ಅಕ್ರಮ ಕ್ವಾರಿಗಳಿಗೆ ಬ್ರೇಕ್: ಹೊಸ ನೀತಿ ಜಾರಿಗೆ ರಾಜ್ಯ ಸರ್ಕಾರ ಗಂಭೀರ ಚಿಂತನೆ

Mining
Published on

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು

ಕಲ್ಲು ಗಣಿಗಾರಿಕೆಗೆ ಅನುಮತಿ ನೀಡುವ ವಿಚಾರದಲ್ಲಿನ ನಿಧಾನಗತಿಯೇ ಅಕ್ರಮದ ಮೂಲವಾಗಿದ್ದು, ಇದಕ್ಕೆ ತಡೆ ಹಾಕುವ ಉದ್ದೇಶದಿಂದ ಸರ್ಕಾರ ಹೊಸ ನೀತಿಯೊಂದನ್ನು ತರಲು ಮುಂದಾಗಿದೆ. ನೆರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ರಾಜ್ಯದಲ್ಲಿ ನಿಯಮಗಳು ಕಠಿಣವಾಗಿದ್ದರೂ ಅವುಗಳ ಜಾರಿಯಲ್ಲಿ ಅಧಿಕಾರಿಗಳು ಎಡವುತ್ತಿದ್ದಾರೆ. ಹೀಗಾಗಿ ಅಕ್ರಮ ಗಣಿಗಾರಿಕೆ ಹೆಚ್ಚುತ್ತಿವೆ ಎಂಬುದನ್ನು ಸರ್ಕಾರದ ಅಧಿಕಾರಿಗಳೇ ಒಪ್ಪಿಕೊಳ್ಳುತ್ತಾರೆ. ಅಕ್ರಮ ಗಣಿಗಳನ್ನು ಸಕ್ರಮ ಮಾಡುವುದಿಲ್ಲ ಎಂದು ಸಿಎಂ ಯಡಿಯೂರಪ್ಪ ಭಾನುವಾರ ಸ್ಪಷ್ಟಪಡಿಸಿದ್ದಾರೆ. ಆದರೆ, ವಾಸ್ತವದಲ್ಲಿ ಅಕ್ರಮ ಗಣಿಗಳನ್ನು ಸಕ್ರಮ ಮಾಡದೇ ವಿಧಿ ಇಲ್ಲ. ಇಲ್ಲವಾದರೆ ಕೋಟ್ಯಂತರ ರೂ.ಗಳ ನಷ್ಟವಾಗುತ್ತದೆ. ಅದೇ ಕಾರಣಕ್ಕೆ ಸಕ್ರಮ ಮಾಡುವುದಕ್ಕೆ ಹೊಸ ನೀತಿಯನ್ನು ತಂದು ಪರವಾನಗಿ ನೀಡುವುದು ಸೇರಿ ಎಲ್ಲವನ್ನೂ ಸರಳೀಕರಣ ಮಾಡುವುದು ಸರ್ಕಾರದ ಉದ್ದೇಶವಾಗಿದೆ.

ರಾಜ್ಯದಲ್ಲಿ 2014ರಲ್ಲಿಯೇ ಕಲ್ಲು ಗಣಿಗಾರಿಕೆ ಕಾಯ್ದೆ ಜಾರಿಗೆ ತರಲಾಗಿದೆ. ಆದರೂ ಹೊಸ ನೀತಿಯನ್ನು ರೂಪಿಸುವುದಕ್ಕೆ ಸಂಬಂಧಿಸಿ ದಂತೆ ನೆರೆ ರಾಜ್ಯಗಳಲ್ಲಿಯೂ ಏನೇನು ಪರಿಸ್ಥಿತಿ ಇದೆ ಎಂಬುದನ್ನು ಅಧ್ಯಯನ ಮಾಡಲು ಸರ್ಕಾರ ತೀರ್ವನಿಸಿದೆ. ಅದಕ್ಕಾಗಿ ಅಧಿಕಾರಿಗಳ ತಂಡವನ್ನು ಕಳುಹಿಸಿಕೊಡಲಾಗುತ್ತದೆ. ಆದರೆ ಅದರಲ್ಲಿನ ನಿಯಮ ಪಾಲನೆ ಬಗ್ಗೆ ಅಧಿಕಾರಿಗಳು ಗಮನ ಹರಿಸುತ್ತಿಲ್ಲ.

