

ಸದೇಶ್ ಕಾರ್ಮಾಡ್ ಮೈಸೂರು
ಮಹಿಳೆಯರನ್ನು ಆರ್ಥಿಕ ಸ್ವಾವಲಂಬಿಗಳನ್ನಾಗಿಸಲು ಪ್ರಾರಂಭಗೊಂಡ ಸ್ತ್ರೀ ಶಕ್ತಿ ಹಾಗೂ ಸ್ವ ಸಹಾಯ ಸಂಘಗಳು ದೇಶದಲ್ಲಿ ಹೊಸ ಆರ್ಥಿಕ ಕ್ರಾಂತಿಯನ್ನೇ ಉಂಟು ಮಾಡಿತು. ಇದೀಗ ಮಹಿಳೆಯರ ಆರ್ಥಿಕ ಪರಿಸ್ಥಿತಿಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಸರ್ಕಾರ ಜಿಲ್ಲೆಯಲ್ಲಿ ‘ಅಕ್ಕ ಕೆಫೆ’ ಪ್ರಾರಂಭಿಸಲು ಸಿದ್ಧತೆ ಕೈಗೊಂಡಿದೆ.
ರಾಜ್ಯದ ವಿವಿಧ ಕಡೆಗಳಲ್ಲಿ ಈಗಾಗಲೇ ‘ಅಕ್ಕ ಕೆಫೆ’ ಪ್ರಾರಂಭಗೊಂಡು ಜನರ ಮೆಚ್ಚುಗೆ ಪಡೆದುಕೊಂಡಿದ್ದು, ಇದೀಗ ಜಿಲ್ಲೆಯಲ್ಲೂ 2 ಅಕ್ಕ ಕೆಫೆ ಸದ್ಯದಲ್ಲಿಯೇ ಪ್ರಾರಂಭಗೊಳ್ಳಲಿದೆ. ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಎರಡು ಕಡೆಗಳಲ್ಲಿ ಈ ಕೆಫೆ ಪ್ರಾರಂಭಗೊಳ್ಳಲಿದ್ದು, ನಂತರ ಬೇಡಿಕೆಗೆ ಅನುಗುಣವಾಗಿ ಸಂಖ್ಯೆಯನ್ನು ಏರಿಸಲು ನಿರ್ಧರಿಸಲಾಗಿದೆ.
ದುಡಿಯುವ ಮಹಿಳೆಯರ ಕೈಗೆ ಕೆಲಸ ನೀಡುವುದರ ಜತೆಗೆ ಜನರಿಗೆ ಶುಚಿ ರುಚಿಯಾದ ಆಹಾರ ದೊರೆಯಬೇಕು ಎಂಬುದು ಅಕ್ಕ ಕೆಫೆಯ ಉದ್ದೇಶವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ನಲ್ಲಿ ಅಕ್ಕ ಕೆಫೆ ಘೋಷಣೆ ಮಾಡಿದ್ದರು. ರಾಜ್ಯದಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯು ರಾಷ್ಟ್ರೀಯ ಜೀವನೋಪಾಯ ಅಭಿಯಾನ ಜತೆಗೂಡಿ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ.
ಎಲ್ಲೆಲ್ಲಿ ಪ್ರಾರಂಭ?: ಮೈಸೂರು-ಮಡಿಕೇರಿ ರಾಷ್ಟ್ರೀಯ ಹೆದ್ದಾರಿಯ ಬೀಜಗನಹಳ್ಳಿ ಗ್ರಾಮ ಪಂಚಾಯಿತಿಯ ಹಾಲಗೆರೆ ಗ್ರಾಮದಲ್ಲಿ ಪ್ರೀಮಿಯಂ ರೆಸ್ಟೋರೆಂಟ್ (ಪ್ರೀಮಿಯಂ) ಹಾಗೂ ಕಂಪಲಾಪುರ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಬಳಿ ಕಿರು ಅಕ್ಕಕೆಫೆ (ಕ್ಲಾಸಿಕ್)ಅನ್ನು ಮೊದಲ ಹಂತದಲ್ಲಿ ತೆರೆಯಲಾಗುವುದು.
