

ಯಳಂದೂರು : ಕಳೆದ ವರ್ಷ ಯಳಂದೂರು ಕ್ಷೇತ್ರಕ್ಕೆ 25 ಕೋಟಿ ರೂ. ವಿಶೇಷ ಅನುದಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದರು. ಈ ಬಾರಿಯೂ ಮುಖ್ಯಮಂತ್ರಿಗಳು ಇದಕ್ಕಿಂತಲೂ ಹೆಚ್ಚು ಅನುದಾನವನ್ನು ನೀಡುವ ಭರವಸೆ ಇದೆ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ತಿಳಿಸಿದರು.
ಪಟ್ಟಣದ ಆಡಳಿತ ಸೌಧದ ಮುಂಭಾಗ ತಾಲೂಕು ಆಡಳಿತದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕೆಂಪೇಗೌಡರು ಬೆಂಗಳೂರಿನ ನಿರ್ಮಾತೃ ಆಗಿದ್ದು. ಇವರ ಅವಧಿಯಲ್ಲಿ 64 ಪೇಟೆಗಳು ನಿರ್ಮಾಣವಾಗಿತ್ತು. ಎಲ್ಲ ಸಮುದಾಯದ ಜನರಿಗೂ ಇದರಿಂದ ಅನುಕೂಲವಾಗಿತ್ತು. ಇದು ಕೆಂಪೇಗೌಡರ ದೂರದೃಷ್ಟಿಯಾಗಿತ್ತು. ಅವರು ಹಾಕಿಕೊಟ್ಟ ಅಡಿಪಾಯದಲ್ಲೇ ಇಂದು ರಾಜ್ಯ ಸರ್ಕಾರ ಕೆಲಸ ಮಾಡುತ್ತಿದೆ. ನಾನು ಕೂಡ ನನ್ನ ಕ್ಷೇತ್ರದಲ್ಲಿ ಎಲ್ಲ ಸಮುದಾಯದ ಜನರಿಗೂ ಅನುಕೂಲ ಮಾಡಿಕೊಟ್ಟಿದ್ದೇನೆ. ಎಲ್ಲ ಸಮುದಾಯ ಭವನಗಳಿಗೆ ಜಾತಿ, ಧರ್ಮದ ಭೇದವಿಲ್ಲದೆ ಅನುದಾನ ನೀಡಿದ್ದೇನೆ. ಒಕ್ಕಲಿಗರ ಸಮುದಾಯ ಭವನ, ರಸ್ತೆ, ಚರಂಡಿ ಅಭಿವೃದ್ಧಿಗೆ ಗುಂಬಳ್ಳಿ, ದಾಸನಹುಂಡಿ, ಗಂಗವಾಡಿ, ಬನ್ನಿಸಾರಿಗೆ, ನವಿಲೂರು, ಹೊಂಗನೂರು, ವಡಗೆರೆ, ಸೇರಿದಂತೆ ಇತರೆ ಗ್ರಾಮಗಳಿಗೆ ಒಟ್ಟು 2.20 ಕೋಟಿ ರೂ. ಅನುದಾನ ನೀಡಿದ್ದೇನೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಗ್ರಾಮಗಳಿಗೂ ನೀಡಲಾಗುವುದು ಎಂದು ತಿಳಿಸಿದರು.
ನಮ್ಮ ಕ್ಷೇತ್ರಕ್ಕೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ 120 ಕೋಟಿ ರೂ. ನೀರಾವರಿ ಯೋಜನೆಗಳನ್ನು ನೀಡಿದ್ದಾರೆ. ಹಿರಿಕೆರೆ ಅಭಿವೃದ್ಧಿಗೆ 15 ಕೋಟಿ ರೂ. ನೀಡಿದ್ದು ಇವರನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳುತ್ತೇನೆ ಎಂದು ನುಡಿದರು.
ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಎಸ್. ರೇಚಣ್ಣ ಮುಖ್ಯ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ನೂತನ ತಹಸೀಲ್ದಾರ್ ಆಗಿ ಬಂದಿರುವ ಎಸ್.ಎಲ್. ನಯನಾ, ಕೊಳ್ಳೇಗಾಲದ ತಹಸೀಲ್ದಾರ್ ಬಸವರಾಜು ಅವರನ್ನು ಸನ್ಮಾನಿಸಲಾಯಿತು.
ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಎಸ್. ಲಕ್ಷ್ಮೀ, ಮುಖಂಡ ರಾಜುಗೌಡ, ವೀರಭದ್ರಪ್ಪ, ಗ್ಯಾರಂಟಿ ಯೋಜನೆಗಳ ತಾಲೂಕು ಅಧ್ಯಕ್ಷ ಎಸ್. ಪ್ರಭುಪ್ರಸಾದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್, ನೌಕರರ ಸಂಘದ ಅಧ್ಯಕ್ಷ ಎಂ. ಮಹೇಶ್, ಬಿಇಒ ಎಂ. ಮಾರಯ್ಯ, ಮುಖ್ಯಾಧಿಕಾರಿ ಎಂ.ಪಿ. ಮಹೇಶ್‌ಕುಮಾರ್, ಪಿಎಸ್‌ಐ ಆಕಾಶ್ ಒಕ್ಕಲಿಗರ ಸಂಘದ ಕೊಳ್ಳೇಗಾಲ, ಹನೂರು, ಯಳಂದೂರು ಅಧ್ಯಕ್ಷ ಕೆ.ಸಿ. ಮಾದೇಶ್ ಉಪಾಧ್ಯಕ್ಷ ವಿ. ಸೋಮೇಶ್, ರಾಜೇಂದ್ರ, ರವಿ, ಸಿದ್ದೇಗೌಡ, ಶ್ರೀನಿವಾಸ, ಶಂಕರ್, ಪ್ರಕಾಶ್ ಸೇರಿದಂತೆ ಅನೇಕರು ಇದ್ದರು.