ಕಾರ್ಯಪಡೆ ಏಕೆ ಎಂಬ ಪ್ರಶ್ನೆ: ಅನುಮತಿ ನೀಡುವ ವಿಚಾರದಲ್ಲಿ ಜಿಲ್ಲಾ ಟಾಸ್ಕ್​ಪೋರ್ಸ್​ನ ಅಗತ್ಯ ಏನಿದೆ? ಜಮೀನು ಪರಿವರ್ತನೆಯನ್ನು ಇದೇ ಅಧಿಕಾರಿಗಳೇ ಮಾಡಿರುತ್ತಾರೆ. ಆದ್ದರಿಂದ ಟಾಸ್ಕ್​ಪೋರ್ಸ್ ಬೇಕಾಗಿಲ್ಲ ಎಂಬ ಚರ್ಚೆ ನಡೆದಿತ್ತು. ಆದರೆ ಭೂಗರ್ಭ ಮತ್ತು ಗಣಿ ಇಲಾಖೆಯ ಅಧಿಕಾರಿಗಳು ಟಾಸ್ಕ್​ಪೋರ್ಸ್ ಅಗತ್ಯವನ್ನು ಪ್ರತಿಪಾದಿಸಿದ್ದರು. ಜಿಲ್ಲಾಧಿಕಾರಿ ನೇತೃತ್ವದ ಸಮಿತಿಯಾದರೆ ಭಯ ಇರುತ್ತದೆ. ರಾಜಕಾರಣಿಗಳ ಒತ್ತಡ ಬರುವುದಿಲ್ಲವೆಂಬ ಕಾರಣ ನೀಡಿದ್ದರು. ಆದರೆ ಜಿಲ್ಲಾಧಿಕಾರಿಗಳು ಕಾರ್ಯದೊತ್ತಡದಿಂದ ನಿಧಾನಗತಿ ಅನುಸರಿಸುತ್ತಿದ್ದಾರೆ ಎಂದು ಮೂಲಗಳು ಹೇಳುತ್ತವೆ.

ಕನ್ನಡಿಯೊಳಗಿನ ಗಂಟಾದ 6200 ಕೋಟಿ!: ಕಲ್ಲು ಗಣಿಗಳ ತೆರಿಗೆ ಹಾಗೂ ದಂಡ ಸೇರಿ ಸರ್ಕಾರಕ್ಕೆ 6200 ಕೋಟಿ ರೂ.ಗಳ ಆದಾಯ ಬರಬೇಕೆಂದು ಲೆಕ್ಕ ಹಾಕಲಾಗಿದೆ. ಆದರೆ ಕಲ್ಲು ಗಣಿ ಮಾಲೀಕರು ಮಾತ್ರ ಇದರ ವಿರುದ್ಧ ಸರ್ಕಾರ ಹಾಗೂ ನ್ಯಾಯಾಲಯದಲ್ಲಿ ಹೋರಾಟ ನಡೆಸಿದ್ದಾರೆ. ನಿಯಮಗಳಲ್ಲಿ ಸರ್ಕಾರ ನಿಗದಿ ಮಾಡಿರುವ ತೆರಿಗೆ ಪಾವತಿ ಮಾಡದಿದ್ದರೆ ಅದರ ನಾಲ್ಕು ಪಟ್ಟು ದಂಡ ವಿಧಿಸಲು ಅವಕಾಶ ಇದೆ. ಡ್ರೋನ್ ಮೂಲಕ ಸರ್ವೆ ಮಾಡಿರುವ ಅಧಿಕಾರಿಗಳು ತೆರಿಗೆ ಮತ್ತು ದಂಡ ನಿಗದಿ ಮಾಡಿದ್ದಾರೆ. ಆದರೆ ಗಣಿಗಾರಿಕೆ ನಡೆದಿರುವುದಕ್ಕೆ ಸಂಬಂಧಿಸಿದಂತೆ ಮಾಲೀಕರು ಆಕ್ಷೇಪ ಎತ್ತಿದ್ದಾರೆ. ಡ್ರೋನ್ ಸರ್ವೆಯೇ ಅವೈಜ್ಞಾನಿಕವಾಗಿದೆ ಎಂಬುದು ಮಾಲೀಕರ ಆಕ್ಷೇಪ. ಇದಕ್ಕೆ ಸಾಕಷ್ಟು ಸಭೆಗಳು ನಡೆದರೂ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಆದ್ದರಿಂದ ಮತ್ತೊಮ್ಮೆ ಡ್ರೋನ್ ಮೂಲಕ ಸರ್ವೆ ಮಾಡಿಸಲು ಸರ್ಕಾರ ಈಗಾಗಲೇ ಆದೇಶ ನೀಡಿದೆ. ಸರ್ವೆ ನಡೆಯುವ ಸಮಯದಲ್ಲಿ ಹಾಜರಿರುವಂತೆ ಮಾಲೀಕರಿಗೂ ಸೂಚನೆ ನೀಡಲಾಗಿದೆ. ಮತ್ತೊಮ್ಮೆ ಸರ್ವೆ ನಡೆದಾಗ ತೆರಿಗೆ ಮತ್ತು ದಂಡ ಎಷ್ಟಾಗಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ರಾಜ್ಯದ ನಿಯಮಗಳಲ್ಲಿ ಏನಿದೆ?