ಬೆಟ್ಟದಪುರದ ಶ್ರೀಶಾಂತವಿರಾಮ್ಮ ದೇವಸ್ಥಾನದ ಬಳಿ, ಮೈಸೂರು ತಾಲೂಕು ಮಿನಿ ವಿಧಾನಸೌಧದ ಆವರಣದಲ್ಲಿ ಕಿರು ಅಕ್ಕಕೆಫೆ(ಕ್ಲಾಸಿಕ್) ತೆರೆಯಲು ಸಲ್ಲಿಸಿರುವ ಪ್ರಸ್ತಾಪನೆಗೆ ಅನುಮೋದನೆ ನಿರೀಕ್ಷಿಸಲಾಗುತ್ತಿದೆ. ತಿ.ನರಸೀಪುರ, ಬನ್ನೂರು, ಎಚ್.ಡಿ. ಕೋಟೆ, ನಂಜನಗೂಡು ಪಟ್ಟಣದಲ್ಲೂ ಪ್ರೀಮಿಯಂ ರೆಸ್ಟೋರೆಂಟ್ ತೆರೆಯಲು ಚಿಂತನೆ ನಡೆಸಲಾಗಿದೆ. ಅತಿ ಹೆಚ್ಚಿನ ಕಾರ್ಮಿಕರು ಹಾಗೂ ಜನಸಂದಣಿ ಇರುವ ಪ್ರದೇಶಗಳನ್ನೇ ಆಯ್ಕೆ ಮಾಡುವಂತೆ ಸರ್ಕಾರ ಸೂಚಿಸಿರುವುದರಿಂದ ಹಂತ ಹಂತವಾಗಿ ಸ್ಥಳಗಳನ್ನು ಆಯ್ಕೆ ಮಾಡಿ ಸರ್ಕಾರದ ಅನುಮೋದನೆ ಪಡೆಯಲಾಗುತ್ತದೆ.
ಸರ್ಕಾರದ ಅನುದಾನದಲ್ಲಿ ಕೆಫೆ: ಅಕ್ಕ ಕೆಫೆ ಸ್ಥಾಪನೆಗೆ ಆಯ್ಕೆಯಾಗುವ ಸ್ಥಳ ಹಾಗೂ ಸ್ವಸಹಾಯ ಸಂಘಗಳ ನಡುವೆ ಸರ್ಕಾರ ಒಡಂಬಡಿಕೆ ಮಾಡಿಕೊಳ್ಳುತ್ತದೆ. ಸರ್ಕಾರದ ಅನುದಾನದಲ್ಲೇ ಸಂಪೂರ್ಣ ಮೂಲಸೌಕರ್ಯವನ್ನು ಒದಗಿಸಲಾಗುತ್ತದೆ. ಪ್ರೀಮಿಯಂ ರೆಸ್ಟೋರೆಂಟ್‌ಗೆ ಸರ್ಕಾರ 15 ಲಕ್ಷ ರೂ, ಕ್ಲಾಸಿಕ್ ಕಿರು ಅಕ್ಕ ಕೆಫೆಗೆ 7 ಲಕ್ಷ ರೂ. ನೀಡಲಿದೆ. ಕೆಫೆಯ ನವೀಕರಣ, ನೆಲಹಾಸು, ಗೋಡೆಗಳು ಮತ್ತು ಛಾವಣಿ, ಶೇಖರಣಾ ಕ್ಯಾಬಿನೆಟ್‌ಗಳು, ಕೊಳಾಯಿ ವ್ಯವಸ್ಥೆ, ಸಿಸಿಟಿವಿ ಕ್ಯಾಮೆರಾ, ರಶೀದಿಯಂತ್ರ ಖರೀದಿ, ಪೀಠೋಪಕರಣಗಳು, ಬ್ರ್ಯಾಂಡಿಂಗ್ ವ್ಯವಸ್ಥೆಗೆ ಸರ್ಕಾರ ಅನುದಾನ ನೀಡಲಿದೆ. ಕೆಫೆಗೆ ಬೇಕಾದ ವಸ್ತುಗಳಾದ ಪಾತ್ರೆಗಳು, ಓವನ್ಸ್, ಗ್ಯಾಸ್ ಸಿಲಿಂಡರ್, ಸ್ಟೌವ್, ಮಿಕ್ಸಿ, ಗ್ರೈಂಡರ್, ರೆಫ್ರಿಜರೇಟರ್‌ಗಳನ್ನು ಸ್ವ ಸಹಾಯ ಸಂಘದ ಸದಸ್ಯರು ಖರೀದಿಸಬೇಕು.
