ರಾಜ್ಯ ಸರ್ಕಾರ ದಿವಾಳಿಯಾಗಿದೆ, ಸಿದ್ದರಾಮಯ್ಯ ಯಾವ ಸೀಮೆ ಹಣಕಾಸು ಸಚಿವ: ಮಾಜಿ ಸಚಿವ ಎಚ್. ವಿಶ್ವನಾಥ್

Vishwanath
Published on

ಮೈಸೂರು: ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದ್ದು, ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕಾಗಿ ಪರದಾಡುತ್ತಿದೆ. ಹಾಗಾಗಿ ಗ್ಯಾರಂಟಿ ಯೋಜನೆಗಳಿಗೆ ಮಾಡಿರುವ ವೆಚ್ಚ ಹಾಗೂ ಅದರಿಂದ ಆಗಿರುವ ಅಭಿವೃದ್ಧಿ ಏನು? ಮತ್ತು ರಾಜ್ಯದ ಹಣಕಾಸಿನ ಪರಿಸ್ಥಿತಿ ಕುರಿತು ರಾಜ್ಯ ಸರ್ಕಾರ ಶ್ವೇತಪತ್ರ ಹೊರಡಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಆಗ್ರಹಿಸಿದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದಾಗಿ ಬೇರಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಇದೀಗ ಸರ್ಕಾರಿ ಕಟ್ಟಡಗಳನ್ನು ಸರ್ಕಾರ ಅಡ ಇಡುವ ಪರಿಸ್ಥಿತಿಗೆ ಬಂದಿದೆ. ರಾಜ್ಯದಲ್ಲಿ ಆರ್ಥಿಕ ವ್ಯವಸ್ಥೆ ಸಂಪೂರ್ಣ ದಿಕ್ಕು ತಪ್ಪಿದೆ. ‘ನಾನು 14, 15 ಬಾರಿ ಬಜೆಟ್ ಮಂಡಿಸಿದ್ದೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೊಳ್ಳುತ್ತಾರೆ. ಆದರೆ, ಬಜೆಟ್ ಮಂಡಿಸಿದ ನಂತರ ಬಜೆಟ್‌ಅನ್ನು ಹಿಂತಿರುಗಿ ನೋಡಿದ್ದೀರಾ? ಬಜೆಟ್‌ನಿಂದ ಯಾರಿಗೆ ಏನು ಪ್ರಯೋಜನ ಆಗಿದೆ ಎಂದು ಅವಲೋಕನ ಮಾಡಬೇಕಾಗಿತ್ತು. ಆದರೆ ಅವರು ಆ ಕಾರ್ಯ ಮಾಡಲಿಲ್ಲ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ಗ್ಯಾರಂಟಿಗಳ ಬದಲು ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಗಮನ ಹರಿಸಬೇಕಿತ್ತು. 1 ರಿಂದ 12ನೇ ತರಗತಿವರೆಗೆ ಉಚಿತ ಶಿಕ್ಷಣ ಕೊಡುವ ಕೆಲಸ ಮಾಡಬೇಕಿತ್ತು. ಲಕ್ಷಾಂತರ ರೂಪಾಯಿ ಕೊಟ್ಟು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಮಕ್ಕಳನ್ನು ಸೇರಿಸಿ ಪಾಲಕರು ಪರದಾಡುತ್ತಿದ್ದಾರೆ. ಉಚಿತ ಆರೋಗ್ಯದ ಜತೆಗೆ ಉಚಿತ ಶಿಕ್ಷಣ ನೀಡಬೇಕಿತ್ತು. ಗ್ಯಾರಂಟಿ ಯೋಜನೆಗಳ ಬದಲು ಎಲ್ಲರಿಗೂ ಉಚಿತ ಶಿಕ್ಷಣ ಯೋಜನೆ ಜಾರಿಗೊಳಿಸಲಿ ಎಂದು ಆಗ್ರಹಿಸಿದರು.

ರಾಜ್ಯದ ಸಂಪನ್ಮೂಲ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಾಗಿ ಬಳಕೆಯಾಗುತ್ತಿಲ್ಲ. ಶೇ.70 ರಷ್ಟು ಅನುದಾನವು ವೇತನ, ಸಾರಿಗೆ, ಸರ್ಕಾರ ಪಡೆದ ಸಾಲದ ಬಡ್ಡಿ ತೀರಿಸಲು ಬಳಕೆಯಾಗುತ್ತಿದ್ದು, ಶೇ.30 ರಷ್ಟು ಅನುದಾನ ಮಾತ್ರ ಅಭಿವೃದ್ಧಿ ಕಾರ್ಯಗಳಿಗೆ ಬಳಕೆಯಾಗುತ್ತಿದೆ. ಸರ್ಕಾರದ ಆರ್ಥಿಕ ನೀತಿ ದುರ್ಬಲವಾಗಿ ಅವಿವೇಕತನದಿಂದ ಹಣವನ್ನು ದುಂದುವೆಚ್ಚ ಮಾಡಲಾಗುತ್ತಿದೆ. ಹಲವಾರು ಇಲಾಖೆಗಳಲ್ಲಿ ಇರುವ ಅಧಿಕಾರಿಗಳಿಗೆ ಕೆಲಸ ಇಲ್ಲ. ಹೀಗಿರುವಾರ ಹಲವಾರು ಇಲಾಖೆಗಳಿಗೆ 30 ರಿಂದ 40 ನಿವೃತ್ತ ಅಧಿಕಾರಿಗಳನ್ನು ಸಲಹೆಗಾರರನ್ನಾಗಿ ನೇಮಕ ಮಾಡಿಕೊಳ್ಳಲಾಗಿದ್ದು, ಅವರಿಗೆ 1.50 ರಿಂದ 2 ಲಕ್ಷ ರೂ.ವರೆಗೆ ವೇತನ ನೀಡಲಾಗುತ್ತಿದೆ. ಈ ರಾಜ್ಯದ ಆರ್ಥಿಕ ಸ್ಥಿತಿಗತಿ ಕುರಿತು ಚಿಂತನೆ ಮಾಡದ ನೀವು ಯಾವ ಸೀಮೆಯ ಹಣಕಾಸು ಸಚಿವ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net