  • ಕ್ವಾರಿಗಳು ರಾಷ್ಟ್ರೀಯ ಹೆದ್ದಾರಿಯಿಂದ 2 ಕಿಮೀ ದೂರ ಇರಬೇಕು
  • ಕ್ವಾರಿಗಳು ರಾಜ್ಯ ಹೆದ್ದಾರಿಯಿಂದ 1.5 ಕಿಮೀ ದೂರ ಇರಬೇಕು
  • ಪಾಲಿಕೆ ವ್ಯಾಪ್ತಿಯಿಂದ 8 ಕಿಮೀ ದೂರ ಇರಬೇಕು
  • ಜಿಲ್ಲಾ ಕೇಂದ್ರದಿಂದ 4 ಕಿಮೀ, ತಾಲೂಕಿನಿಂದ 2 ಕಿಮೀ, ಹಳ್ಳಿಗಳಿಂದ 1 ಕಿಮೀ ದೂರದಲ್ಲಿರಬೇಕು
  • ಧೂಳು ಬಾರದಂತೆ ತಡೆ ಗೋಡೆಗಳಿರಬೇಕು
  • ವಾಯು ಗುಣಮಟ್ಟ ಕಾಪಾಡಬೇಕು

ಲೋಪ ಎಲ್ಲಿ?