ಸದಸ್ಯರಿಂದಲೇ ನಿರ್ವಹಣೆ: ಅಕ್ಕ ಕೆಫೆಯು ಗ್ರಾಹಕರಿಗೆ ಬೆಳಿಗ್ಗೆನಿಂದ ರಾತ್ರಿವರೆಗೆ ಉತ್ತಮ ಗುಣಮಟ್ಟದ ತಿಂಡಿ, ಊಟವನ್ನು ಒದಗಿಸಲಿದ್ದು, ಈ ಕೆಫೆಯನ್ನು ಸಂಪೂರ್ಣ ಮಹಿಳಾ ಸದಸ್ಯರೇ ನಿರ್ವಹಣೆ ಮಾಡಬೇಕು. ಸಂಘದ ಲೇಬಲ್‌ವುಳ್ಳ ಉಡುಪುಗಳನ್ನು ಧರಿಸಿಕೊಂಡು ಅಡುಗೆ ತಯಾರಿಸುವುದು, ಸಪ್ಲೈರ್, ಕ್ಲೀನಿಂಗ್ ಮತ್ತಿತರ ಕಾರ್ಯವನ್ನು ನಿರ್ವಹಿಸಬೇಕು. ಸ್ಥಳೀಯ ಬೇಡಿಕೆಯ ಆಹಾರಗಳು, ರುಚಿಗೆ ಅನುಗುಣವಾಗಿ ಆಹಾರ ತಯಾರಿಕೆಯನ್ನು ಮಾಡಬೇಕು. ಬೆಳಿಗ್ಗೆ ಇಡ್ಲಿ, ವಡೆ, ಖಾರಾಬಾತ್, ಕೇಸರಿಬಾತ್, ಪೊಂಗಲ್, ಮಧ್ಯಾಹ್ನ ಮಿನಿಮಿಲ್ಸ್, ಚಪಾತಿ, ಮುದ್ದೆ ಊಟದ ಮೆನು ಇರುತ್ತದೆ. ಆಯ್ಕೆಗೊಳ್ಳುವ ಸ್ವ ಸಹಾಯ ಸಂಘಗಳಿಗೆ ಸರ್ಕಾರ ಕಾಲ ಕಾಲಕ್ಕೆ ಅಗತ್ಯ ತರಬೇತಿಯನ್ನು ನೀಡಲಿದೆ.
