

ಹಲಗೂರು : ರಾಜ್ಯ ಸರ್ಕಾರ ಸಹಕಾರ ನೀಡಿದರೆ ಜಿಲ್ಲೆಯಲ್ಲಿ ಕೈಗಾರಿಕೆಗಳನ್ನು ಸ್ಥಾಪನೆ ಮಾಡಿ ನಿರುದ್ಯೋಗಿಗಳಿಗೆ ಕೆಲಸ ನೀಡುವ ನಿಟ್ಟಿನಲ್ಲಿ ನಿಮ್ಮ ಋಣ ತೀರಿಸುವ ಕೆಲಸ ಮಾಡುತ್ತಿದ್ದೆ. ಆದರೆ ರಾಜ್ಯ ಸಹಕಾರ ನೀಡುತ್ತಿಲ್ಲ ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.
ಮದ್ದೂರು ರಸ್ತೆಯಲ್ಲಿರುವ ಹಲಗೂರು ಪ್ರೌಢಶಾಲಾ ವಿದ್ಯಾಸಂಸ್ಥೆಯ ಆವರಣದಲ್ಲಿ ಕ್ರಿಯಾಶೀಲ ಆಸ್ಪತ್ರೆ ಬೆಂಗಳೂರು, ಕೆಂಪೇಗೌಡ ವೈದ್ಯಕೀಯ ಮಹಾವಿದ್ಯಾಲಯ ಬೆಂಗಳೂರು, ವಿಕ್ಟೋರಿಯಾಸ್ಪತ್ರೆ ಬೆಂಗಳೂರು ಇವರ ಸಹಯೋಗದೊಂದಿಗೆ ಆಯೋಜಿಸಿದದ ಬೃಹತ್ ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಂದು ಜಿಲ್ಲೆಯಲ್ಲೂ ಕಾರ್ಖಾನೆಗಳನ್ನು ಸ್ಥಾಪಿಸಿ ನಿರುದ್ಯೋಗಿಗಳಿಗೆ ಕೆಲಸ ಕೊಡುವ ನಿಟ್ಟಿನಲ್ಲಿ ನಾನು ಕರ್ತವ್ಯ ನಿರ್ವಹಿಸಬೇಕಾಗಿತ್ತು. ಆದರೆ ರಾಜ್ಯ ಸರ್ಕಾರ ಸಹಕಾರ ನೀಡುತ್ತಿಲ್ಲ. ದೇಶದಲ್ಲಿ ದುಡ್ಡಿನ ಸಮಸ್ಯೆ ಇಲ್ಲ. ಅದನ್ನು ಸರಿಯಾಗಿ ವಿನಿಯೋಗ ಮಾಡುತ್ತಿಲ್ಲ. ರಾಜ್ಯ ಸರ್ಕಾರ ಬೆಲೆ ಏರಿಕೆ ಮಾಡಿದರೂ ಹೋರಾಟ ಮಾಡದೆ ಕುಳಿತಿರುವುದು ಸರಿಯಲ್ಲ. ರೈತರಿಗೆ ಹಾಗೂ ವಂಚನೆ ಮಾಡಿದ ವ್ಯಕ್ತಿಗಳಿಗೆ ಬೆಂಬಲ ನೀಡುವ ರಾಜ್ಯ ಸರ್ಕಾರಕ್ಕೆ ತಕ್ಕ ಪಾಠ ಕಲಿಸಬೇಕಾಗಿದೆ ಎಂದರು.
