

ಕುಂದಗೋಳ: ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಾಗಿ ಹಣ ಹೊಂದಿಸಲು ಈಗಾಗಲೇ ಕರೆಂಟ್ ಬಿಲ್, ಸ್ಟಾಂಪ್‌ಡ್ಯೂಟಿ, ಹಾಲಿನ ದರ ಹೆಚ್ಚಿಸಿ ಜನಸಾಮಾನ್ಯರು ತೀವ್ರ ಸಮಸ್ಯೆ ಎದುರಿಸುವಂತೆ ಮಾಡಿದೆ. ಈಗ ಪೆಟ್ರೋಲ್ ಹಾಗೂ ಡೀಸೆಲ್ ದರ ಹೆಚ್ಚಳ ಮಾಡಿ ಬಡವರ ಬದುಕು ದುಸ್ತರವಾಗಿಸಿದೆ ಎಂದು ಶಾಸಕ ಎಂ.ಆರ್. ಪಾಟೀಲ ಆರೋಪಿಸಿದರು.
ಬೆಲೆ ಹೆಚ್ಚಳ ಖಂಡಿಸಿ ಪಟ್ಟಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದರಿಂದ ಅನುದಾನ ಸಿಗದೆ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲ. ಎಸ್‌ಸಿ/ಎಸ್‌ಟಿ ಪರ ಇದ್ದೇವೆ ಎಂದು ಹೇಳುವ ಸರ್ಕಾರ ಎಸ್‌ಟಿ ನಿಗಮದಲ್ಲಿ 1.87 ಕೋಟಿ ರೂ. ಲೂಟಿ ಮಾಡಿದೆ ಎಂದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ತಾಲೂಕಿಗೆ 350 ಕೋಟಿ ರೂ. ಅನುದಾನ ತಂದಿದ್ದೇವೆ. ಈಗಿನ ಸರ್ಕಾರದಲ್ಲಿ ನಮಗೆ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಸಿಗುತ್ತಿಲ್ಲ. ಅನುದಾನಕ್ಕಾಗಿ ಆಗ್ರಹಿಸಿ ಕಾಂಗ್ರೆಸ್ ಶಾಸಕರೇ ದಂಗೆ ಏಳುತ್ತಿದಾರೆ ಎಂದರು.
ಬಿಜೆಪಿ ಜಿಲ್ಲಾ ಗ್ರಾಮೀಣ ಪ್ರಧಾನ ಕಾರ್ಯದರ್ಶಿ ಮಾಲತೇಶ ಶ್ಯಾಗೋಟಿ ಮಾತನಾಡಿದರು. ರವಿಗೌಡ ಪಾಟೀಲ, ಪ್ರಕಾಶಗೌಡ ಪಾಟೀಲ, ಸತೀಶ ಪಾಟೀಲ, ಮಂಜುನಾಥ ಹಿರೇಮಠ, ಗಣೇಶ ಕೋಕಾಟೆ, ಡಿ.ವೈ. ಲಕ್ಕನಗೌಡ, ಪ್ರಕಾಶ ಕೂಬಿಹಾಳ, ಭರಮಣ್ಣ ಮುಗಳಿ, ಬಸವರಾಜ ಗಂಗಾಯಿ, ಬಸವರಾಜ ಕೊಪ್ಪದ, ವಿಠ್ಠಲ ಚವ್ಹಾಣ, ಗೋವಿದಂಪ್ಪ ದೊಡ್ಡಮನಿ, ನಾಗರಾಜ ಶಿಬರಗಟ್ಟಿ, ಪ್ರದೀಪ ಕಾಳೆ, ಹರೀಶ ಕೊನೇರಿ ಇತರರಿದ್ದರು.
ಇದಕ್ಕೂ ಮುನ್ನ ಬಿಜೆಪಿ ಕಾರ್ಯಕರ್ತರು ಹುಬ್ಬಳ್ಳಿ-ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿಯಲ್ಲಿ ಸಂಚಾರ ತಡೆದು ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು. ಪರಿಣಾಮ ವಾಹನ ಸವಾರರು ಕೆಲಕಾಲ ತೊಂದರೆ ಅನುಭವಿಸುವಂತಾಯಿತು.