

ಬೆಂಗಳೂರು:ಅನ್ನಭಾಗ್ಯಕ್ಕೆ ಯೋಜನೆಗೆ ಅಕ್ಕಿ ಕೊಡುವುದಾಗಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿ ಎರಡು ತಿಂಗಳು ಕಳೆಯುತ್ತಿದ್ದರೂ ರಾಜ್ಯ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ.
ರಾಜ್ಯಕ್ಕೆ ಪ್ರತಿ ತಿಂಗಳು ಕೆಜಿಗೆ 28 ರೂ.ನಂತೆ 2.36 ಲಕ್ಷ ಮೆಟ್ರಿಕ್ ಟನ್ ಅಕ್ಕಿಯನ್ನು 2025ರ ಮಾರ್ಚ್ವರೆಗೆ ವಿತರಿಸಲು ಕೇಂದ್ರ, ಜು.2ರಂದು ಆದೇಶ ಹೊರಡಿಸಿತ್ತು. ಈ ಬಗ್ಗೆ ಆ.2ರಂದು ಭಾರತೀಯ ಆಹಾರ ನಿಗಮ (ಎಫ್ಸಿಐ) ಒಪ್ಪಿಗೆ ಕೊಟ್ಟು 25 ದಿನ ಕಳೆದರೂ ಅಕ್ಕಿ ಖರೀದಿ ಪ್ರಕ್ರಿಯೆ ಸಂಬಂಧ ರಾಜ್ಯ ಸರ್ಕಾರ, ಸಚಿವ ಸಂಪುಟದಲ್ಲಿ ವಿಷಯವನ್ನೇ ಪ್ರಸ್ತಾಪಿಸಿಲ್ಲ. ಆಹಾರ ಇಲಾಖೆಯಿಂದಲೂ ಎಫ್ಸಿಐಗೆ ಈವರೆಗೆ ಯಾವುದೇ ಸೂಚನೆಯೂ ಬಂದಿಲ್ಲ. ಇದರಿಂದಾಗಿ ಅನ್ನಭಾಗ್ಯ ಯೋಜನೆ ಅಕ್ಕಿ ಖರೀದಿಸುವ ಪ್ರಕ್ರಿಯೆಗೆ ವಿಳಂಬವಾಗುತ್ತಿದೆ.
ಸಿದ್ದರಾಮಯ್ಯ ಸಿಎಂಯಾಗಿ ಪ್ರಮಾಣವಚನ ಸ್ವೀಕರಿಸಿದ್ದ ತಕ್ಷಣವೇ ಅನ್ನಭಾಗ್ಯ ಸೇರಿ ಐದು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದರು. ಬಳಿಕ ಮತದಾರರಿಗೆ ಕೊಟ್ಟಿರುವ ಭರವಸೆ ಈಡೇರಿಸುವ ನಿಟ್ಟಿನಲ್ಲಿ ಅಕ್ಕಿ ನೀಡುವಂತೆ ಕೇಂದ್ರದ ಬಳಿ ಅಂಗಲಾಚಿದ್ದರು. ವಿವಿಧ ರಾಜ್ಯಗಳ ಸಿಎಂಗೆ ಮನವಿ ಸಲ್ಲಿಸಿದ್ದರು. ಸಾಕಷ್ಟು ಪ್ರಯತ್ನಪಟ್ಟರೂ ಕಾಂಗ್ರೆಸ್ ಸರ್ಕಾರಕ್ಕೆ ಅಕ್ಕಿ ಸಿಗಲಿಲ್ಲ. ಇದಕ್ಕಾಗಿ ಕೇಂದ್ರ-ರಾಜ್ಯಗಳ ನಡುವೆ ಅಕ್ಕಿಗಾಗಿ ದೊಡ್ಡ ಜಟಾಪಟಿಯೂ ನಡೆಯಿತು. ಅಂತಿಮವಾಗಿ ಬಿಪಿಎಲ್, ಅಂತ್ಯೋದಯ ಕಾರ್ಡ್ದಾರರಿಗೆ ಯೋಜನೆಯಡಿ ಅಕ್ಕಿ ಬದಲು ನಗದು ವರ್ಗಾವಣೆ ವ್ಯವಸ್ಥೆಯನ್ನು ಸರ್ಕಾರ, 2023ರ ಜು.10ರಿಂದ ಜಾರಿಗೆ ತರಲಾಯಿತು. ಅಂದಿನಿಂದ ಈವರೆಗೆ ಕಾರ್ಡ್ದಾರರಿಗೆ ಅಕ್ಕಿ ಬದಲು ಹಣ ನೀಡಲಾಗುತ್ತಿದೆ.
ಕರೆ ಸ್ವೀಕರಿಸದ ಸಚಿವ
ಅಕ್ಕಿ ಖರೀದಿಸಲು ವಿಳಂಬವಾಗುತ್ತಿರುವ ಕುರಿತು ಕಾರಣವೇನು ಎಂಬುದರ ಬಗ್ಗೆ ಪ್ರತಿಕ್ರಿಯೆಗಾಗಿ ಸಾಕಷ್ಟು ಬಾರಿ ಕರೆ ಮಾಡಿದರೂ ಆಹಾರ ಇಲಾಖೆ ಸಚಿವ ಕೆ.ಎಚ್.ಮುನಿಯಪ್ಪ ಕರೆ ಸ್ವೀಕರಿಸಲಿಲ್ಲ.
ಅನ್ನಭಾಗ್ಯ ಯೋಜನೆಗೆ ಹೆಚ್ಚುವರಿ ಅಕ್ಕಿ ಕೊಡಲು ಸಿದ್ಧರಿದ್ದೇವೆ. 25 ದಿನ ಕಳೆದರೂ ಆಹಾರ ಇಲಾಖೆಯಿಂದ ಪತ್ರಗಳು ಬಂದಿಲ್ಲ. ದೇಶಾದ್ಯಂತ 327 ಲಕ್ಷ ಮೆಟ್ರಿಕ್ ಟನ್ ರಾಗಿ, 268 ಲಕ್ಷ ಮೆಟ್ರಿಕ್ ಟನ್ ಗೋಧಿ ಸೇರಿ ಒಟ್ಟು 595 ಲಕ್ಷ ಮೆಟ್ರಿಕ್ ಆಹಾರ ಪದಾರ್ಥ ದಾಸ್ತಾನು ಇದೆ. ನಿಗಮ ವ್ಯಾಪ್ತಿಯ ರಾಜ್ಯದ ಗೋ-ದಾ-ಮು-ಗ-ಳಲ್ಲಿ 7.02 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಇದೆ.
|ಬಿ.ಒ.ಮಹೇಶ್ವರಪ್ಪ, ಪ್ರಧಾನ ವ್ಯವಸ್ಥಾಪಕ.
ಎಫ್ಸಿಐ ಕರ್ನಾಟಕ ಶಾಖೆ.