ಐದು ವರ್ಷ ಸಂಪೂರ್ಣವಾಗಿ ಆಡಳಿತ ನಡೆಸಲು ಸರ್ಕಾರ ಕೊಟ್ಟಿದ್ದರೆ ರಾಜ್ಯವನ್ನು ರಾಮರಾಜ್ಯ ಮಾಡುತ್ತಿದ್ದೆ. ಪ್ರತಿ ಹೋಬಳಿಯಲ್ಲಿ 20 ಹಾಸಿಗೆಗಳ ಒಂದು ಸುಸಜ್ಜಿತ ಆಸ್ಪತ್ರೆ, ಸುಸಜ್ಜಿತ ಶಾಲೆ, ರೈತರಿಗೆ ಶಕ್ತಿ ತುಂಬಲು ವೈಜ್ಞಾನಿಕ ಪದ್ಧತಿಯಲ್ಲಿ ಬೆಳೆ ಬೆಳೆಯಲು ಅನುಕೂಲ, ಯುವಕರಿಗೆ ಉದ್ಯೋಗ ಸೃಷ್ಟಿ ಮಾಡಲು ನನಗೆ ಅವಕಾಶ ನೀಡಿ ಎಂದು ಕೇಳಿದೆ. ಆದರೆ ಜನ ಅರ್ಥ ಮಾಡಿಕೊಳ್ಳಲಿಲ್ಲ. ಆಶ್ರಯ ಯೋಜನೆಯಲ್ಲಿ ಮನೆ ಪಡೆಯಲು ಫಲಾನುಭವಿಗಳು ಸರ್ಕಾರಕ್ಕೆ 12 ಸಾವಿರ ರೂ. ಲಂಚ ನೀಡಬೇಕು. ಇಂತಹ ಸರ್ಕಾರ ನಿಮಗೆ ಬೇಕೆ? ಹೀಗಾದರೆ ಆಡಳಿತ ಹೇಗೆ. ಮುಂದಿನ ದಿನಗಳಲ್ಲಿ ನಿಮಗೆ ಕಷ್ಟ ತಿಳಿಯುತ್ತದೆ ಎಂದರು.
ನೀವು ಬುದ್ಧಿವಂತರಾಗಿ. ನಮಗೆ ಬೇಕಾಗಿರುವುದು ಸ್ವಾಭಿಮಾನದ ಬದುಕು. ದೇವೇಗೌಡರ ಕಾಲದಲ್ಲಿ ವೃದ್ಧರಿಗೆ, ಅಂಗವಿಕಲರಿಗೆ, ವಿಧವೆಯರಿಗೆ 200 ರೂ. ಮಾಸಾಶನ ನೀಡುತ್ತಿದ್ದು, ನಾನು ಸಿಎಂ ಆಗಿದ್ದಾಗ ಒಂದು ಸಾವಿರ ರೂ. ಗೆ ಹೆಚ್ಚಿಸಿದೆ. ವೋಟಿಗಾಗಿ ಈ ಸರ್ಕಾರ ಗೃಹಲಕ್ಷ್ಮಿ ಹೆಸರಿನಲ್ಲಿ ನಿಮ್ಮ ತೆರಿಗೆ ಹಣವನ್ನು ನಿಮಗೆ ಲಂಚ ನೀಡುತ್ತಿದೆ. ಹಾಲಿಗೆ ಐದು ರೂ. ನೀಡುವ ಪ್ರೋತ್ಸಾಹ ಧನ ಎಷ್ಟು ತಿಂಗಳಿನಿಂದ ಬಾಕಿ ಇದೆ. ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನಿಲ್ಲಿಸಲಾಗಿದೆ. ಈ ರೀತಿಯ ಸರ್ಕಾರದ ನಡವಳಿಕೆಯಿಂದ ಬೇಸತ್ತು ಎಷ್ಟು ಗುತ್ತಿಗೆದಾರರು, ಸರ್ಕಾರಿ ನೌಕರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದರು.
