ್ತಿದೆ. ಅಭಿವೃದ್ಧಿ ಎಂಬುವುದು ಮರೀಚಿಕೆಯಾಗಿದೆ. ಸರ್ಕಾರಿ ನೌಕರರಿಗೆ ವೇತನ ನೀಡಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಸರ್ಕಾರ ಇದೆ ಎಂದು ವ್ಯಂಗ್ಯವಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿಜೆಪಿಯ ವಿರಾಜಪೇಟೆ ಮಂಡಲ ಅಧ್ಯಕ್ಷ ಸುವಿನ್ ಗಣಪತಿ, ಸದಸ್ಯತ್ವ ಅಭಿಯಾನದ ಗುರಿಯನ್ನು ಶೀಘ್ರ ತಲುಪಬೇಕಾಗಿದೆ. ಕಳೆದ ಬಾರಿ ಜಿಲ್ಲೆಯಲ್ಲಿ 58,000 ಸದಸ್ಯತ್ವ ಮಾಡಲಾಗಿತ್ತು. ಈ ಬಾರಿ ಒಂದು ಲಕ್ಷಕ್ಕೂ ಹೆಚ್ಚಿನ ಸದಸ್ಯತ್ವ ಹೊಂದುವ ಮೂಲಕ ಗುರಿ ತಲುಪಬೇಕಾಗಿದೆ ಎಂದರು.
ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ಹಾಗೂ ಎಂ.ಎಂ.ರವೀಂದ್ರ ಮಾತನಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ನೆಲ್ಲೀರ ಚಲನ್ ಕುಮಾರ್, ಕಾರ್ಯದರ್ಶಿ ಗುಮ್ಮಟೀರ ಕಿಲನ್ ಗಣಪತಿ, ಉಪಾಧ್ಯಕ್ಷ ಕುಂಞಂಗಡ ಅರುಣ್ ಭೀಮಯ್ಯ, ತಾಲೂಕು ಮಂಡಲ ಕಾರ್ಯದರ್ಶಿ ಮುದ್ದಿಯಡ ಮಂಜುಗಣಪತಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ, ತಾಲೂಕು ಮಂಡಲ ಕಾರ್ಯದರ್ಶಿ ಕುಟ್ಟಂಡ ಅಜಿತ್ ಕರುಂಬಯ್ಯ ಮತ್ತಿತರರು ಉಪಸ್ಥಿತರಿದ್ದರು.
.