ಕ್ರಷರ್​ಗಳಿಗೆ ಅನುಮತಿ ನೀಡುವಲ್ಲಿ ಬಂಡೆ ಇರಲೇಬೇಕೆಂಬ ನಿಯಮವಿಲ್ಲ. ಕ್ರಷರ್ ಮತ್ತು ಬಂಡೆ ಬೇರೆ ಬೇರೆ ಕಡೆ ಇದ್ದರೂ ಅನುಮತಿ ನೀಡಲಾಗುತ್ತಿದೆ. ಬಂಡೆ ಇರುವ ಜಾಗವನ್ನು ಕ್ರಷರ್ ಮಾಲೀಕರು ಖರೀದಿ ಮಾಡಿದ ನಂತರ ಅದನ್ನು ವಾಣಿಜ್ಯ ಉದ್ದೇಶಕ್ಕೆ ಬದಲಾವಣೆ ಮಾಡಿಕೊಡುವುದು ಜಿಲ್ಲಾಧಿಕಾರಿ ಹಾಗೂ ಸಹಾಯಕ ಆಯುಕ್ತರ ಕಾರ್ಯ. ಆದರೂ ಅನುಮತಿಗೆ ಮತ್ತೆ ಜಿಲ್ಲಾಧಿಕಾರಿ ನೇತೃತ್ವದ ಜಿಲ್ಲಾ ಟಾಸ್ಕ್​ಪೋರ್ಸ್​ಗಳ ಮುಂದೆ ಬರಬೇಕಾಗಿದೆ. 45 ದಿನಗಳಲ್ಲಿ ಟಾಸ್ಕ್​ಪೋರ್ಸ್ ಪರವಾನಗಿ ನೀಡುವ ಅಥವಾ ತಿರಸ್ಕರಿಸುವ ತೀರ್ಮಾನ ನೀಡಬೇಕೆಂಬ ನಿಯಮವನ್ನು ಯಾವ ಜಿಲ್ಲೆಗಳ ಟಾಸ್ಕ್​ಪೋರ್ಸ್​ಗಳು ಪಾಲಿಸುತ್ತಿಲ್ಲ. ಇದರಿಂದ ಅಕ್ರಮಗಳು ಹೆಚ್ಚಾಗಿವೆ. ಅಧಿಕಾರಿಗಳು ಕಂಡೂಕಾಣದಂತೆ ಇದ್ದಾರೆ. ಸ್ಪೋಟಗಳನ್ನು ಸಂಜೆ 5 ರಿಂದ 7 ಗಂಟೆಯೊಳಗೆ ಮಾತ್ರ ಮಾಡಬೇಕೆಂಬ ನಿಯಮವೂ ಇದೆ. ಯಾವ ರೀತಿಯ ಸ್ಫೋಟ ನಡೆಸಬೇಕು ಎಂಬ ಮಾಹಿತಿ ಇದೆ.

ನೀತಿ ತರುವ ಉದ್ದೇಶ

  • ಪರವಾನಗಿ ನೀಡಿಕೆ ಸರಳೀಕರಣ ಮಾಡುವುದು
  • ಟಾಸ್ಕ್​ಪೋರ್ಸ್​ಗಳಿಗೂ ಸಮಯ ನಿಗದಿ
  • ಅಕ್ರಮಗಳು ನಡೆಯದಂತೆ ಎಚ್ಚರವಹಿಸುವುದು
  • ಕಲ್ಲು ಗಣಿಗಳಿಂದ ಬರುವ ತೆರಿಗೆ ಹೆಚ್ಚಳ ಮಾಡಿಕೊಳ್ಳುವುದು
  • ಅಕ್ರಮ ಗಣಿಗಳನ್ನು ಸಕ್ರಮ ಮಾಡುವುದು
  • ಗಣಿಗಾರಿಕೆ ಪ್ರದೇಶದಲ್ಲಿ ಹಸಿರೀಕರಣಕ್ಕೆ ಒತ್ತು ನೀಡುವುದು
  • ಕ್ವಾರಿ ಮತ್ತು ಕ್ರಷರ್ ಒಂದೇ ಕಡೆ ಇರುವಂತೆ ನೋಡಿಕೊಳ್ಳುವುದು

ಕಲ್ಲು ಗಣಿಗಾರಿಕೆ ಸಂಬಂಧ ಅಕ್ಕಪಕ್ಕದ ರಾಜ್ಯಗಳಲ್ಲಿ ನಿಯಮಗಳು ಏನಿವೆ ಎಂಬುದನ್ನು ಅಧ್ಯಯನ ಮಾಡಿ ಅಕ್ರಮಗಳು ನಡೆಯದಂತೆ ಹೊಸ ನೀತಿ ತರುತ್ತೇವೆ. ತೆರಿಗೆಯನ್ನು ಹೆಚ್ಚಿಸಿಕೊಳ್ಳುವ ಕಡೆ ಗಮನ ಹರಿಸುತ್ತೇವೆ. | ಮುರುಗೇಶ ನಿರಾಣಿ ಗಣಿ ಸಚಿವ

ಇಲಾಖೆಯಲ್ಲಿ ಸಿಬ್ಬಂದಿ ಕೊರತೆ

ಗಣಿ ಇಲಾಖೆ ಸಿಬ್ಬಂದಿ ಕೊರತೆ ಎದುರಿಸುತ್ತಿದೆ. ಯಾವ ಜಿಲ್ಲೆಯಲ್ಲೂ ಸಾಕಷ್ಟು ಸಿಬ್ಬಂದಿ ಇಲ್ಲ. ಆದ್ದರಿಂದ ಅಕ್ರಮ ತಡೆಗೆ ಪೊಲೀಸ್ ಮತ್ತು ಕಂದಾಯ ಇಲಾಖೆಯ ನೆರವನ್ನು ಪಡೆಯಬೇಕಾಗಿದೆ. ಆದರೆ ಇಲಾಖೆಗಳ ನಡುವೆ ಸಮನ್ವಯದ ಕೊರತೆ ಇದೆ.