ಭಯ ಭಕ್ತಿ ಇಲ್ಲದೆ ಜನರಿಗೆ ಟೋಪಿ ಹಾಕುವ, ಮೋಸಗಾರರು ರಕ್ಷಣೆಗೆ ಇರುವಂತ ಸರ್ಕಾರ ಬೇಕೆ. ಐದು ಗ್ಯಾರಂಟಿಗಳನ್ನು ನೀಡುತ್ತೇವೆ ಎಂದು ಅದಕ್ಕೆ ಹಲವು ಷರತ್ತು ಹಾಕಿದರು. ಒಂದು ಮನೆಗೆ 200 ಯೂನಿಟ್ ವಿದ್ಯುತ್ ಉಚಿತ. ಬಳಕೆ ಹೆಚ್ಚಾದರೆ ಪಾವತಿ ಮಾಡಬೇಕು. ರೈತರ ಪಂಪ್‌ಸೆಟ್ ಟಿಸಿ ಕೆಟ್ಟರೇ ಹೊಸದಾಗಿ ಟಿಸಿ ಹಾಕಲು 2.50 ಲಕ್ಷ ರೂ. ಕಟ್ಟಬೇಕು. ಈಗಿನ ಪರಿಸ್ಥಿತಿಯಲ್ಲಿ ರೈತರಿಂದ ಇದು ಸಾಧ್ಯವೇ. ಪೆಟ್ರೋಲ್, ಡೀಸೆಲ್ ಬೆಲೆ ಏರಿಸಿದರು. ಹಾಲಿನ ದರ ಏರಿಕೆ ಈಗ ನೀರಿಗೂ ದರ ಏರಿಸುತ್ತಾರೆ. ಈ ರೀತಿ ಎಲ್ಲಾ ದರ ಏರಿಸಿದರೆ ನಾನು ಕೂಡ ಒಂದು ಮನೆಗೆ ಹತ್ತು ಸಾವಿರ ರೂ. ನೀಡುತ್ತಿದ್ದೆ. ನನ್ನ ಆಡಳಿತ ಅವಧಿಯಲ್ಲಿ 25,000 ಕೋಟಿ ರೂ. ರೈತರ ಸಾಲ ಮನ್ನಾ ಮಾಡಿದೆ. ಅದನ್ನು ಯಾರು ನೆನಪಿಸಿಕೊಳ್ಳಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನನ್ನ ಪಂಚರತ್ನ ಕಾರ್ಯಕ್ರಮದಲ್ಲಿ ತಿಳಿಸಿದಂತೆ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಳ್ಳಿಯ ಮಕ್ಕಳ ಸುಸಜ್ಜಿತ ಶಿಕ್ಷಣಕ್ಕಾಗಿ ಎಲ್‌ಕೆಜಿಯಿಂದ 12ನೇ ತರಗತಿವರೆಗೆ ಒಂದೇ ಆವರಣದಲ್ಲಿ ಇಂಗ್ಲಿಷ್ ಹಾಗೂ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡುವ ಸುಸಜ್ಜಿತ ಶಾಲೆ ತರೆಯುವುದು ನನ್ನ ಕನಸು.ಹಾಗೆಯೇ ಪ್ರತಿ ತಾಲೂಕಿಗೆ ಒಂದರಂತೆ ಮೊಬೈಲ್ ವೈದ್ಯಕೀಯ ತಪಾಸಣೆ ಮತ್ತು ಚಿಕಿತ್ಸಾ ವ್ಯವಸ್ಥೆಯ ಎಲೆಕ್ಟ್ರಿಕ್ ಬಸ್‌ನ ಮುಖಾಂತರ ಪ್ರಾರಂಭಿಸಿ ಪ್ರತಿ ಗ್ರಾಮಗಳಿಗೂ ಸೌಲಭ್ಯ ಸಿಗುವಂತೆ ಮಾಡಲು ಯೋಚಿಸಿದ್ದೇನೆ. ಗ್ರಾಮೀಣ ಪ್ರದೇಶದಲ್ಲಿ ಇಂತಹ ಬೃಹತ್ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಸಿ.ಎಸ್.ಪುಟ್ಟರಾಜು, ಮಾಜಿ ಶಾಸಕರಾದ ಡಾ. ಕೆ. ಅನ್ನದಾನಿ, ಒಕ್ಕಲಿಗರ ಸಂಘದ ಖಜಾಂಜಿ ನೆಲ್ಲಿಗೆರೆ ಬಾಲಕೃಷ್ಣ, ಕಿಮ್ಸ್ ಉಮೇಶ್, ಹಲಗೂರು ವಿದ್ಯಾಸಂಸ್ಥೆಯ ಅಧ್ಯಕ್ಷ ಎಚ್.ಎಂ.ಆನಂದ್ ಕುಮಾರ್, ದಸ್ಯರು, ಹಾಗೂ ಮುಖಂಡರಾದ ಕಂಸಾಗರದ ರವಿ, ವಿಶ್ವನಾಥ, ಜೆಡಿಎಸ್ ಜಿಲ್ಲಾಧ್ಯಕ್ಷ ರಮೇಶ್, ಪುಟ್ಟಸ್ವಾಮಿ, ಪುಟ್ಟರಾಮು, ಜಯಸಿಂಹ, ನಂದನ, ಕೆ.ಸಿ.ಗೌಡ, ನಿತ್ಯಾನಂದ, ಜಯರಾಮ್ ಸೇರಿದಂತೆ ಇತರರು ಇದ್ದರು.