

ಅರಸೀಕೆರೆ: ರಾಜ್ಯ ಸರ್ಕಾರ ಆರ್ಥಿಕವಾಗಿ ಸಂಪೂರ್ಣ ದಿವಾಳಿಯಾಗಿದ್ದು, ಕೇಂದ್ರದ ಮೂಲೆ ಗೂಬೆ ಕೂರಿಸವ ಜತೆಗೆ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಮಾಜಿ ಸಚಿವ ಬಂಡೆಪ್ಪ ಕಾಶಂಪೂರ ಹೇಳಿದರು.
ಮಾರುತಿ ನಗರ ಬಡಾವಣೆಯಲ್ಲಿರುವ ಜೆಡಿಎಸ್ ಮುಖಂಡ ಗೊಸೂರು ಗಂಗಾಧರ್ ನಿವಾಸದಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರೊಂದಿಗೆ ಲೋಕಸಭಾ ಚುನಾವಣೆ ಕುರಿತು ಚರ್ಚಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲಾಗದೇ ಪರದಾಡುತ್ತಿದೆ. ತನ್ನ ಲೋಪ ಮರೆಮಾಚಿಕೊಳ್ಳಲು ಬೆಂಗಳೂರಿನ ಮಹಾತ್ಮಾ ಗಾಧೀಜಿ ಪ್ರತಿಮೆ ಎದುರು ಪ್ರತಿಭಟನೆ ಮಾಡುವ ಮೂಲಕ ಎಲ್ಲರಿಗೂ ಟೋಪಿ ಹಾಕಲು ಹೊರಟಿದೆ. ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದ ವೇಳೆ ಕೇಂದ್ರದ ನೆರವಿಗೆ ಕಾಯದೇ 30 ಸಾವಿರ ಕೋಟಿ ರೂ. ರೈತರ ಸಾಲ ಮನ್ನಾ ಮಾಡಿದ್ದರು. ಚುನಾವಣಾ ಅಖಾಡದಲ್ಲಿ ಗ್ಯಾರಂಟಿ ಯೋಜನೆಗಳು ಕೈಕೊಟ್ಟಿದ್ದು ಇದೀಗ ಬರಪರಿಹಾರ, ಚೊಂಬಾಸ್ತ್ರ ಹಿಡಿದು ಕ್ಷುಲ್ಲಕ ರಾಜಕಾರಣ ಮಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಹುಲ್ ಗಾಂಧಿ ನಡುವೆ ನಡೆಯುತ್ತಿರುವ ಚುನಾವಣೆಯಾಗಿದ್ದು ಮತದಾರರು ನೀಡುವ ಒಂದೊಂದು ಮತ ದೇಶದ ಭವಿಷ್ಯ ನಿರ್ಧರಿಸಲಿದೆ. ಕೋಲಾರದಿಂದ ಕರಾವಳಿ, ಬೀದರ್‌ನಿಂದ ಚಾಮರಾಜನಗರದವರೆಗೆ ಎನ್‌ಡಿಎ ಅಭ್ಯರ್ಥಿಗಳು ಜಯಗಳಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕುರುಬ ಸಮುದಾಯದ ಮತಗಳಿಸಲು ಶಾಸಕ ಕೆ.ಎಂ.ಶಿವಲಿಂಗೇಗೌಡ ಹೆಣೆಯುತ್ತಿರುವ ತಂತ್ರಗಾರಿಕೆ ಈ ಬಾರಿ ಫಲಿಸುವುದಿಲ್ಲ. ಇದು ದೇಶದ ಚುನಾವಣೆ ಎನ್ನುವುದು ಅವರಿಗೆ ನೆನಪಿಲ್ಲ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬ ಬಿಳಿಚೌಡಯ್ಯ ಅವರಿಗೆ ಎಲ್ಲ ಸ್ಥಾನಮಾನ ನೀಡಿ ಗೌರವಿಸಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 11 ತಿಂಗಳಾಗಿದ್ದು ಪರಿಷತ್ ಸ್ಥಾನ ಖಾಲಿ ಇರಲಿಲ್ಲವೇ. ಕನಿಷ್ಠ ನಿಗಮ ಮಂಡಳಿಯಲ್ಲಾದರೂ ಅವಕಾಶ ಕಲ್ಪಿಸಬಹುದಿತ್ತು. ಅದನ್ನು ಬಿಟ್ಟು ಕುರುಬ ಸಮುದಾಯಕ್ಕೆ ಅನ್ಯಾಯ ಮಾಡಲಾಗುತ್ತಿದೆ. ಮತದಾರರು ನಂಬುವ ಸ್ಥಿತಿಯಲ್ಲಿ ಇಲ್ಲ ಎಂದರು. ಜೆಡಿಎಸ್ ಮುಖಂಡ ಹೊಸೂರು ಗಂಗಾಧರ್, ಕೆಂಕೆರೆ ಕೇಶವ್, ತಾಪಂ ಮಾಜಿ ಸದಸ್ಯ ಬಸವಲಿಂಗಪ್ಪ, ನಗರಸಭೆ ಸದಸ್ಯ ಈಶ್ವರಪ್ಪ, ರಮೇಶ್, ಗಣೇಶ್, ಮಧು ಮತ್ತಿತರರಿದ್ದರು.