ಅಕ್ರಮ ಗಣಿಗಾರಿಕೆ ನಿಲ್ಲಿಸಲು ಡಿಸಿಗಳಿಗೆ ಸಿಎಂ ಸೂಚನೆ

ಶಿವಮೊಗ್ಗ: ರಾಜ್ಯದ ಹಲವೆಡೆ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯನ್ನು ತಕ್ಷಣ ನಿಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸಿಎಂ ಯಡಿಯೂರಪ್ಪ ಸೂಚನೆ ನೀಡಿದ್ದಾರೆ. ಅಕ್ರಮ ಗಣಿಗಾರಿಕೆಗೆ ಬೆಂಬಲವಿಲ್ಲ. ಆದರೆ ಅಕ್ರಮ ಕ್ರಷರ್ ಮಾಲೀಕರು ಡಿಸಿಗಳಿಗೆ ಅರ್ಜಿ ಸಲ್ಲಿಸಬೇಕೆಂದು ಸ್ಪಷ್ಟಪಡಿಸಿದ್ದಾರೆ. ಅಕ್ರಮ ಗಣಿಗಾರಿಕೆಯನ್ನು ಸಕ್ರಮಗೊಳಿಸುವುದಿಲ್ಲ. ಗಣಿಗಾರಿಕೆ ನಡೆಸುತ್ತಿರುವವರು ಪರವಾನಗಿಗೆ ಅರ್ಜಿ ಸಲ್ಲಿಸಿದ ಬಳಿಕ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಕಾನೂನು ಚೌಕಟ್ಟಿನಲ್ಲಿ ಅನುಮತಿ ನೀಡಬಹುದು. ರಾಜ್ಯದೆಲ್ಲೆಡೆ ಅಕ್ರಮ ಗಣಿಗಾರಿಕೆ ಸಮಸ್ಯೆ ಇದೆ. ಮಂಡ್ಯದ ಬೇಬಿ ಬೆಟ್ಟದಲ್ಲಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆಯಿಂದ ಕೆಆರ್​ಎಸ್ ಜಲಾಶಯಕ್ಕೆ ಧಕ್ಕೆಯಾಗುವ ಅಪಾಯವಿತ್ತು. ಹಾಗಾಗಿ ಅಲ್ಲಿನ ಗಣಿಗಾರಿಕೆಯನ್ನು ಸಂಪೂರ್ಣ ನಿಲ್ಲಿಸಲು ಸೂಚಿಸಲಾಗಿದೆ. ಅಭಿವೃದ್ಧಿ ಕಾರ್ಯಗಳಿಗೆ ಜಲ್ಲಿ ಬೇಕು. ಹಾಗಾಗಿ ಕಾನೂನು ಚೌಕಟ್ಟಿನಲ್ಲಿ ಜಲ್ಲಿ ಸರಬರಾಜಿಗೆ ಕ್ರಮ ಕೈಗೊಳ್ಳಬೇಕು. ಸಾಂಪ್ರದಾಯಿಕವಾಗಿ ಕಲ್ಲುಗಳನ್ನು ಒಡೆದು ಜಲ್ಲಿ ಮಾಡುವವರಿಗೆ ತೊಂದರೆಯಾಗಬಾರದು. ಅಕ್ರಮ ಗಣಿಗಾರಿಕೆ ನಡೆದರೆ ಸಂಬಂಧಪಟ್ಟ ಅಧಿಕಾರಿಗಳೇ ಜವಾಬ್ದಾರರು ಎಂದು ಸಿಎಂ ಎಚ್ಚರಿಕೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net