ಗ್ರಾಹಕರಿಗೆ ಶುಚಿ ರುಚಿಯಾದ ಆಹಾರ ನೀಡುವ ಜತೆಗೆ ಸರ್ಕಾರಿ ಸಭೆ, ಸಮಾರಂಭಗಳೊಗೂ ತಿಂಡಿ, ಊಟದ ವ್ಯವಸ್ಥೆಯನ್ನು ಅಕ್ಕ ಕೆಫೆ ಮೂಲಕ ನೀಡಲಾಗುವುದು. ಸರ್ಕಾರ ನಿಗದಿಪಡಿಸಿದ ದರದಂತೆ ಆಹಾರವನ್ನು ಪೂರೈಸಬೇಕಿದೆ. ಈಗಾಗಲೇ ಎರಡು ಮೂರು ಸಂಘಗಳು ಜಿಲ್ಲಾ ಪಂಚಾಯಿತಿಯಲ್ಲಿ ನಡೆದ ಸಭೆಗೆ ಆಹಾರ ಪೂರೈಸಿ ಮೆಚ್ಚುಗೆ ಗಳಿಸಿಕೊಂಡಿದೆ. ಹಾಗಾಗಿ, ಶೀಘ್ರದಲ್ಲೇ ಸ್ವಸಹಾಯ ಸಂಘವನ್ನು ಆಯ್ಕೆ ಮಾಡಿ ಅಕ್ಕಕೆಫೆಯ ಉಸ್ತುವಾರಿ ನೀಡಲು ಉದ್ದೇಶಿಸಲಾಗಿದೆ.
ಸ್ವ ಸಹಾಯ ಸಂಘಗಳ ಆಯ್ಕೆ ಹೇಗೆ?: ಅಕ್ಕ ಕೆಫೆ ಆರಂಭಿಸಲು ಉದ್ದೇಶಿಸುವ ಮಹಿಳಾ ಸ್ವ ಸಹಾಯ ಸಂಘಗಳು ಕಡ್ಡಾಯವಾಗಿ ಎನ್‌ಆರ್‌ಎಲ್‌ಎಂ/ಎನ್‌ಯುಎಲ್‌ಎಂ ನಲ್ಲಿ ನೋಂದಾಯಿತ ಸಂಘವಾಗಿರಬೇಕು, ಪಾಕ ಪರಿಣಿತಿಯಲ್ಲಿ ಆಸಕ್ತಿ ಹೊಂದಿದವರಿಗೆ ಆದ್ಯತೆ ನೀಡಲಾಗುವುದು, ಬಂಡವಾಳ ಹೂಡುವ ಸ್ವ ಸಹಾಯ ಸಂಘಗಳಿಗೆ ಆದ್ಯತೆ ನೀಡಲಾಗುವುದು, ಯಾವುದೇ ಸಂಘ ಹಣಕಾಸು ಸಂಸ್ಥೆಯ ಸಾಲ ಬಾಕಿದಾರರಾಗಿರ ಬಾರದು, ಗುಂಪಿನಲ್ಲಿ ಕನಿಷ್ಠ 5 ರಿಂದ 10 ಸದಸ್ಯರು ಇರಬೇಕು.
ಜಿಲ್ಲೆಯಲ್ಲಿ 4 ಕಡೆಗಳಲ್ಲಿ ಅಕ್ಕ ಕೆಫೆ ತೆರೆಯಲು ರಾಜ್ಯಸರ್ಕಾರಕ್ಕೆ ಸಲ್ಲಿಸಲಾಗಿದೆ. ಈ ಪೈಕಿ ಮೊದಲ ಹಂತದಲ್ಲಿ ಎರಡು ಕಡೆಗಳಲ್ಲಿ ಆರಂಭಿಸಲು ಅನುಮೋದನೆ ದೊರೆತ್ತಿದೆ. ಮಹಿಳಾ ಸ್ವಸಹಾಯ ಸಂಘದ ಸದಸ್ಯರೇ ನಿರ್ವಹಣೆ ಮಾಡುವ ಈ ಕೆಫೆಯಲ್ಲಿ ಗುಣಮಟ್ಟದ, ಶುಚಿಯಾದ ಊಟೋಪಚಾರ ದೊರೆಯಲಿದೆ. ಮಹಿಳೆಯರ ಆರ್ಥಿಕ ಸ್ವಾವಲಂಬನೆಯಲ್ಲಿ ಅಕ್ಕ ಕೆಫೆ ಪ್ರಮುಖ ಪಾತ್ರ ನಿರ್ವಹಿಸಲಿದೆ.
ಕೆ.ಎಂ.ಗಾಯತ್ರಿ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ಜಿಲ್ಲಾ ಪಂಚಾಯಿತಿ
--------------