ಎಂಪಿ ಎಲೆಕ್ಷನ್ ಆಗುವಷ್ಟರಲ್ಲಿ ರಾಜ್ಯ ಸರ್ಕಾರ ಢಮಾರ್

30 tth 01 (1)
ಬಿಜೆಪಿ ಆಯೋಜಿಸಿದ್ದ ಮಹಾಶಕ್ತಿ ಕೇಂದ್ರಗಳ ಮಟ್ಟದ ಮುಖಂಡರು ಮತ್ತು ಕಾರ್ಯಕರ್ತರ ಸಭೆಯಲ್ಲಿ ಆರಗ ಜ್ಞಾನೇಂದ್ರ ಮಾತನಾಡಿದರು. ರಾಘವೇಂದ್ರ ನಾಯಕ್, ನವೀನ್ ಹೆದ್ದೂರು ಇತರರಿದ್ದರು.
Published on

ತೀರ್ಥಹಳ್ಳಿ: ಜನರಿಗೆ ಕುಡಿಯಲು ನೀರಿಲ್ಲದ ಸಂಕಷ್ಟದ ಸಂದರ್ಭದಲ್ಲಿ ಯಥೇಚ್ಛ ಹೆಂಡದ ಅಂಗಡಿಗಳನ್ನು ತೆರೆಯುವ ಮೂಲಕ ಜನರಿಗೆ ಮದ್ಯ ಕುಡಿಸಲು ರಾಜ್ಯ ಸರ್ಕಾರ ಹೊರಟಿದೆ. ಈ ಸರ್ಕಾರ ಮುಂಬರುವ ಲೋಕಸಭಾ ಚುನಾವಣೆವರೆಗೆ ಉಳಿಯುವ ಸಾಧ್ಯತೆಯೂ ಇಲ್ಲ ಎಂದು ಶಾಸಕ ಆರಗ ಜ್ಞಾನೇಂದ್ರ ಟೀಕಿಸಿದರು.

ಮುಂಬರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪೂರ್ವಭಾವಿ ಸಿದ್ಧತೆಗಾಗಿ ಶುಕ್ರವಾರ ಸಂಜೆ ಪಟ್ಟಣದ ವಿಧ್ಯಾಧಿರಾಜ ಸಭಾಭವನದಲ್ಲಿ ಕರೆದಿದ್ದ ಮಹಾಶಕ್ತಿ ಕೇಂದ್ರಗಳ ಮಟ್ಟದ ಮುಖಂಡರು ಮತ್ತು ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ರಾಜ್ಯದ ಜನತೆಗೆ ಸಮರ್ಥ ಆಡಳಿತವನ್ನು ನೀಡಲು ವಿಫಲವಾಗಿರುವ ಸರ್ಕಾರ, 3 ಸಾವಿರ ಜನರಿಗೆ ಒಂದರಂತೆ ಮದ್ಯದ ಅಂಗಡಿಗಳನ್ನು ತೆರೆಯಲು ಹೊರಟಿದೆ. ಮಹಿಳೆಯರಿಗೆ 2 ಸಾವಿರ ರೂ. ನೀಡಿ, ಗಂಡಸರಿಂದ 5 ಸಾವಿರ ರೂ. ವಸೂಲಿ ಮಾಡುವ ಹತಾಶ ಯತ್ನವಾಗಿದೆ ಎಂದು ಲೇವಡಿ ಮಾಡಿದರು.
ಮತ್ತೊಮ್ಮೆ ನರೇಂದ್ರ ಮೋದಿ ಈ ದೇಶದ ಪ್ರಧಾನಿಯಾಗಬೇಕು. ಲೋಕಸಭೆ ಮಾತ್ರವಲ್ಲದೆ ವಿಧಾನ ಪರಿಷತ್ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲೂ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕಿದೆ. ವಿಧಾನಸಭಾ ಚುನವಣೆಯಲ್ಲಿ ಗ್ಯಾರಂಟಿ ಕಾರ್ಡ್ ಹಂಚಿ ಮತದಾರರನ್ನು ವಂಚಿಸಿರುವ ಕಾಂಗ್ರೆಸ್, ಬಿಜೆಪಿಯನ್ನು ಸೋಲಿಸಲು ಮಾಡುವ ತಂತ್ರಗಾರಿಕೆಯನ್ನು ನಿಯಂತ್ರಿಸುವ ಸವಾಲು ನಮ್ಮ ಮುಂದಿದೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಮಾತನಾಡಿ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಕೂಟ ರಾಜ್ಯದ 28 ಸ್ಥಾನಗಳನ್ನು ಗೆಲ್ಲುವುದು ಖಚಿತ. ಆದರೆ ನರೇಂದ್ರ ಮೋದಿ ಅವರನ್ನು ನಿಯಂತ್ರಿಸಲು ಕಾಂಗ್ರೆಸ್ ಗ್ಯಾರಂಟಿ ಕಾರ್ಡಿನ ರೀತಿ ಮತದಾರರನ್ನು ಮರಳು ಮಾಡುವ ಸಾಧ್ಯತೆಯಿದೆ. ಬಿಜೆಪಿಯಲ್ಲಿ ಕೆಲಸ ಮಾಡದ ಕಾರ್ಯಕರ್ತರನ್ನು ಮೂಲೆಗೆ ಸೇರಿಸಿ ಎಂದರು.
ಬಿಜೆಪಿ ತಾಲೂಕು ಅಧ್ಯಕ್ಷ ರಾಘವೇಂದ್ರ ನಾಯಕ್, ಜಿಲ್ಲಾ ಕಾರ್ಯದರ್ಶಿ ನವೀನ್ ಹೆದ್ದೂರು, ಪಟ್ಟಣ ಮಹಾಶಕ್ತಿ ಕೇಂದ್ರದ ಟಿ.ಎನ್.ಅನಿಲ್, ಪ್ರಮುಖರಾದ ಬೇಗುವಳ್ಳಿ ಕವಿರಾಜ್, ಕೆ.ನಾಗರಾಜ ಶೆಟ್ಟಿ, ಸಂದೇಶ್ ಜವಳಿ, ಸೊಪ್ಪುಗುಡ್ಡೆ ರಾಘವೇಂದ್ರ, ಗೀತಾಶೆಟ್ಟಿ, ಮಧುರಾಜ್ ಹೆಗ್ಡೆ ತೂದೂರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net